ನವದೆಹಲಿ: ಭಾರತದ 77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತೀಯ ವಾಯುಪಡೆಯ ವಿಮಾನಗಳ ರೋಮಾಂಚಕ ವೈಮಾನಿಕ ಪ್ರದರ್ಶನ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿತು.
16 ಯುದ್ಧ ವಿಮಾನಗಳು, ನಾಲ್ಕು ಸಾರಿಗೆ ವಿಮಾನಗಳು ಮತ್ತು ಒಂಬತ್ತು ಹೆಲಿಕಾಪ್ಟರ್‌ಗಳು ಸೇರಿದಂತೆ ಒಟ್ಟು 29 ವಾಯುಪಡೆಯ ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡವು.
ಇವುಗಳಲ್ಲಿ ಎರಡು ರಫೆಲ್ ಜೆಟ್ ಗಳು, ಎರಡು ಮಿಗ್-29,ಎರಡು SU-30 ಮತ್ತು ಒಂದು ಜಾಗ್ವಾರ್ ವಿಮಾನಗಳು 'ಸಿಂಧೂರ ತಿಲಕ' ರಚನೆಯಕಾರದಲ್ಲಿ ಹಾರಾಟ ನಡೆಸಿದವು. ಕಳೆದ ವರ್ಷ ಮೇ ತಿಂಗಳಲ್ಲಿ ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ನಡೆದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ ಪಾತ್ರವನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಪ್ರದರ್ಶನ ನಡೆಸಲಾಯಿತು.
ಆಪರೇಷನ್ ಸಿಂಧೂರ ರಚನೆಯ ವೇಳೆ, ಸುಧಾರಿತ ಹಗುರ ಯುದ್ಧ ವಿಮಾನ ಧ್ರುವ್ 'ಆಪರೇಷನ್ ಸಿಂಧೂರ' ಧ್ವಜವನ್ನು ಹೊತ್ತೊಯ್ಯುತ್ತಿರುವುದು ಕಂಡುಬಂದಿತು.
ಆರು ರಫೇಲ್ ವಿಮಾನಗಳು 'ವಜ್ರಾಂಗ' ಆಕಾರದಲ್ಲಿ ಹಾರಾಟ ನಡೆಸಿದವು. ಇದು ವಿಶೇಷ ಹಾಗೂ ಹೆಚ್ಚು ನಿಖರವಾದ ವೈಮಾನಿಕ ಪ್ರದರ್ಶನವಾಗಿದೆ. ವಾಯುಪಡೆಯ ವಿಮಾನ 'ವಿಕ್' ಮತ್ತು 'ತ್ರಿಶೂಲ್' ರಚನೆಯಾಕಾರದಲ್ಲಿ ಹಾರಾಟ ನಡೆಸಿತು.
ರಫೇಲ್, Su-30 MKI, MiG-29, ಮತ್ತು ಜಾಗ್ವಾರ್ ವಿಮಾನಗಳು, C-130 ಮತ್ತು C-295, ಹಾಗೆಯೇ ಭಾರತೀಯ ನೌಕಾಪಡೆಯ P-8i ವಿಮಾನಗಳು ಕೂಡಾ ಅರ್ಜಾನ್, ವಜ್ರಾಂಗ, ವರುಣ ಮತ್ತು ವಿಜಯ್ ರಚನೆಯಾಕಾರದಲ್ಲಿ ಪ್ರದರ್ಶನ ನೀಡಿದವು.