AI ಸೃಷ್ಟಿತ ಚಿತ್ರ 
ದೇಶ

ತಿರುಪತಿಯನ್ನು ರಾಜಕೀಯ ಅಖಾಡವಾಗಿಸಬೇಡಿ, ಆ ಹಕ್ಕು ಕೇವಲ ಮೈಸೂರು ಮಹಾರಾಜರಿಗೆ ಮಾತ್ರ: ಡಿ.ಕೆ ಶಿವಕುಮಾರ್ 'ಆರತಿ' ಪ್ರಸ್ತಾವನೆಗೆ TTD ಗರಂ..! Video

ಈ ವಿಶೇಷ ಹಕ್ಕು ಮೈಸೂರು ಮಹಾರಾಜರಿಗೆ ನೀಡಲಾಗಿತ್ತು. ಅದು ಮುಖ್ಯಮಂತ್ರಿ, ಸಚಿವ ಸಂಪುಟ ಅಥವಾ ಶಾಸಕರಿಗಾಗಿ ಅಲ್ಲ. ಈ ರೀತಿಯ ಹೊಸ ನಿಯಮವನ್ನು ಏಕಪಕ್ಷೀಯವಾಗಿ ಜಾರಿಗೆ ತರಲು ಸಾಧ್ಯವಿಲ್ಲ.

ಬೆಂಗಳೂರು/ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಕರ್ನಾಟಕದ ಜನಪ್ರತಿನಿಧಿಗಳು, ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಪ್ರತಿದಿನ ನಡೆಯುವ ಮೊದಲ ಆರತಿಯಲ್ಲಿ (ತಿರುಮಲ ನಿತ್ಯ ಆರತಿ) ಭಾಗವಹಿಸಲು ಅವಕಾಶ ಕಲ್ಪಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಸ್ತಾವಕ್ಕೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸೋಮವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ಸದಸ್ಯ ಜಿ. ಭಾನುಪ್ರಕಾಶ್ ರೆಡ್ಡಿ ಅವರು, "ತಿರುಪತಿ ದೇವಾಲಯವನ್ನು ರಾಜಕೀಯ ವೇದಿಕೆಯನ್ನಾಗಿಸಬೇಡಿ. ಇದು ಪವಿತ್ರ ಧಾರ್ಮಿಕ ಕ್ಷೇತ್ರ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು" ಎಂದು ಆಗ್ರಹಿಸಿದ್ದಾರೆ.

ತಿರುಮಲದಲ್ಲಿ ಪ್ರತಿದಿನ ಬೆಳಿಗ್ಗೆ ನಡೆಯುವ 'ತಿರುಮಲ ನಿತ್ಯ ಆರತಿ' ಶ್ರೀ ವೆಂಕಟೇಶ್ವರ ಸ್ವಾಮಿಗೆ ಗರ್ಭಗುಡಿಯಲ್ಲಿ ಸಲ್ಲಿಸುವ ವಿಶೇಷ ಪೂಜೆಯಾಗಿದೆ. ಈ ಸಂದರ್ಭದಲ್ಲಿ ಮಠಾಧೀಶರು, ಮುಖ್ಯ ಅರ್ಚಕರು, ವಿಶೇಷ ಅಧಿಕಾರಿಗಳು ಹಾಗೂ ಐತಿಹಾಸಿಕ ಪರಂಪರೆಯ ಭಾಗವಾಗಿ ಮೈಸೂರು ಮಹಾರಾಜರ ಪ್ರತಿನಿಧಿಯೊಬ್ಬರು ಉಪಸ್ಥಿತರಿರುತ್ತಾರೆಂದು ಹೇಳಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ, ಕರ್ನಾಟಕದ ಸಚಿವರು, ಶಾಸಕರು, ನ್ಯಾಯಮೂರ್ತಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ರಾಜ್ಯದ ಗಣ್ಯರು ತಿರುಪತಿಗೆ ಭೇಟಿ ನೀಡಿದಾಗ ಮೊದಲ ಆರತಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಆದೇಶ ಹೊರಡಿಸಲಾಗುವುದು ಎಂದು ಘೋಷಿಸಿದ್ದರು.

ಈ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಭಾನುಪ್ರಕಾಶ್ ರೆಡ್ಡಿ, "ಈ ವಿಶೇಷ ಹಕ್ಕು ಮೈಸೂರು ಮಹಾರಾಜರಿಗೆ ನೀಡಲಾಗಿತ್ತು. ಅದು ಮುಖ್ಯಮಂತ್ರಿ, ಸಚಿವ ಸಂಪುಟ ಅಥವಾ ಶಾಸಕರಿಗಾಗಿ ಅಲ್ಲ. ಈ ರೀತಿಯ ಹೊಸ ನಿಯಮವನ್ನು ಏಕಪಕ್ಷೀಯವಾಗಿ ಜಾರಿಗೆ ತರಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಕರ್ನಾಟಕದ ಈ ಬೇಡಿಕೆಯನ್ನು ಒಪ್ಪಿಕೊಂಡರೆ ನಾಳೆ ತಮಿಳುನಾಡು, ಕೇರಳ ಸೇರಿದಂತೆ ಇತರ ರಾಜ್ಯಗಳೂ ಇದೇ ರೀತಿಯ ಬೇಡಿಕೆ ಇಡುತ್ತವೆ. ಆದ್ದರಿಂದ ಈ ಪ್ರಸ್ತಾವವನ್ನು ವಿರೋಧಿಸುವ ನಿರ್ಣಯವನ್ನು ನಾಳೆ ನಡೆಯಲಿರುವ ಟಿಟಿಡಿ ಮಂಡಳಿ ಸಭೆಯಲ್ಲಿ ಮಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ತಿರುಪತಿಯಲ್ಲಿ ಪ್ರತಿದಿನ ನಡೆಯುವ ಮೊದಲ ಆರತಿ ಐತಿಹಾಸಿಕವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ವಿಶೇಷ ಹಕ್ಕಾಗಿದೆ. ಇದುವರೆಗೆ ಕರ್ನಾಟಕ ಸರ್ಕಾರದ ವಿಶೇಷ ಅಧಿಕಾರಿಯೊಬ್ಬರು ಈ ಆರತಿಯಲ್ಲಿ ಭಾಗವಹಿಸುತ್ತಿದ್ದರು. ಇನ್ನು ಮುಂದೆ ರಾಜ್ಯದ ಪರವಾಗಿ ಭೇಟಿ ನೀಡುವ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ನ್ಯಾಯಮೂರ್ತಿಗಳು ಅಥವಾ ಇತರ ಗಣ್ಯರಿಗೂ ಈ ಅವಕಾಶ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ಹೇಳಿದ್ದರು.

ತಿರುಪತಿಗೆ ಭೇಟಿ ನೀಡಿದ ಅನೇಕ ಶಾಸಕರು ದರ್ಶನ ಪಡೆಯದೇ ಹಿಂದಿರುಗುವ ಪರಿಸ್ಥಿತಿ ಎದುರಾಗುತ್ತಿತ್ತು. ಇನ್ನು ಮುಂದೆ ರಾಜ್ಯದ ಪರವಾಗಿ ಸೇವೆ ಸಲ್ಲಿಸುತ್ತಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ದೇವರ ಸನ್ನಿಧಿಯಲ್ಲಿ ನಿಂತು ಮೊದಲ ಆರತಿ ಸ್ವೀಕರಿಸುವ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಅವಧಿಯಲ್ಲಿ ತಿರುಪತಿಯಲ್ಲಿ ಕರ್ನಾಟಕ ಭವನ ನಿರ್ಮಿಸಲು ಟ್ರಸ್ಟ್ ಸ್ಥಾಪಿಸಲಾಗಿತ್ತು ಎಂದು ಶಿವಕುಮಾರ್ ಸ್ಮರಿಸಿದ್ದರು.

ಮಹಾರಾಜರ ಕಾಲದಲ್ಲೇ ಕರ್ನಾಟಕಕ್ಕೆ ಸುಮಾರು ಏಳು ಎಕರೆ ಜಾಗ ಮಂಜೂರಾಗಿತ್ತು. ಆ ಜಾಗದಲ್ಲಿ ಭವ್ಯ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಎಸ್‌.ಎಂ. ಕೃಷ್ಣ ಟ್ರಸ್ಟ್ ರಚಿಸಿದ್ದರು. ಆದರೆ, ಸರ್ಕಾರ ಬದಲಾದ ಕಾರಣ ಆ ಯೋಜನೆ ಮುಂದುವರಿಯಲಿಲ್ಲ" ಎಂದು ವಿವರಿಸಿದರು.

ಮುಖ್ಯಮಂತ್ರಿಯವರ ಪ್ರಸ್ತಾವ ಇದೀಗ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಟಿಟಿಡಿ ಮಂಡಳಿ ಸಭೆಯಲ್ಲಿ ಈ ಕುರಿತು ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಲ್ಫ್ ಆಫ್ ಮೆಕ್ಸಿಕೋ, ಒಂಟಾರಿಯೊ ಲೇಕ್ ಬಳಿಕ Strait of Hormuz ಗೆ ನನ್ನ ಹೆಸರು ಮರುನಾಮಕರಣ ಮಾಡಿ- ಅಮೆರಿಕ ಅಧ್ಯಕ್ಷ Trump ವಿಚಿತ್ರ ಬೇಡಿಕೆ!

ರಕ್ಷಣಾ ಸಾಮರ್ಥ್ಯ ಇನ್ನಷ್ಟು ಬಲಿಷ್ಠ: ದೇಶೀಯ ನಿರ್ಮಿತ ಗ್ಲೈಡ್ ಬಾಂಬ್ ಖಗಂಟಕ್ -243 ಪರೀಕ್ಷೆ ಯಶಸ್ವಿ

ಭಾರೀ ಮಳೆ: ಉಕ್ಕಿ ಹರಿಯುತ್ತಿರುವ ಪ್ರಮುಖ ನದಿಗಳು, ಬಿಹಾರದಲ್ಲಿ ಹೈ ಅಲರ್ಟ್

AEE ನೇಮಕಾತಿಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆಗೆ HDK ಸಾಲು ಸಾಲು ಪ್ರಶ್ನೆ; ಇದೇನಾ 'ದೇಶವೇ ಅಲ್ಲೋಲ ಕಲ್ಲೋಲ ಆಗೋ' ವಿಷಯ? Video

'aashiq banaya': 'ಅಕ್ಷರಶಃ ನಮ್ಮಿಬ್ಬರ ಕೆಮಿಸ್ಟ್ರಿ ಅಣ್ಣ-ತಂಗಿಯಂತಿತ್ತು': ನಟ ಇಮ್ರಾನ್ ಹಶ್ಮಿ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ನಟಿ Tanushree Dutta