ತಿರುಪತಿ: ಹಿಂದೂಗಳ ಪವಿತ್ರ ಯಾತ್ರಾತಾಣ ತಿರುಮಲದಲ್ಲಿ ನವ ವಿವಾಹಿತ ಜೋಡಿಯೊಂದು ದುರ್ವರ್ತನೆ ತೋರಿದ್ದು ದೇಗುಲ ಆವರಣದಲ್ಲೇ ಫೋಟೋಶೂಟ್ ನೆಪದಲ್ಲಿ ಪರಸ್ಪರ ಚುಂಬಿಸಿಕೊಂಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ತಿರುಮಲ ಶ್ರೀವಾರಿ ದೇವಾಲಯದ ಆವರಣ ಮತ್ತೆ ಕೆಟ್ಟ ಕಾರಣಕ್ಕೆ ಸುದ್ದಿಗೆ ಗ್ರಾಸವಾಗಿದ್ದು, ತಿರುಮಲದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳುನಾಡು ಮೂಲಕ ನವವಿವಾಹಿತ ಜೋಡಿ ಫೋಟೋಶೂಟ್ ಮಾಡಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬುಧವಾರ ಬೆಳಗ್ಗೆ ದಂಪತಿ ಮದುವೆ ಬಳಿಕ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿತ್ತು. ದರ್ಶನದ ಬಳಿಕ ಈ ಜೋಡಿ ದೇಗುಲದ ಆವರಣದಲ್ಲೇ ಫೋಟೋಶೂಟ್ ನಡೆಸಿದ್ದು, ಈ ವೇಳೆ ನವ ವಿವಾಹಿತ ಜೋಡಿ ಪರಸ್ಪರ ಚುಂಬಿಸಿಕೊಂಡಿದ್ದು, ದೇಗುಲದ ಆವರಣದಲ್ಲೇ ದುರ್ವರ್ತನೆ ತೋರಿದೆ.
ಬುಧವಾರ ಬೆಳಿಗ್ಗೆ, ಮದುವೆಯ ಉಡುಪಿನಲ್ಲಿದ್ದ ದಂಪತಿಗಳು ಗೊಲ್ಲಮಂಟಪಕ್ಕೆ ಬಹಳ ಹತ್ತಿರದಲ್ಲಿ ಫೋಟೋ ಶೂಟ್‌ನಲ್ಲಿ ಭಾಗವಹಿಸಿದ್ದರು. ಈ ಫೋಟೋ ಶೂಟ್ ಅನ್ನು ವಿಶೇಷ ದೀಪಗಳ ಬೆಳಕಿನಲ್ಲಿ ಮಾಡಲಾಯಿತು. ಹಣೆಯ ಮೇಲೆ ಮುತ್ತಿಡುವಾಗ ವೀಡಿಯೊಗಳು ಮತ್ತು ಫೋಟೋಗಳನ್ನು ತೆಗೆದುಕೊಳ್ಳಲಾಗಿದೆ.
ಗೊಲ್ಲಮಂಟಪದಿಂದ ಅಖಿಲಾಂದ್ರಕ್ಕೆ ನಡೆದುಕೊಂಡು ಹೋಗುವಾಗ ಅವರು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ಇವರ ವರ್ತನೆ ವಿರುದ್ಧ ಟಿಟಿಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ವಿಡಿಯೋ ವ್ಯಾಪಕ ವೈರಲ್ ಆದ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿರುವ ಟಿಟಿಡಿ, 'ತಿರುಮಲದಲ್ಲಿ ಫೋಟೋ ಮತ್ತು ರೀಲ್ಗಳನ್ನು ತೆಗೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. ಪದೇ ಪದೇ ಎಚ್ಚರಿಕೆಗಳಿದ್ದರೂ... ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದೆ ಎಂದು ಚರ್ಚೆಗೆ ಗ್ರಾಸವಾಗಿವೆ. ತಿರುಮಲದಲ್ಲಿ ಫೋಟೋ ಶೂಟ್‌ಗಳು ಮತ್ತು ರೀಲ್‌ಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ, ದೇವಾಲಯದ ಪಾವಿತ್ರ್ಯಕ್ಕೆ ಹಾನಿ ಮಾಡಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.
ವಿವಾದ ಬಳಿಕ ಕ್ಷಮೆ ಕೋರಿದ ದಂಪತಿ
ಇನ್ನು ಈ ಫೋಟೋಶೂಟ್ ವಿವಾದ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ವಿವಾದದ ಕೇಂದ್ರ ಬಿಂದು ಆಗಿರುವ ನವ ದಂಪತಿಗಳು ಕ್ಷಮೆ ಕೋರಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈನ ತಿರುಮಲ ಮತ್ತು ಗಾಯತ್ರಿ ದಂಪತಿಗಳು ಕ್ಷಮೆಯಾಚಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.
ಅವರು ಟಿಟಿಡಿ ಕಲ್ಯಾಣ ವೇದಿಕೆಯಲ್ಲಿ ವಿವಾಹವಾಗಿದ್ದಾಗಿ ಹೇಳಿಕೊಂಡಿದ್ದು, ದೇವರ ದರ್ಶನದ ಬಳಿಕ ದೇವಾಲಯದ ಆವರಣದಲ್ಲಿ ಫೋಟೋಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಆದರೆ, ಅಲ್ಲಿ ಫೋಟೋ ತೆಗೆಯುವುದು ನಿಷಿದ್ಧ ಎಂದು ತಮಗೆ ತಿಳಿದಿರಲಿಲ್ಲ. ಅಂತಹ ತಪ್ಪು ಮತ್ತೆ ಆಗಬಾರದು. ಇಂತಹ ತಪ್ಪು ಪುನರಾವರ್ತಿಸುವುದಿಲ್ಲ.
ಈಗಾಗಲೇ ಆ ವೀಡಿಯೊಗಳು ಮತ್ತು ಫೋಟೋಗಳನ್ನು ಡಿಲೀಟ್ ಮಾಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ತಮ್ಮ ತಪ್ಪಿಗೆ ಕ್ಷಮೆಯಾಚಿಸಿ ಭಗವಂತನ ಸೇವೆ ಮಾಡಿ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಅಂದಹಾಗೆ ತಿರುಪತಿ ತಿರುಮಲ ದೇಗುಲ ಮತ್ತು ಅದರ ಆವರಣವನ್ನು ಪವಿತ್ರ ಸ್ಥಳ ಎಂದು ನಂಬಲಾಗುತ್ತದೆ. ಇಲ್ಲಿ ಚಪ್ಪಲಿ ಧರಿಸಬಾರದು. ವಿಡಿಯೋ ಮತ್ತು ಫೋಟೋಗಳನ್ನು ತೆಗೆಯಬಾರದು. ಅಲ್ಲದೆ ಅಸಭ್ಯವರ್ತನೆ ತೋರದಂತೆ ಟಿಟಿಡಿ ನಿಯಮಗಳನ್ನು ರೂಪಿಸಿದೆ. ಈ ಹಿಂದೆ ಇದೇ ತಿರುಮಲ ದೇಗುಲ ಅವರಣದಲ್ಲಿ ಆಂಧ್ರ ಪ್ರದೇಶದ ಮಾಜಿ ಸಚಿವ ದುವ್ವಾಡ ಶ್ರೀನಿವಾಸ್ ಮತ್ತು ಅವರ ಪತ್ನಿ ಮಾಧುರಿ ಫೋಟೋಶೂಟ್ ನಡೆಸಿ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದರು.