ಮುಂಬೈ: ಮುಂಬೈನ ಎತ್ತರದ ವಸತಿ ಸಮುಚ್ಚಯವೊಂದರ ಲಿಫ್ಟ್‌ನಲ್ಲಿ ಸಾಕು ನಾಯಿಯೊಂದು ಹುಚ್ಚಾಟ ಮೆರೆದಿದ್ದು, ಏಕಾಏಕಿ ಲಿಫ್ಟ್ ನಲ್ಲಿದ್ದವರ ಮೇಲೆ ಆಕ್ರಮಣಕಾರಿ ವರ್ತನೆ ತೋರಿಸಿದೆ.
ಈ ವೇಳೆ ನಾಯಿ ಮೂವರು ಬಾಲಕಿಯರತ್ತ ಎರಗಿದ್ದು, ಅದೃಷ್ಟವಶಾತ್ ನಾಯಿ ಬಾಯಿಗೆ ರಕ್ಷಣಾ ಪಟ್ಟಿ ಕಟ್ಟಿದ್ದರಿಂದ ಅದು ಬಾಲಕಿಯರನ್ನು ಕಚ್ಚಲು ವಿಫಲವಾಗಿದೆ.
ಒಂದು ವೇಳೆ ರಕ್ಷಣಾ ಪಟ್ಟಿ ಇಲ್ಲದೇ ಹೋಗಿದ್ದರೆ ನಾಯಿ ಎಲ್ಲರ ಮೇಲೂ ಹಲ್ಲೆ ಮಾಡುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಈ ಘಟನೆ ಗುರುವಾರ ಸಂಜೆ ಮುಂಬೈನ ಪಶ್ಚಿಮ ಉಪನಗರ ಮಲಾಡ್ ಪ್ರದೇಶದ ಶೇಠ್ ಐರೀನ್ ಟವರ್‌ನಲ್ಲಿ ನಡೆದಿದೆ.
ಲಿಫ್ಟ್ ಒಳಗೆ ಬರುತ್ತಿದ್ದಂತೆಯೇ ನಾಯಿ ಆಕ್ರಮಣಕಾರಿ ವರ್ತನೆ
ಸಿಸಿಟಿವಿ ದೃಶ್ಯದಲ್ಲಿ, ಮೂವರು ಬಾಲಕಿಯರು ಈಗಾಗಲೇ ಲಿಫ್ಟ್‌ನೊಳಗಿದ್ದ ವೇಳೆ ಮಹಿಳೆಯೊಬ್ಬರು ತಮ್ಮ ಸಾಕು ನಾಯಿಯೊಂದಿಗೆ ಲಿಫ್ಟ್‌ಗೆ ಪ್ರವೇಶಿಸುತ್ತಾರೆ. ಈ ವೇಳೆ ಲಿಫ್ಟ್ ಬಾಗಿಲು ಮುಚ್ಚಿದ ಕೆಲವೇ ಕ್ಷಣಗಳಲ್ಲಿ, ಮೂತಿಗೆ ರಕ್ಷಣಾ ಪಟ್ಟೆ (ಮಜಲ್) ಹಾಕಲಾಗಿದ್ದ ನಾಯಿ ಏಕಾಏಕಿ ಆಕ್ರಮಣಕಾರಿ ಸ್ವಭಾವ ಪ್ರದರ್ಶಿಸಿ ಬಾಲಕಿಯರತ್ತ ಎರಗಲು ಯತ್ನಿಸಿದೆ. ಇದರಿಂದ ಲಿಫ್ಟ್‌ನೊಳಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇಬ್ಬರು ಬಾಲಕಿಯರು ಪರಾರಿ, ಒಬ್ಬ ಬಾಲಕಿ ಲಿಫ್ಟ್ ನೊಳಗೆ ಪರದಾಟ
ಇನ್ನು ನಾಯಿ ಎರಗುತ್ತಿದ್ದಂತೆ ಇಬ್ಬರು ಬಾಲಕಿಯರು ಹೇಗೋ ಲಿಫ್ಟ್‌ನಿಂದ ಹೊರಗೆ ಓಡಿ ಪಾರಾಗಿದ್ದಾರೆ. ಆದರೆ ಒಬ್ಬ ಬಾಲಕಿ ಲಿಫ್ಟ್‌ನೊಳಗೇ ಸಿಲುಕಿಕೊಂಡಿದ್ದು, ಆಕೆಯತ್ತ ನಾಯಿ ಮತ್ತೆ ಮತ್ತೆ ಎರಗಲು ಯತ್ನಿಸಿದೆ. ಈ ವೇಳೆ ನಾಯಿಯ ಮಾಲೀಕೆ ಅದನ್ನು ಹಿಡಿತದಲ್ಲಿಡಲು ಹರಸಾಹಸ ಪಟ್ಟಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ.
ಲಿಫ್ಟ್ ಮಹಡಿಗೆ ತಲುಪಿದ ಬಳಿಕ ಬಾಲಕಿಯರು ಹೊರಗೆ ಓಡಿದರೂ, ನಾಯಿ ಅವರನ್ನು ಬೆನ್ನಟ್ಟಲು ಯತ್ನಿಸಿತು. ಕೊನೆಗೆ ಮಾಲೀಕೆ ನಾಯಿಯನ್ನು ಹಿಂದಕ್ಕೆ ಎಳೆದು ನಿಯಂತ್ರಣಕ್ಕೆ ತಂದಿದ್ದರಿಂದ ಯಾವುದೇ ಗಂಭೀರ ಅನಾಹುತ ಸಂಭವಿಸಲಿಲ್ಲ.
ನಾಯಿಯನ್ನು ನಿಯಂತ್ರಿಸಲು ಮಾಲೀಕೆಯ ಹರಸಾಹಸ
ವಿಡಿಯೊದ ಕೊನೆಯಲ್ಲಿ ನಾಯಿ ತನ್ನ ಮಾಲೀಕೆಯನ್ನೇ ಎಳೆಯುತ್ತಾ ಲಿಫ್ಟ್‌ನಿಂದ ಹೊರಗೆ ಬರಲು ಯತ್ನಿಸುತ್ತಿರುವ ದೃಶ್ಯವೂ ಸೆರೆಯಾಗಿದೆ. ನಾಯಿಯನ್ನು ನಿಯಂತ್ರಿಸಲು ಮಾಲೀಕೆ ಸಾಕಷ್ಟು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ.
ಯಾರಿಗೂ ಗಾಯವಾಗಿಲ್ಲ, ದೂರು ದಾಖಲಾಗಿಲ್ಲ
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ನಿವಾಸಿಗೆ ತಮ್ಮ ಸಾಕು ನಾಯಿಯನ್ನು ಲಿಫ್ಟ್‌ನಲ್ಲಿ ಕರೆದುಕೊಂಡು ಹೋಗಲು ಅನುಮತಿ ಇದ್ದುದಾಗಿಯೂ ಪೊಲೀಸರು ಹೇಳಿದ್ದಾರೆ.
ಆದರೆ, ವೈರಲ್ ಆಗಿರುವ ಈ ವಿಡಿಯೊ ವಸತಿ ಸಮುಚ್ಚಯದ ನಿವಾಸಿಗಳಲ್ಲಿ ಆತಂಕ ಉಂಟುಮಾಡಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕು ಪ್ರಾಣಿಗಳ ಸುರಕ್ಷತೆ ಹಾಗೂ ನಿಯಂತ್ರಣದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.