13ನೇ ಮಹಡಿಯಿಂದ ಜಿಗಿದ ಮಾನವ್ 
ದೇಶ

'ವಿಧವೆ ತಾಯಿ, ತಂಗಿ ಶಿಕ್ಷಣ, ಸಾಲ ಬಾಧೆ': 13ನೇ ಮಹಡಿಯಿಂದ ಜಿಗಿದು 22 ವರ್ಷದ ಡೆಲಿವರಿ ಸಿಬ್ಬಂದಿ ಸಾವು; ಬಿರುಗಾಳಿ ಎಬ್ಬಿಸಿದ ಒಂದು ಕರೆ!

ತಂದೆಯ ಸಾವಿನ ಬಳಿಕ ಕುಟುಂಬದ ಹೊಣೆ ಹೊತ್ತಿದ್ದ, ಎರಡು ಉದ್ಯೋಗಗಳಲ್ಲಿ ದುಡಿದು ತಾಯಿ ಮತ್ತು ತಂಗಿಯ ಭವಿಷ್ಯ ಕಟ್ಟಲು ಕನಸು ಕಂಡಿದ್ದ ಯುವಕನ ಜೀವನ ಹೀಗೆ ದುರಂತ ಅಂತ್ಯ ಕಂಡಿದೆ.

ಅಹ್ಮದಾಬಾದ್: ಗುಜರಾತ್‌ನ ವಲ್ಸಾಡ್‌ನಲ್ಲಿ ಕುಟುಂಬದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಬದುಕುತ್ತಿದ್ದ 22 ವರ್ಷದ ಡೆಲಿವರಿ ಸಿಬ್ಬಂದಿಯೊಬ್ಬರು ವಸತಿ ಸಮುಚ್ಚಯದ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ವಿದ್ರಾವಕ ಘಟನೆ ವರದಿಯಾಗಿದೆ.

ಮೃತ ವ್ಯಕ್ತಿಯನ್ನು 22 ವರ್ಷದ ಮಾನವ್ ರಾಜುಭಾಯಿ ಪಟೇಲ್ ಎಂದು ಗುರುತಿಸಲಾಗಿದ್ದು, ಮಾನವ್ ವಿಧವೆ ತಾಯಿ, ಕಿರಿಯ ಸಹೋದರಿಯನ್ನು ಅಗಲಿದ್ದಾರೆ. ಗುಜರಾತ್‌ನ ವಲ್ಸಾಡ್‌ನಲ್ಲಿರುವ ಬಹುಮಹಡಿ ಅಪಾರ್ಟ್ ಮೆಂಟ್ ನ ದಮಂಗಂಗಾ ವಿಂಗ್‌ನ 13ನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾನವ್ ಕಟ್ಟಡದಿಂದ ಜಿಗಿಯುತ್ತಿರುವ ವಿಡಿಯೋ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಮಾನವ್ ಸಾವಿನಿಂದ ಆತನ ಕುಟುಂಬ ತೀವ್ರ ಆಘಾತಕ್ಕೊಳಗಾಗಿದ್ದು, ಈ ದುರಂತದ ಹಿಂದಿನ ಕಾರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕುಟುಂಬದ ಏಕೈಕ ಆಧಾರಸ್ತಂಭನಾಗಿದ್ದ ಯುವಕ

ಮಾನವ್ ತಮ್ಮ ತಾಯಿ ಸಂಗೀತಾಬೆನ್ ಪಟೇಲ್ ಹಾಗೂ 15 ವರ್ಷದ ಸಹೋದರಿ ಯಶ್ವಿಯೊಂದಿಗೆ ವಲ್ಸಾಡ್‌ನ ಸುಘಡ್ ಫಲಿಯಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಸುಮಾರು ಒಂದೂವರೆ ವರ್ಷದ ಹಿಂದೆ ಅವರ ತಂದೆ ರಾಜುಭಾಯಿ ಪಟೇಲ್ ಅನಾರೋಗ್ಯದಿಂದ ನಿಧನರಾಗಿದ್ದು, ಇದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.

ತಂದೆಯ ಸಾವಿನ ಬಳಿಕ ಕುಟುಂಬದ ಮುಖ್ಯ ಆಧಾರವಾಗಿದ್ದ ಮಾನವ್, ತಾಯಿಯೊಂದಿಗೆ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದರು. ತಾಯಿ ತರಕಾರಿ ಮಾರಾಟ ಮಾಡುತ್ತಿದ್ದರೆ ಅವರಿಗೆ ಸಾಥ್ ನೀಡಿದ್ದ ಮಾನವ್ ತಾನೂ ಕೂಡ ಕೆಲಸಕ್ಕೆ ಸೇರಿ ಕುಟುಂಬವನ್ನು ನಡೆಸುತ್ತಿದ್ದರು.

ಎರಡೆರಡು ಉದ್ಯೋಗ, ದೊಡ್ಡ ಕನಸು

ಕುಟುಂಬದವರ ಪ್ರಕಾರ, ಮಾನವ್ ಅವರ ದಿನಚರಿಯೇ ಅವರ ಪರಿಶ್ರಮಕ್ಕೆ ಸಾಕ್ಷಿಯಾಗಿತ್ತು. ಮಾನವ್ ಒಂದಲ್ಲ.. ಎರಡೆರಡು ಕೆಲಸ ಮಾಡುತ್ತಿದ್ದ. ಬೆಳಿಗ್ಗೆ ತಮ್ಮ ಚಿಕ್ಕಪ್ಪನೊಂದಿಗೆ ಐಸ್‌ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಮಧ್ಯಾಹ್ನ ಡೊಮಿನೋಸ್ ಪಿಜ್ಜಾ ಡೆಲಿವರಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ತಾಯಿ ಮತ್ತು ತಂಗಿಯ ಭವಿಷ್ಯಕ್ಕಾಗಿ ದೀರ್ಘ ಸಮಯ ದುಡಿಯುತ್ತಿದ್ದ. ಅಂತೆಯೇ ಉತ್ತಮ ಜೀವನಕ್ಕಾಗಿ ವಿದೇಶಕ್ಕೆ ತೆರಳಿ ಕೆಲಸಕ್ಕೆ ಸೇರುವ ಕನಸನ್ನೂ ಹೊಂದಿದ್ದ ಎಂದು ಹೇಳಲಾಗಿದೆ.

ಕುಟುಂಬಕ್ಕಾಗಿ ಉನ್ನತ ಶಿಕ್ಷಣ ತ್ಯಜಿಸಿದ್ದ ಮಾನವ್

ಮಾನವ್ ಅವರ ಚಿಕ್ಕಪ್ಪ ರಾಹುಲ್‌ಭಾಯಿ ಪಟೇಲ್ ಈ ಬಗ್ಗೆ ಮಾತನಾಡಿದ್ದು, ಮಾನವ್ ಓದಿನಲ್ಲಿ ಚುರುಕಾಗಿದ್ದ, 10ನೇ ತರಗತಿಯ ನಂತರ ಐಟಿಐ ಪೂರ್ಣಗೊಳಿಸಿದ್ದರು. ಆದರೆ ಕುಟುಂಬದ ಜವಾಬ್ದಾರಿಗಳ ಕಾರಣದಿಂದ ಮುಂದಿನ ಶಿಕ್ಷಣವನ್ನು ತ್ಯಜಿಸಬೇಕಾಯಿತು. ತಂದೆಯ ಅನಾರೋಗ್ಯ ಹಾಗೂ ಬಳಿಕದ ಸಾವಿನ ನಂತರ ಮನೆಯ ಸಂಪೂರ್ಣ ಹೊಣೆಗಾರಿಕೆ ಮಾನವ್ ಹೆಗಲ ಮೇಲೆ ಬಿದ್ದಿತ್ತು. ಅಪಾರ ಒತ್ತಡದಲ್ಲಿದ್ದರೂ ತಮ್ಮ ಸಮಸ್ಯೆಗಳ ಬಗ್ಗೆ ಅವರು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ ಎಂದು ಬಂಧುಗಳು ತಿಳಿಸಿದ್ದಾರೆ.

ಬಿರುಗಾಳಿ ಎಬ್ಬಿಸಿದ ಒಂದೇ ಒಂದು ದೂರವಾಣಿ ಕರೆ

ಕಳೆದ ಭಾನುವಾರ ಮಧ್ಯಾಹ್ನ ಸುಮಾರು 1.15ರ ವೇಳೆಗೆ ಈ ದುರಂತ ಸಂಭವಿಸಿದ್ದು, ಮಾನವ್ ಅವರ ಅತ್ತೆ ಜಾಗೃತಿಬೆನ್ ಪಟೇಲ್ ಅವರಿಗೆ ಪರಿಚಿತ ವ್ಯಕ್ತಿಯೊಬ್ಬರಿಂದ ಕರೆ ಬಂದಿದ್ದು, ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡುವಂತೆ ತಿಳಿಸಲಾಯಿತು. ಬಳಿಕ ಅಧಿಕಾರಿಗಳು ತಕ್ಷಣ ಟಿಥಲ್ ರಸ್ತೆಯಲ್ಲಿರುವ ಸರ್ದಾರ್ ಹೈಟ್ಸ್‌ಗೆ ಬರುವಂತೆ ಸೂಚಿಸಿದರು. ಸಂಗೀತಾಬೆನ್, ಜಾಗೃತಿಬೆನ್ ಹಾಗೂ ರಾಹುಲ್‌ಭಾಯಿ ದಮಂಗಂಗಾ ವಿಂಗ್‌ನ ವಸತಿ ಸಮುಚ್ಚಯಕ್ಕೆ ಧಾವಿಸಿದಾಗ, ಅಲ್ಲಿ ಎದುರಾಗಿದ್ದ ದೃಶ್ಯ ಅವರ ಬದುಕನ್ನೇ ಬದಲಿಸಿತು.

ಮಗನ ಮೃತದೇಹ ಕಂಡು ಕುಸಿದ ತಾಯಿ

ಕಟ್ಟಡದ ಆವರಣದಲ್ಲಿ ಪೊಲೀಸರು ಹಾಗೂ ಸ್ಥಳೀಯರು ಈಗಾಗಲೇ ಜಮಾಯಿಸಿದ್ದರು. ನೆಲದ ಮೇಲೆ ಬಿಳಿ ಬಟ್ಟೆಯಿಂದ ಮುಚ್ಚಿದ ಮೃತದೇಹವೊಂದು ಇತ್ತು. ಮೃತರನ್ನು ಗುರುತಿಸುವಂತೆ ಪೊಲೀಸರು ತಾಯಿಗೆ ತಿಳಿಸಿದರು. ಬಟ್ಟೆಯನ್ನು ತೆರೆದು ರಕ್ತದ ಮಡುವಿನಲ್ಲಿ ಬಿದ್ದಿದ್ದ ತನ್ನ ಏಕೈಕ ಮಗನನ್ನು ಕಂಡ ಕ್ಷಣದಲ್ಲಿ ಸಂಗೀತಾಬೆನ್ ಕುಸಿದುಬಿದ್ದರು. ಅವರ ಆಕ್ರಂದನ ಕೇಳಿ ಸ್ಥಳದಲ್ಲಿದ್ದವರು ಕಣ್ಣೀರಿಟ್ಟರು ಎಂದು ಸಾಕ್ಷಿದಾರರು ತಿಳಿಸಿದ್ದಾರೆ. ಎತ್ತರದಿಂದ ಬಿದ್ದ ಪರಿಣಾಮ ಮಾನವ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು.

ಸಾಲ ಬಾಧೆ ಕಾರಣವೇ?

ರಾಹುಲ್‌ಭಾಯಿ ಪಟೇಲ್ ಅವರ ಪ್ರಕಾರ, ಮಾನವ್ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕುಟುಂಬ ಎಂದಿಗೂ ಊಹಿಸಿರಲಿಲ್ಲ. ಆತ ಜವಾಬ್ದಾರಿಯುತ ಹಾಗೂ ದುಡಿಯುವ ಯುವಕನಾಗಿದ್ದ. ಡೆಲಿವರಿ ಕೆಲಸದ ವೇಳೆ ಸಂಬಂಧಿಕರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರುತ್ತಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಒತ್ತಡದಲ್ಲಿರುವಂತೆ ಕಾಣುತ್ತಿದ್ದ. ಡೆಲಿವರಿ ವೇಳೆ ನನ್ನ ಮನೆಯ ಮುಂದೆ ಹಾದುಹೋಗುವಾಗ ಯಾವಾಗಲೂ ನನ್ನನ್ನು ಕೂಗಿ ಮಾತನಾಡಿಸುತ್ತಿದ್ದ. ಈಗ ಇಂತಹ ಕೆಲಸ ಮಾಡುತ್ತಾನೆ ಎಂದು ಎಂದಿಗೂ ಅನಿಸಿರಲಿಲ್ಲ," ಎಂದು ಹೇಳಿದ್ದಾರೆ.

ಅಂತಿಮ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆ

ಪೊಲೀಸರ ಮಾಹಿತಿ ಪ್ರಕಾರ, 13ನೇ ಮಹಡಿಯಲ್ಲಿದ್ದ ಮಾನವ್ ಅವರ ಕೊನೆಯ ಕ್ಷಣಗಳು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿವೆ. ಮಧ್ಯಾಹ್ನ ಸುಮಾರು 1.14ಕ್ಕೆ ಅವರು ಮಹಡಿಗೆ ತಲುಪಿದ್ದು, ಕೆಲವು ನಿಮಿಷಗಳ ಕಾಲ ಲಾಬಿಯಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಅವರು ಪದೇ ಪದೇ ಮೊಬೈಲ್ ಪರಿಶೀಲಿಸುತ್ತಿದ್ದರು ಹಾಗೂ ಸುತ್ತಮುತ್ತ ನೋಡುತ್ತಿದ್ದರು.

ನಂತರ ಜಿಗಿದ ದಿಕ್ಕಿನತ್ತ ಮೊದಲು ಗಮನ ಹರಿಸಿದ್ದರು. ಲಾಬಿಯಲ್ಲಿ ಅಡ್ಡಾಡುತ್ತಾ ಮೊಬೈಲ್ ನೋಡುತ್ತಿದ್ದರು. ಯಾರನ್ನೋ ಕಾಯುತ್ತಿರುವಂತೆ ಹಲವು ಬಾರಿ ಸುತ್ತಲೂ ನೋಡುತ್ತಿದ್ದರು. ಸಮೀಪದ ಗೋಡೆಯ ಮೇಲೆ ಕುಳಿತಿದ್ದ ಪಾರಿವಾಳಗಳನ್ನು ಕೂಡ ಅವರು ಗಮನಿಸುತ್ತಿದ್ದ ದೃಶ್ಯ ದಾಖಲಾಗಿದೆ. ಒಂದು ಹಂತದಲ್ಲಿ ಮೊಬೈಲ್ ಅನ್ನು ಬದಿಗಿಟ್ಟು ಜಿಗಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್ ತನಿಖೆ

ಸ್ಥಳೀಯರು ತಕ್ಷಣ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೂ, ವೈದ್ಯರು ಅವರನ್ನು ಮೃತಪಟ್ಟಿದ್ದಾರೆಂದು ಘೋಷಿಸಿದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಲ್ಸಾಡ್ ಮಹಾನಗರ ಪಾಲಿಕೆ ಆಸ್ಪತ್ರೆಗೆ ರವಾನಿಸಲಾಯಿತು. ವಲ್ಸಾಡ್ ನಗರ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಎಎಸ್‌ಐ ಎಚ್.ಎಸ್. ಪಟೋಲಿಯಾ ಮತ್ತು ಎಎಸ್‌ಐ ಮನೋಜ್‌ಕುಮಾರ್ ನಟ್‌ವರ್ಲಾಲ್ ತನಿಖೆ ನಡೆಸುತ್ತಿದ್ದಾರೆ.

ಮಾನವ್ ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ, ಆರ್ಥಿಕ ಹಾಗೂ ಮಾನಸಿಕ ಒತ್ತಡ ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

ತಂದೆಯ ಸಾವಿನ ಬಳಿಕ ಕುಟುಂಬದ ಹೊಣೆ ಹೊತ್ತಿದ್ದ, ಎರಡು ಉದ್ಯೋಗಗಳಲ್ಲಿ ದುಡಿದು ತಾಯಿ ಮತ್ತು ತಂಗಿಯ ಭವಿಷ್ಯ ಕಟ್ಟಲು ಕನಸು ಕಂಡಿದ್ದ ಯುವಕನ ಜೀವನ ಹೀಗೆ ದುರಂತ ಅಂತ್ಯ ಕಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಲ್ಕತಾ ಸರ್ಕಾರಿ ಕಟ್ಟಡದಲ್ಲಿ ಅಗ್ನಿ ದುರಂತ: ಚುನಾವಣೆಯಲ್ಲಿ ಬಳಸಲಾಗಿದ್ದ 4,000 ಇವಿಎಂ ಭಸ್ಮ; ಅವಘಡದ ಸುತ್ತ ಅನುಮಾನದ ಹುತ್ತ!

ಇರಾನ್ ಸಂಘರ್ಷ: ಯೋಜನೆಗಳನ್ನು ನೆತನ್ಯಾಹು ಅವರಿಂದ ಮುಚ್ಚಿಟ್ಟ ಟ್ರಂಪ್; ಇಸ್ರೇಲ್ ಪ್ರಧಾನಿ ಬೆನ್ನಿಗೆ ಅಮೆರಿಕ ಅಧ್ಯಕ್ಷರ ಚೂರಿ?

ಬಾಲಿವುಡ್​ನಲ್ಲಿ 'ಪಾಕ್ ಮೇಲಿನ ಪ್ರೀತಿ' ಇನ್ನೂ ಕಮ್ಮಿಯಾಗಿಲ್ಲ: ರಣವೀರ್​ ಸಿಂಗ್ ನಿಷೇಧಕ್ಕೆ ಕಂಗನಾ ಗರಂ!​

ಬ್ಯಾಂಕಾಕ್ ನಿಂದ ಮುಂಬೈ ಗೆ 11.82 ಕೋಟಿ ಮೌಲ್ಯದ ಗಾಂಜಾ ಸಾಗಣೆ: ಮಾಜಿ ಮಿಸೆಸ್ ಕೇರಳ ಬಂಧನ!

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು, ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್; Video

SCROLL FOR NEXT