ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಸಿ. ಪಿ. ರಾಧಾಕೃಷ್ಣನ್ ಸಾಥ್ ನೀಡಿದರು. ನಂತರ ಭವ್ಯ ಮೆರವಣಿಗೆ ಪ್ರಾರಂಭವಾಯಿತು. ಸಮಾರಂಭದಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್‌ನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.
ಧ್ವಜಾರೋಹಣದ ಬೆನ್ನಲ್ಲೇ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪರೇಡ್ ಆರಂಭವಾಯಿತು. ರಾಜಪಥ್ ಕರ್ತವ್ಯಪಥ ಎಂದು ಮರುನಾಮಕರಣಗೊಂಡ ಬಳಿಕ ನಡೆಯುತ್ತಿರುವ 4ನೇ ಗಣರಾಜ್ಯೋತ್ಸವ ಇದಾಗಿದ್ದು, ಪರೇಡ್ ಮೂಲಕ ವಿಶ್ವದ ಮುಂದೆ ದೇಶದ ಶಕ್ತಿ ಕರ್ತವ್ಯಪಥದಲ್ಲಿ ಅನಾವರಣಗೊಳ್ಳುತ್ತಿದೆ.
ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ 150 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ಗಣತಂತ್ರ ದಿನವನ್ನು ಅದೇ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದೆ.
18 ಕವಾಯತುಗಳ ಪ್ರದರ್ಶನ, 13 ಮಿಲಿಟರಿ ಬ್ಯಾಂಡ್‌ಗಳು ಭಾಗಿಯಾಗಲಿವೆ. 2500 ಕಲಾವಿದರು ಸಾಂಸ್ಕೃತಿಕ ಪ್ರದರ್ಶನ ನೀಡಲಿದ್ದಾರೆ. 10,000 ಅತಿಥಿಗಳು ಭಾಗಿಯಾಗಲಿದ್ದಾರೆ. ಪ್ರಾಣಿಗಳ ಪಡೆಯೂ ಮೊದಲ ಬಾರಿ ಸೇರ್ಪಡೆಗೊಳ್ಳಲಿದೆ.
ರಾಷ್ಟ್ರಪತಿ ದೌಪದಿ ಮುರ್ಮು ಧ್ವಜ ಅನಾವರಣ ಮಾಡುವ ವೇಳೆ, ಭಾರತೀಯ ವಾಯುಪಡೆಯ ಅಧಿಕಾರಿ ಪ್ರೈಟ್ ಲೆಫ್ಟಿನೆಂಟ್ ಅಕ್ಷಿತಾ ಧನಕರ ಜೊತೆಗಿರಲಿದ್ದಾರೆ.
ವಂದೇ ಮಾತರಂ ಮತ್ತು ಆತ್ಮನಿರ್ಭರ ಕಲ್ಪನೆಯಲ್ಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೊಗಳು ಕರ್ತವ್ಯಪಥದಲ್ಲಿ ಸಾಗಲಿವೆ. 17 ರಾಜ್ಯಗಳ ಹಾಗೂ 13 ಸಚಿವಾಲಯಗಳ ಪ್ರದರ್ಶನವಿರಲಿವೆ. ಆಪರೇಷನ್ ಸಿಂದೂರದ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಆಗಿರು ವುದರಿಂದ ಈ ಬಾರಿ ಪರೇಡ್‌ನಲ್ಲಿ ಆಪರೇಷನ್ ಸಿಂದೂರ್: ವಿಕ್ಟರಿ ಥ್ ಜಾಯಿಂಟ್‌ನೆಸ್' ಎಂಬ ಶೀರ್ಷಿಕೆಯಲ್ಲಿ ಸೇನೆ ಟ್ಯಾಬ್ಲೊ ಪ್ರದರ್ಶಿಸಲಿದೆ.
ಕರ್ತವ್ಯ ಪಥದಲ್ಲಿ ನಡೆಯುವ ಗಣ ರಾಜ್ಯೋತ್ಸವದ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಭಾಗಿಯಾಗದಿದ್ದರೂ ಕೆಂಪು ಕೋಟೆಯಲ್ಲಿ ಆಯೋಜಿಸುವ ಭಾರತ ಪರ್ವದಲ್ಲಿ 'ಸಿರಿಧಾನ್ಯದಿಂದ ಮೈಕ್ರೋಚಿಪ್ 'ವರೆಗೆ (ಮಿಲೆಟ್ ಟು ಮೈಕ್ರೋ ಚಿಪ್) ಎಂಬ ಸ್ಥಬ್ದಚಿತ್ರ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಕೃಷಿಯಿಂದ ಕೈಗಾರಿಕೆ ವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಪಯಣವನ್ನು ಪ್ರದರ್ಶಿಸಲಿದೆ.