ನವದೆಹಲಿ: ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಒತ್ತಾಯಿಸಿ ಕಳೆದ 22 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಶಿಕ್ಷಣತಜ್ಞ ಮತ್ತು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚೂಕ್ ಅವರ ನೇತೃತ್ವದಲ್ಲಿ ಸೋಮವಾರ "ಸಂಸತ್ ಚಲೋ" ಮೆರವಣಿಗೆ ಆರಂಭವಾಗಿದೆ.
'ಸಂಸತ್ ಚಲೋ' ನಂತರ ವಾಂಗ್‌ಚುಕ್ ಅವರು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಉಪವಾಸ ಅಂತ್ಯಗೊಳಿಸುವುದಿಲ್ಲ ಎಂದು ಹೇಳಿದ್ದು, ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಗುಡುಗಿದ್ದಾರೆ.
ಉಪವಾಸ ಸತ್ಯಾಗ್ರಹ ಹಿಂಪಡೆಯಲು ಮೂರು ಷರತ್ತುಗಳ್ನು ವಿಧಿಸಿದ ಸೋನಮ್ ವಾಂಗ್‌ಚುಕ್, ಶಿಕ್ಷಣ ವ್ಯವಸ್ಥೆಯಲ್ಲಿನ ಇತ್ತೀಚಿನ ಅಕ್ರಮಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಒಪ್ಪಿಕೊಂಡರೆ ಅಥವಾ ರಾಜಕೀಯ ನಾಯಕರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಭರವಸೆ ನೀಡಿದರೆ ಮಾತ್ರ ಹೋರಾಟ ಹಿಂಪಡೆಯುವುದಾಗಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕೈಬರಹದ ಟಿಪ್ಪಣಿಯಲ್ಲಿ, ವಾಂಗ್‌ಚುಕ್, "ನಿಮ್ಮಲ್ಲಿ ಹಲವರು ನನ್ನ ಉಪವಾಸವನ್ನು ಯಾವಾಗ ಕೊನೆಗೊಳಿಸುತ್ತೀರಿ ಎಂದು ಕೇಳಿದ್ದೀರಿ. ಬೆಂಬಲಿಗರಿಗೆ ಮೊದಲೇ ಹೇಳಿದಂತೆ, ಜುಲೈ 20 ರಂದು ನಾನು ನನ್ನ ಉಪವಾಸವನ್ನು ಕೊನೆಗೊಳಿಸುತ್ತೇನೆ... ಆದರೆ ಶಿಕ್ಷಣ ವ್ಯವಸ್ಥೆಯಲ್ಲಿನ ಇತ್ತೀಚಿನ ವೈಫಲ್ಯಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಇತ್ಯಾದಿಗಳಿಗೆ ಸರ್ಕಾರ ಹೊಣೆಗಾರಿಕೆಯನ್ನು ತೆಗೆದುಕೊಂಡರೆ ಮಾತ್ರ" ಎಂದು ತಿಳಿಸಿದ್ದಾರೆ.
"ನನ್ನ ಅನಾರೋಗ್ಯದ ಹೊರತಾಗಿಯೂ, ಸಂಸತ್ ಚಲೋ ಮೆರವಣಿಗೆ ನಂತರ ನನ್ನ ಉಪವಾಸ ಮುಂದುವರಿಯುತ್ತದೆ. ಆದರೆ ತಮ್ಮ ಮೂರು ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಇಂದೇ ಉಪವಾಸ ಹಿಂಪಡೆಯುವುದಾಗಿ ಹೇಳಿದ್ದಾರೆ.
ವಾಂಗ್‌ಚುಕ್ ಅವರ ಆರೋಗ್ಯ ಸ್ಥಿತಿ ತೀವ್ರ ಕ್ಷೀಣಿಸಿದ ಹಿನ್ನೆಲೆಯಲ್ಲಿ ಶನಿವಾರ ದೆಹಲಿ ಪೊಲೀಸರು ಅವರನ್ನು ಜಂತರ್ ಮಂತರ್‌ನಿಂದ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಪ್ರಸ್ತುತ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಮತ್ತು ಗ್ಲೂಕೋಸ್ ಸ್ವೀಕರಿಸಲು ವಾಂಗ್‌ಚುಕ್ ನಿರಾಕರಿಸುತ್ತಿದ್ದಾರೆ.
ವಾಂಗ್‌ಚುಕ್ ಪ್ರಮುಖ ಷರತ್ತುಗಳು
1. ಸಂಸತ್ತಿಗೆ ಶಾಂತಿಯುತ ಮೆರವಣಿಗೆಗೆ ಅವಕಾಶ: ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಶುರುವಾಗುತ್ತಿದ್ದು, ದೇಶಾದ್ಯಂತ ಬಂದಿರುವ ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಸಂಸತ್ತಿನವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ದೆಹಲಿ ಪೊಲೀಸರು ಅವಕಾಶ ನೀಡಬೇಕು.
2. ಲಿಖಿತ ಭರವಸೆ: ‘ನೀಟ್’ (NEET) ಪರೀಕ್ಷೆ ಅಕ್ರಮ, ಪೇಪರ್ ಲೀಕ್ ಹಾಗೂ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಕುರಿತು ಕೇಂದ್ರ ಶಿಕ್ಷಣ ಸಚಿವರು ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕೃತ ಲಿಖಿತ ಭರವಸೆ ನೀಡಬೇಕು.
3. ಕೇಸ್ ರದ್ದುಗೊಳಿಸಬೇಕು: ಪ್ರತಿಭಟನೆ ಮತ್ತು ಹೋರಾಟದ ವೇಳೆ ದೆಹಲಿ ಹಾಗೂ ಇತರೆಡೆ ವಿದ್ಯಾರ್ಥಿ ಹೋರಾಟಗಾರರ ವಿರುದ್ಧ ದಾಖಲಿಸಿರುವ ಎಲ್ಲಾ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು.