ಮುಂಬಯಿ: ಅಜಿತ್ ಪವಾರ್ ಅವರಿದ್ದ ವಿಮಾನವು ಬಾರಾಮತಿಯಲ್ಲಿ ಅಪಘಾತಕ್ಕೀಡಾಯಿತು. ಮಹಾರಾಷ್ಟ್ರ ಡಿಸಿಎಂ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.
ವಿಮಾನ ದುರಂತಕ್ಕೀಡಾಗುವ ಮೊದಲು ತಮ್ಮ ಎಕ್ಸ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದ ಕೊನೆಯ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ನಿಮ್ಮ ವಿಶ್ವಾಸಾರ್ಹ ಸರ್ಕಾರ ಎಂದು ಯೋಜನೆಗಳ ಬಗ್ಗೆ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಅವರು ಮಾಹಿತಿ ನೀಡಿದ್ದರು. ವೃತ್ತಿಪರ ತರಬೇತಿ ಸಂಸ್ಥೆ, ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಪಾವತಿ ವ್ಯವಸ್ಥೆ, ಸರ್ಕಾರಿ ಭೂಮಿಯ ಗುತ್ತಿಗೆ ಅವಧಿಯ ವಿಸ್ತರಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರಿದ್ದ ವಿಮಾನ ಅಪಘಾತಕ್ಕೆ ಒಳಗಾಗುವುದಕ್ಕೂ ಮುನ್ನ ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಹೀಗಿದೆ, ನಾಗಪುರ, ಛತ್ರಪತಿ ಸಂಭಾಜಿನಗರ ಮತ್ತು ಪುಣೆಯಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಹಂತ ಹಂತವಾಗಿ ಪಿಎಂ ಸೇತು ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು, ಲೋಕೋಪಯೋಗಿ ಇಲಾಖೆಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರ ಬಾಕಿ ಹಣ ಪಾವತಿಸಲು ಟ್ರೆಡ್ಸ್ ಎನ್ನುವ ವ್ಯವಸ್ಥೆ ಮಾಡಲಾಗುವುದು. ಜವಹರ್ ಲಾಲ್ ನೆಹರು ಅವರ ಹೆಸರಲ್ಲಿ ಜವಳಿ ಉದ್ಯಮಕ್ಕೆ ನೆರವಾಗುವುದು. ಕೇಂದ್ರ ಅಥವಾ ರಾಜ್ಯ ಸರ್ಕಾರದ ವಶದಲ್ಲಿರುವ ಆಸ್ತಿಯ ಮುದ್ರಾಂಕ ಶುಲ್ಕ ಮನ್ನಾ ಮಾಡುವುದರ ಬಗ್ಗೆ ಹಾಗೂ ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡುವ ಅವಧಿಯನ್ನು ವಿಸ್ತರಿಸುವ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದರು.