ಕೋಲ್ಕತ್ತಾ: ಸುಮಾರು 19 ವರ್ಷಗಳ ಬಳಿಕ ಬಾಂಗ್ಲಾದೇಶ ಮೂಲದ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಕೋಲ್ಕತ್ತಾಗೆ ಮರಳಿದ್ದು, ತಮ್ಮ ಈ ಭೇಟಿಯನ್ನು "ಭಾವನಾತ್ಮಕ ಮನೆಗೆ ಮರಳುವ ಕ್ಷಣ" ಎಂದು ಬಣ್ಣಿಸಿದ್ದಾರೆ.
2007ರಲ್ಲಿ ನಡೆದ ತೀವ್ರ ಪ್ರತಿಭಟನೆಗಳು ಹಾಗೂ ಭದ್ರತಾ ಕಾರಣಗಳಿಂದ ಪಶ್ಚಿಮ ಬಂಗಾಳ ತೊರೆಯಬೇಕಾಗಿದ್ದ ತಸ್ಲೀಮಾ, ಇದೀಗ ಮತ್ತೆ ತಮ್ಮ ನೆಚ್ಚಿನ ನಗರಕ್ಕೆ ಕಾಲಿಟ್ಟಿದ್ದಾರೆ. ಕೋಲ್ಕತ್ತಾವನ್ನು ಹಲವು ಬಾರಿ ತಮ್ಮ "ಎರಡನೇ ಮನೆ" ಎಂದು ಕರೆದಿರುವ ತಸ್ಲೀಮಾ, ನಗರದೊಂದಿಗೆ ತಮಗಿರುವ ಭಾವನಾತ್ಮಕ ನಂಟನ್ನು ಮತ್ತೊಮ್ಮೆ ನೆನಪಿಸಿಕೊಂಡರು.
ಕೋಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಸ್ಲೀಮಾ ನಸ್ರೀನ್ ಅವರನ್ನು ಸ್ವಾಗತಿಸಲು ಅವರ ಅಭಿಮಾನಿಗಳು ಕಾದಿದ್ದರು. ಈ ವೇಳೆ ಲೇಖಕಿ ತಮಗಾಗಿ ಬಂದಿದ್ದವರಿಗೆ ಕೈಮುಗಿದು ನಮಸ್ಕರಿಸಿ, "ಮತ್ತೆ ಇಲ್ಲಿಗೆ ಮರಳಿರುವುದು ತುಂಬಾ ಸಂತಸ ತಂದಿದೆ" ಎಂದು ಭಾವುಕರಾಗಿ ಹೇಳಿದರು.
ಧಾರ್ಮಿಕ ಮೂಲಭೂತವಾದ, ಮಹಿಳಾ ಹಕ್ಕುಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಧ್ವನಿ ಎತ್ತಿದ್ದಕ್ಕಾಗಿ ಹಲವು ವರ್ಷಗಳಿಂದ ತಮ್ಮ ತವರು ಬಾಂಗ್ಲಾದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದರು. ಇದೀಗ ಅವರು, ಕೋಲ್ಕತ್ತಾಗೆ ಮರಳಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
"ನಾನು ಯಾವಾಗಲೂ ಕೋಲ್ಕತ್ತಾವನ್ನು ಪ್ರೀತಿಸುತ್ತೇನೆ. ಈ ನಗರ ನನಗೆ ಅಪಾರ ಪ್ರೀತಿ, ಗೌರವ ಮತ್ತು ಆತ್ಮೀಯತೆಯನ್ನು ನೀಡಿದೆ. 19 ವರ್ಷಗಳ ಬಳಿಕ ಇಲ್ಲಿಗೆ ಮರಳಿರುವುದು ಅತ್ಯಂತ ಭಾವನಾತ್ಮಕ ಕ್ಷಣ" ಎಂದು ತಸ್ಲೀಮಾ ಸುದ್ದಿಗಾರರಿಗೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಕೋಲ್ಕತ್ತಾದಲ್ಲಿ ಹೆಚ್ಚು ಸಮಯ ಕಳೆಯುವ ಆಸೆಯನ್ನೂ ಅವರು ವ್ಯಕ್ತಪಡಿಸಿದರು. ಆದರೆ, ತಾವು ನಗರ ತೊರೆಯಬೇಕಾದ ಸಂದರ್ಭಕ್ಕೆ ಸಂಬಂಧಿಸಿದ ರಾಜಕೀಯ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಸಿಎಂ ಕಾರ್ಯಕ್ರಮದಲ್ಲಿ ಭಾಗಿ
ತಸ್ಲೀಮಾ ನಸ್ರೀನ್ ಅವರು ಶನಿವಾರ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರವೀಂದ್ರ ಸದನ್‌ನಲ್ಲಿ ನಡೆಯಲಿರುವ ಮೂಲಭೂತವಾದ ವಿರೋಧಿ ಸಾಹಿತ್ಯ ಕಾರ್ಯಕ್ರಮದಲ್ಲಿ ಅವರು ಕವನ ವಾಚನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹಾಗೂ ಖ್ಯಾತ ಸಾಹಿತಿ ಶೀರ್ಷೇಂದು ಮುಖೋಪಾಧ್ಯಾಯ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಬಾಂಗ್ಲಾದೇಶ ತೊರೆದಿದ್ದು ಏಕೆ? 'ಲಜ್ಜಾ' ಕೃತಿಯಿಂದ ಆರಂಭವಾದ ವಿವಾದ
1993ರಲ್ಲಿ ಪ್ರಕಟವಾದ 'ಲಜ್ಜಾ' ಕಾದಂಬರಿಯ ಮೂಲಕ ತಸ್ಲೀಮಾ ನಸ್ರೀನ್ ವಿಶ್ವದ ಗಮನ ಸೆಳೆದಿದ್ದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಚಿತ್ರಿಸಿದ ಈ ಕೃತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಬಳಿಕ ಅವರ ವಿರುದ್ಧ ಜೀವ ಬೆದರಿಕೆಗಳು ಹೆಚ್ಚಾದ ಕಾರಣ 1994ರಲ್ಲಿ ಬಾಂಗ್ಲಾದೇಶ ತೊರೆಯಬೇಕಾಯಿತು. ನಂತರ ಅವರು ಹಲವು ದೇಶಗಳಲ್ಲಿ ಆಶ್ರಯ ಪಡೆದರಾದರೂ, ಭಾರತದಲ್ಲಿ ದೀರ್ಘಾವಧಿಯ ನಿವಾಸ ಅನುಮತಿಯೊಂದಿಗೆ ವಾಸಿಸುತ್ತಿದ್ದಾರೆ.
2007ರಲ್ಲಿ ಕೋಲ್ಕತ್ತಾ ತೊರೆದ ಲೇಖಕಿ
ತಸ್ಲೀಮಾ ನಸ್ರೀನ್ ಹಲವು ವರ್ಷಗಳ ಕಾಲ ಕೋಲ್ಕತ್ತಾದಲ್ಲಿ ವಾಸವಾಗಿದ್ದರು. ಆದರೆ 2007ರಲ್ಲಿ ಅವರ ವಿರುದ್ಧ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ತೊರೆಯಬೇಕಾಯಿತು. ಬಳಿಕ ಅವರು ದೆಹಲಿಯಲ್ಲಿ ನೆಲೆಸಿದ್ದು, ಅಲ್ಲಿಯೇ ವಾಸಿಸುತ್ತಿದ್ದಾರೆ. ಇದೀಗ ಬರೊಬ್ಬರಿ 19 ವರ್ಷಗಳ ಬಳಿಕ ಕೋಲ್ಕತಾಗೆ ಭೇಟಿ ನೀಡಿದ್ದಾರೆ.
ಸಾಹಿತ್ಯ ವಲಯದಲ್ಲಿ ಸಂತಸ
19 ವರ್ಷಗಳ ಬಳಿಕ ತಸ್ಲೀಮಾ ಅವರ ಕೋಲ್ಕತ್ತಾ ಭೇಟಿ ಸಾಹಿತ್ಯ ವಲಯದಲ್ಲಿ ಸಂತಸ ಮೂಡಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಹೋರಾಟಗಾರರು ಹಾಗೂ ಓದುಗರು ಈ ಭೇಟಿಯನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಲೇಖಕಿ ಮತ್ತು ಕೋಲ್ಕತ್ತಾ ನಗರದ ನಡುವಿನ ಅವಿನಾಭಾವ ಸಂಬಂಧವನ್ನು ಮತ್ತೆ ನೆನಪಿಸುವ ಬೆಳವಣಿಗೆಯಾಗಿದೆ.