ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದು. 
ದೇಶ

ಮುಂಬೈನಲ್ಲಿ ಮಳೆ ಅವಾಂತರ: ಮನ್ಖುರ್ದ್'ನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; 6 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ..!

ಭಾನುವಾರ ರಾತ್ರಿ ಸುಮಾರು 8.30ರ ವೇಳೆಗೆ ಮನ್ಖುರ್ದ್'ನ ಜನತಾ ನಗರದಲ್ಲಿರುವ ಹನುಮಾನ್ ಮಂದಿರದ ಹಿಂಭಾಗದ ನೆಲಮಹಡಿ ಸೇರಿ ಮೂರು ಮಹಡಿಗಳ ಕಟ್ಟಡದ ಒಂದು ಭಾಗ ಏಕಾಏಕಿ ಕುಸಿದಿದೆ.

ಮುಂಬೈನಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆ ಭಾರೀ ಅನಾಹುತಗಳಿಗೆ ಕಾರಣವಾಗಿದ್ದು, ಮನ್ಖುರ್ದ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಆರು ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಘಟನೆಯಲ್ಲಿ ಓರ್ವರಿಗೆ ಗಾಯಗೊಂಡಿದ್ದು, ಇನ್ನೊಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅವರನ್ನು ಪತ್ತೆಹಚ್ಚಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಮುಂಬೈ ಅಗ್ನಿಶಾಮಕ ದಳ, ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಭಾನುವಾರ ರಾತ್ರಿ ಸುಮಾರು 8.30ರ ವೇಳೆಗೆ ಮನ್ಖುರ್ದ್'ನ ಜನತಾ ನಗರದಲ್ಲಿರುವ ಹನುಮಾನ್ ಮಂದಿರದ ಹಿಂಭಾಗದ ನೆಲಮಹಡಿ ಸೇರಿ ಮೂರು ಮಹಡಿಗಳ ಕಟ್ಟಡದ ಒಂದು ಭಾಗ ಏಕಾಏಕಿ ಕುಸಿದಿದೆ.

ಕಟ್ಟಡ ಕುಸಿಯುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯ ಆರಂಭಿಸಿದ್ದು, ಬಳಿಕ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ಬಿಎಂಸಿ ತಂಡಗಳು ಸ್ಥಳಕ್ಕೆ ಧಾವಿಸಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದವು.

ಬಿಎಂಸಿ ಅಧಿಕಾರಿಗಳ ಮಾಹಿತಿ ಪ್ರಕಾರ, ಅವಶೇಷಗಳಡಿಯಿಂದ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಹೊರತೆಗೆಯಲಾಗಿದ್ದು, ಅವರು ಮೃತಪಟ್ಟಿದ್ದರು. ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಗಾಯಗೊಂಡ ಮತ್ತೊಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನೂ ಒಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ಭಾರೀ ಮಳೆಯ ನಡುವೆಯೇ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಧಾರಾಕಾರ ಮಳೆಯಿಂದ ಮುಂಬೈ ನಗರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ ಹಾಗೂ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಹಲವು ಪ್ರದೇಶಗಳಲ್ಲಿ ನೀರು ನಿಂತ ಪರಿಣಾಮ ಜನರು ಪರದಾಡುವಂತಾಗಿದ. ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿದ ಘಟನೆಗಳೂ ವರದಿಯಾಗಿವೆ.

ಭಾರೀ ಮಳೆ, ಬಿರುಗಾಳಿ ಹಾಗೂ ಮರಗಳು ಕುಸಿದ ಕಾರಣ ಭಾನುವಾರ ಬೆಳಗ್ಗೆ ಸುಮಾರು ಒಂದು ಗಂಟೆ ಕಾಲ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಬೆಳಗ್ಗೆ 10.17ರಿಂದ 11.17ರವರೆಗೆ ವಿಮಾನಗಳ ಹಾರಾಟ ಮತ್ತು ಲ್ಯಾಂಡಿಂಗ್‌ಗೆ ತಡೆ ವಿಧಿಸಲಾಗಿತ್ತು. ಹವಾಮಾನ ಸುಧಾರಿಸಿದ ಬಳಿಕ ಸೇವೆ ಪುನರಾರಂಭವಾದರೂ, ಹಲವು ವಿಮಾನಗಳ ವೇಳಾಪಟ್ಟಿ ಅಸ್ತವ್ಯಸ್ತಗೊಂಡಿತು.

ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಇಂಡಿಗೋದ ನಾಲ್ಕು ವಿಮಾನಗಳನ್ನು ರದ್ದುಪಡಿಸಲಾಗಿದ್ದು, 13 ಆಗಮನ ವಿಮಾನಗಳನ್ನು ಅಹಮದಾಬಾದ್ ಸೇರಿದಂತೆ ಸಮೀಪದ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿತ್ತು. ನಂತರ ಹವಾಮಾನ ಅನುಕೂಲಕರವಾದ ಬಳಿಕ ಅವುಗಳನ್ನು ಮುಂಬೈಗೆ ಕರೆತರಲಾಯಿತು. ನಿರ್ಗಮನ ಮತ್ತು ಆಗಮನದ ಬಹುತೇಕ ವಿಮಾನಗಳು ಒಂದು ಗಂಟೆಗೂ ಹೆಚ್ಚು ವಿಳಂಬವಾದವು ಎಂದು ತಿಳಿಸಿದ್ದಾರೆ.

ಮಳೆ ಸಂಬಂಧಿತ ಮತ್ತೊಂದು ದುರಂತದಲ್ಲಿ ಕುರ್ಲಾ ಪ್ರದೇಶದಲ್ಲಿ ಮರವೊಂದು ಅಂಗಡಿಯ ಮೇಲೆ ಬಿದ್ದ ಪರಿಣಾಮ 63 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ಮರ ಬಿದ್ದು ಸಂಭವಿಸಿದ ಎರಡನೇ ಸಾವಿನ ಘಟನೆ ಇದಾಗಿದೆ.

ಮಹಾರಾಷ್ಟ್ರದ ನವಿ ಮುಂಬೈನ ವಾಶಿ ಸೆಕ್ಟರ್-11ರಲ್ಲಿ ರಾಮ ನಿವಾಸ್ ಕಟ್ಟಡದ ಎರಡನೇ ಮಹಡಿಯ ಬಾಲ್ಕನಿಯ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಮೂವರು ಗಾಯಗೊಂಡಿದ್ದಾರೆ. ಅವರಲ್ಲಿ 35 ವರ್ಷದ ರಾಜೇಶ್ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭೀವಂಡಿಯ ಕಂವರಿ ನದಿಯಲ್ಲಿ ಸ್ನೇಹಿತರೊಂದಿಗೆ ಏಡಿಗಳನ್ನು ಹಿಡಿಯಲು ತೆರಳಿದ್ದ 17 ವರ್ಷದ ಬಾಲಕ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಥಾಣೆಯ ದಿವಾ ಪ್ರದೇಶದಲ್ಲಿ ಎರಡು ಅಂತಸ್ತಿನ ಕಟ್ಟಡದ ಮೆಟ್ಟಿಲಿನ ಕಾಂಕ್ರೀಟ್ ಸ್ಲ್ಯಾಬ್ ಕುಸಿದ ಪರಿಣಾಮ ಐವರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಪಾಲ್ಘರ್ ಜಿಲ್ಲೆಯ ವಸೈ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ವಸತಿ ಸಮುಚ್ಚಯದ ಕಾಂಪೌಂಡ್ ಗೋಡೆ ಕುಸಿದು ಪಕ್ಕದಲ್ಲಿದ್ದ ವಸತಿ ಪ್ರದೇಶದ ಮೇಲೆ ಬಿದ್ದಿದೆ. ಘಟನೆಯಲ್ಲಿ ಸುಮಾರು 15 ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಹಲವು ಪ್ರದೇಶಗಳಲ್ಲಿ 200 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದ್ದು, ಕೆಲವು ಭಾಗಗಳಲ್ಲಿ ಸುಮಾರು 300 ಮಿ.ಮೀ. ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಮುಂಬೈಗೆ ಭಾನುವಾರ ನೀಡಿದ್ದ ರೆಡ್ ಅಲರ್ಟ್ ಮುಂದುವರಿಸಲಾಗಿದ್ದು, ಸೋಮವಾರಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ, ಬಿರುಗಾಳಿ ಹಾಗೂ ಜಲಾವೃತ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಮಳೆಯ ತೀವ್ರತೆ ಮತ್ತು ಹವಾಮಾನ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಮುಂಬೈನ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಬಿಎಂಸಿ ಶಾಲೆ ಮತ್ತು ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಆದರೆ, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು ಎಂದು ಬಿಎಂಸಿ ಸಾರ್ವಜನಿಕರಿಗೆ ಮನವಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿಜ್ಬುಲ್ಲಾ ವಿರುದ್ಧ ಹೋರಾಟ: ಅಮೆರಿಕಾ ವಿರುದ್ಧವೇ ತಿರುಗಿಬಿದ್ದ ಇಸ್ರೇಲ್; ನಾವು ಒಂಟಿಯಲ್ಲ, ನಮ್ಮ ಹಿಂದೆ 140 ಕೋಟಿ ಮಂದಿ ಭಾರತೀಯರಿದ್ದಾರೆ- JD ವ್ಯಾನ್ಸ್‌ಗೆ ನೆತನ್ಯಾಹು ತಿರುಗೇಟು

ಮಹಿಳಾ ಟಿ20 ವಿಶ್ವಕಪ್: ಇಂಗ್ಲೆಂಡ್ ಮಣಿಸಿ 7ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

ಲಕ್ಷ ಲಕ್ಷ ಖರ್ಚು ಬೇಡ, ಕೈಗೆಟುಕುವ ವೆಚ್ಚದಲ್ಲೇ ವಿದೇಶ ಪ್ರವಾಸ: ಭಾರತೀಯ ರೂಪಾಯಿಗೆ ಹೆಚ್ಚು ಮೌಲ್ಯ ನೀಡುವ ಟಾಪ್ 10 ದೇಶಗಳು..!

ರಾಮಮಂದಿರ ಆಯ್ತು ಕೊಳ್ಳೆ ಹೊಡೆಯೋಕೆ ಮುಂದೆ ಮಥುರಾ-ಕಾಶಿನಾ: ರಾಮರಕ್ಷಾ ಆಂದೋಲನ ಆರಂಭ; BJP ವಿರುದ್ಧ ಉದ್ದವ್ ಕಿಡಿ

ದಿಲ್ಜಿತ್ ದೋಸಾಂಜ್ ನಟನೆಯ 'ಸಟ್ಲುಜ್' ಬಿಡುಗಡೆಯಾಗಿ ಕೇವಲ 2 ದಿನಕ್ಕೆ OTTಯಿಂದಲೂ ಹೊರಕ್ಕೆ, ಚಿತ್ರದಲ್ಲಿ ಅಂತದ್ದೇನಿದೆ?