ದಿಬ್ರುಗಢ: ಗಣರಾಜ್ಯೋತ್ಸವದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ' ಔತಣ ಕೂಟ' ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಗಾಮೋಸಾ' ಧರಿಸಲು ನಿರಾಕರಿಸುವ ಮೂಲಕ ಈಶಾನ್ಯಕ್ಕೆ ಅಗೌರವ ತೋರಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಆರೋಪಿಸಿದ್ದಾರೆ.
ಇಂದು ಖಾನಿಕರ್ ಪರೇಡ್ ಮೈದಾನದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ವಿದೇಶಗಳಿಂದ ಬಂದವರು ಸೇರಿದಂತೆ ಎಲ್ಲಾ ಗಣ್ಯರು ಗೌರವಾರ್ಥವಾಗಿ ಸ್ಕಾರ್ಫ್(ಗಾಮೋಸಾ) ಧರಿಸಿದ್ದರು. ಆದರೆ ರಾಹುಲ್ ಗಾಂಧಿಯವರು ಗಾಮೋಸಾ ಧರಿಸಲು ನಿರಾಕರಿಸಿದ ಏಕೈಕ ವ್ಯಕ್ತಿ ಎಂದರು.
''ರಾಹುಲ್ ಗಾಂಧಿ ಏನು ಬೇಕಾದರೂ ಮಾಡಬಹುದು, ಆದರೆ ಬಿಜೆಪಿ ಅಧಿಕಾರದಲ್ಲಿರುವವರೆಗೆ, ಈಶಾನ್ಯದ ಸಂಸ್ಕೃತಿಗೆ ಯಾವುದೇ ಅಗೌರವ ತೋರಿಸಲು ಅವಕಾಶ ನೀಡುವುದಿಲ್ಲ'' ಎಂದು ಅವರು ಹೇಳಿದರು.
ಅಸ್ಸಾಂನ ಅಭಿವೃದ್ಧಿಗೆ ಕಾಂಗ್ರೆಸ್ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ ಅಮಿತ್ ಶಾ, ''ರಾಹುಲ್ ಗಾಂಧಿಯವರ ಪಕ್ಷವು ಅಸ್ಸಾಂಗೆ ಬಂದೂಕು, ಗುಂಡು, ಸಂಘರ್ಷ ಮತ್ತು ಯುವಕರ ಸಾವುಗಳನ್ನು ಹೊರತುಪಡಿಸಿ ಇನ್ನೇನು ನೀಡಿದೆ ಎಂದು'' ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಒಳನುಸುಳುವಿಕೆಯನ್ನು "ತನ್ನ ಮತ ಬ್ಯಾಂಕ್ ರಾಜಕೀಯದ" ಅಸ್ತ್ರವಾಗಿ ಬಳಸುತ್ತಿದೆ ಎಂದು ಅಮಿತ್ ಶಾ ಆರೋಪಿಸಿದರು.