ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಬೆನ್ನಲ್ಲೇ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
NEET ವಿವಾದ ಮತ್ತು ರಾಮ ಮಂದಿರ ಟ್ರಸ್ಟ್‌ನಲ್ಲಿನ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಲು ಪ್ರಧಾನಿ ಮೋದಿ ಅವರು ವಾಕ್ಚಾತುರ್ಯವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಪ್ರಧಾನಮಂತ್ರಿಯವರ ಧೋರಣೆಯನ್ನು ಖಂಡಿಸಿದರು. ಸರ್ಕಾರದ ಮುಖ್ಯಸ್ಥರಾದವರು ರಾಜಕೀಯ ವ್ಯಂಗ್ಯಗಳಿಗಿಂತ ರಚನಾತ್ಮಕ ಪರಿಹಾರಗಳತ್ತ ಗಮನಹರಿಸಬೇಕು. ನೀಟ್ (NEET) ಪರೀಕ್ಷಾ ಬಿಕ್ಕಟ್ಟಿನಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಸದ್ಯದ ನಾಯಕತ್ವದಲ್ಲಿ ರಾಷ್ಟ್ರದ ಪ್ರಗತಿಗೆ ಅಡ್ಡಿಯುಂಟಾಗುತ್ತಿದೆ ಎಂದರು.
'ಪ್ರಧಾನಿ ಮೋದಿಯವರ ಏಕೈಕ ಕೆಲಸವೆಂದರೆ ಇತರರನ್ನು ಲೇವಡಿ ಮಾಡುವುದು ಮತ್ತು ವ್ಯಂಗ್ಯದ ಮಾತುಗಳನ್ನಾಡುವುದು. ಮೊದಲು, ಜನರಿಗೆ ನಿಮ್ಮ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿ. ನಿಮ್ಮ ಆ '56 ಇಂಚಿನ ಎದೆ' ಎಲ್ಲಿ ಹೋಯಿತು? ಇಂದು ನೀವು ಇತರರನ್ನು ಟೀಕಿಸುತ್ತೀರಿ, ಆದರೆ ನಾನು ಕೇಳುತ್ತೇನೆ: ದೇಶಕ್ಕಾಗಿ ನೀವು ವಾಸ್ತವವಾಗಿ ಏನು ಮಾಡಿದ್ದೀರಿ? ನಿಮ್ಮ ಅನುಯಾಯಿಗಳು ಕಳ್ಳತನದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಟ್ರಸ್ಟ್ ರಚಿಸಲು ನೀವು ಹೇಳಿದ್ದೀರಿ ಮತ್ತು ಈಗ ಅವರು ಮನಬಂದಂತೆ ಕಳ್ಳತನ ಮಾಡುತ್ತಿದ್ದಾರೆ' ಎಂದು ದೂರಿದರು.
'ರಾಮ ಮಂದಿರ ಟ್ರಸ್ಟ್‌ಗಾಗಿ ಕಾನೂನುಗಳನ್ನು ರೂಪಿಸಿ ಜನರನ್ನು ನಾಮನಿರ್ದೇಶನ ಮಾಡಿದವರು ನೀವೇ ಮತ್ತು ಅದರಲ್ಲಿ ನಿಮ್ಮದೇ ಜನರು ಭಾಗಿಯಾಗಿದ್ದಾರೆ. ಇನ್ನು ನೀಟ್ (NEET) ವಿಷಯವನ್ನೂ ನೋಡಿ; ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಮನೆಗಳನ್ನು ತೊರೆದು, ತೀವ್ರ ಸಂಕಷ್ಟದಲ್ಲಿದ್ದಾರೆ ಮತ್ತು ಸಂಪೂರ್ಣ ಅವನತಿಯ ಅಂಚಿನಲ್ಲಿದ್ದಾರೆ. ಅವರ ಜೀವನವನ್ನು ಹಾಳುಮಾಡಿದ್ದಕ್ಕೆ ಯಾರು ಹೊಣೆ? ಕೇಂದ್ರ ಸರ್ಕಾರ ಮತ್ತು ಸ್ವತಃ ಪ್ರಧಾನಿ ಮೋದಿಯವರೇ ಕಾರಣ. ತಮ್ಮ ದೌರ್ಬಲ್ಯಗಳನ್ನು ಮರೆಮಾಚಲು ಅವರು ಇಂತಹ ಕೆಲಸಗಳನ್ನು ಮಾಡುತ್ತಾರೆ... ಯಾವುದೇ ಪ್ರಧಾನ ಮಂತ್ರಿ ಆ ರೀತಿಯಲ್ಲಿ ಮಾತನಾಡಬಾರದು... ಪ್ರತಿಯೊಬ್ಬ ಪ್ರಧಾನಿ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಮಾತನಾಡುತ್ತಾರೆಯೇ ಹೊರತು, ಮುಂದೆ ಅಪಹಾಸ್ಯಕ್ಕೆ ಕಾರಣವಾಗುವಂತಹ ಮಾತುಗಳನ್ನಾಡುವುದಿಲ್ಲ. ನಾನು ಈ ಹೇಳಿಕೆಯನ್ನು ಖಂಡಿಸುತ್ತೇನೆ ಮತ್ತು ಪ್ರಧಾನಿ ಮೋದಿ ಭವಿಷ್ಯದಲ್ಲಿ ಇಂತಹ ಟೀಕೆಗಳನ್ನು ಮಾಡುವುದರಿಂದ ದೂರವಿರಬೇಕು... ಅವರು ಅಧಿಕಾರದಲ್ಲಿ ಇರುವವರೆಗೂ ದೇಶವು ಸಮೃದ್ಧಿ ಕಾಣುವುದಿಲ್ಲ. ಅವರು ಹೋದ ನಂತರವೇ ಸಮೃದ್ಧಿ ಬರುತ್ತದೆ' ಎಂದು ಅವರು ಹೇಳಿದರು.
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದು ಸಾಂಪ್ರದಾಯಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಮೊದಲ ಖಾಸಗಿ ರಾಕೆಟ್ 'ವಿಕ್ರಮ್-1' ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿ ಇತಿಹಾಸ ಬರೆದಿರುವ 'ಸ್ಕೈರೂಟ್ ಏರೋಸ್ಪೇಸ್' ಬಾಹ್ಯಾಕಾಶ ಸಂಸ್ಥೆಯ ಯುವ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿದರು.
ಭಾರತದ ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಕ್ರಾಂತಿ ಸೃಷ್ಟಿಸಿರುವ ಈ ಸ್ಟಾರ್ಟ್ ಅಪ್ ತಂಡದ ಯುವ ವಿಜ್ಞಾನಿಗಳ ಸರಾಸರಿ ವಯಸ್ಸು ಕೇವಲ 28 ವರ್ಷ ಮಾತ್ರ. ನಾನು ಇಲ್ಲಿ ಯಾವುದೇ 56 ವರ್ಷದ 'ಯುವಕನ' ಬಗ್ಗೆ ಮಾತನಾಡುತ್ತಿಲ್ಲ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಿದರು.