ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೊಂದು ಭೀಕರ ಹತ್ಯೆ ವರದಿಯಾಗಿದ್ದು, ಜಿಮ್ ನಲ್ಲಿ ಬಳಕೆ ಮಾಡುವ ಡಂಬಲ್ ನಿಂದ ತಲೆ ಜಜ್ಜಿ ಪತಿಯೇ SWAT ಮಹಿಳಾ ಕಮಾಂಡೋ ಹತ್ಯೆಗೀಡಾಗಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಪತಿಯೇ ಲೋಹದ ಡಂಬಲ್ನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸ್ವ್ಯಾಟ್(SWAT) ಕಮಾಂಡೋ ಆಗಿ ನೇಮಕಗೊಂಡಿದ್ದ 27 ವರ್ಷದ ಕಾಜಲ್ ಎಂದು ಗುರುತಿಸಲಾಗಿದೆ.
ಘಟನೆ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ನೈಋತ್ಯ ದೆಹಲಿಯ ದ್ವಾರಕಾ ಮೋರ್‌ನಲ್ಲಿರುವ ಅವರ ಮನೆಯಲ್ಲಿ ಕಾಜಲ್ ಎಂಬ ಮಹಿಳೆಯ ಮೇಲೆ ಆಕೆಯ ಪತಿ ಅಂಕುರ್ ಚೌಧರಿ (28) ಲೋಹದ ಡಂಬಲ್ನಿಂದ ಹಲ್ಲೆ ನಡೆಸಿದ್ದು, ಆಕೆಯ ತಲೆಯನ್ನು ಬಾಗಿಲಿನ ಚೌಕಟ್ಟಿಗೆ ಹೊಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿಗೂ ಮುನ್ನ ಸೋದರನಿಗೆ ಕರೆ
ಸಾಯುವ ಮುನ್ನ ಕಾಜಲ್ ಕೊನೆಯ ಕರೆಯನ್ನು ತನ್ನ ಸಹೋದರನಿಗೆ ಮಾಡಿದ್ದರು. ಕರೆ ಮಾಡಿದಾಗ ಆಕೆಯ ಕಿರುಚಾಟವೇ ಕೇಳುತ್ತಿತ್ತು. ಕೂಡಲೇ ಫೋನ್ ಸಂಪರ್ಕವೇ ಕಡಿತಗೊಂಡಿತ್ತು ಎಂದು ಆಕೆಯ ಸಹೋದರ ಮಾಹಿತಿ ನೀಡಿದ್ದಾರೆ.
ಕೊಲೆ ಮಾಡಿದ್ದೀನಿ.. ಶವ ತೆಗೆದುಕೊಂಡು ಹೋಗು
ಅಂದು ಕೌಟುಂಬಿಕ ವಿಚಾರ ಮತ್ತು ವರದಕ್ಷಿಣೆ ಬಗ್ಗೆ ನಡೆದ ಜಗಳದಲ್ಲಿ ಕಾಜಲ್ ಮೇಲೆ ಹಲ್ಲೆ ನಡೆಸಿದ ನಂತರ ಅಂಕುರ್ ಕಾಜಲ್ ಸಹೋದರ ನಿಖಿಲ್ ಗೆ ಕರೆ ಮಾಡಿದ್ದ ಎನ್ನಲಾಗಿದೆ. ಅಂಕುರ್ ತನ್ನ ಸಹೋದರಿಯನ್ನು ಕೊಂದಿರುವುದಾಗಿ ನಿಖಿಲ್‌ಗೆ ಹೇಳಿದ್ದಾನೆ ಎಂದು ಪೊಲೀಸರು ನಿಖಿಲ್ ಹೇಳಿಕೆಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಜನವರಿ 22 ರಂದು ರಾತ್ರಿ 10 ಗಂಟೆ ಸುಮಾರಿಗೆ ಅಂಕುರ್ ತನಗೆ ಕರೆ ಮಾಡಿ ತನ್ನ ಸಹೋದರಿ ತನ್ನೊಂದಿಗೆ ಜಗಳವಾಡುತ್ತಿದ್ದಾಳೆ ಎಂದು ಹೇಳಿದ್ದ, ಏನಾಯಿತು ಎಂದು ವಿವರಿಸಲು ಕಾಜಲ್ ಫೋನ್ ತೆಗೆದುಕೊಂಡಳು ಆದರೆ ಅಂಕುರ್ ಅದನ್ನು ಕಸಿದುಕೊಂಡಿದ್ದ.
ಸುಮಾರು ಐದು ನಿಮಿಷಗಳ ನಂತರ, ಅಂಕುರ್ ಮತ್ತೆ ಕರೆ ಮಾಡಿ ನಿಖಿಲ್‌ಗೆ ತಂಗಿಯನ್ನು ಕೊಂದಿರುವುದಾಗಿ ತಿಳಿಸಿದ್ದ, ಅಂಕುರ್ ಶವವನ್ನು ತೆಗೆದುಕೊಂಡು ಹೋಗಿ ಎಂದು ಕೇಳಿದ್ದ.
ಆಘಾತ.. ಕಾಜಲ್ ಮನೆಗೆ ಕುಟುಂಬಸ್ಥರು ದೌಡು
ಅದಕ್ಕೆ ನಿಖಿಲ್ ಮಧ್ಯರಾತ್ರಿ ದೆಹಲಿಗೆ ಓಡಿ ಬಂದಿದ್ದರು, ಅಷ್ಟರಲ್ಲೇ ಅಂಕುರ್ ಚೌದರಿ ಕುಟುಂಬದವರು ಅಲ್ಲಿಗೆ ಬಂದಿದ್ದರು ಮತ್ತು ಅವರು ಕಾಜಲ್ರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವೈದ್ಯರು ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದರು. ಜನವರಿ 25 ರಂದು, ಅವರನ್ನು ಗಾಜಿಯಾಬಾದ್‌ನ ನೆಹರು ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕಾಜಲ್ ಅಲ್ಲಿ ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು.