ಪಾಟ್ನಾ: ಬಿಹಾರದಲ್ಲಿ ಸರ್ಕಾರಿ ಆಸ್ತಿ ಕಳ್ಳತನ ಪ್ರಕರಣಗಳು ಹೊಸದೇನಲ್ಲ.. ಆದರೆ ಇಲ್ಲೊಂದು ಕಳ್ಳರ ಗುಂಪು ಬರೊಬ್ಬರಿ 132 ಅಡಿ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದಿದೆ.
ಹೌದು.. ಈ ಹಿಂದೆ ಬಿಹಾರದಲ್ಲಿ ಹಳೆಯ ರೈಲ್ವೆ ಸೇತುವೆ ಕಳ್ಳತನ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಈ ಪ್ರಕರಣ ಹಸಿರಾಗಿರುವಂತೆಯೇ ಅದನ್ನೂ ಮೀರಿಸುವಂತಹ ಮತ್ತೊಂದು ಕಳ್ಳತನ ವರದಿಯಾಗಿದೆ.
ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಡುಮ್ರಾವ್ ಪ್ರದೇಶದಲ್ಲಿದ್ದ 132 ಅಡಿ ಎತ್ತರದ ದೂರಸಂಪರ್ಕ ಟವರ್ ಹಾಗೂ 15 ಕೆವಿಎ ಜನರೇಟರ್ ಅನ್ನೇ ಕಳ್ಳರು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.
ಬೆಳಕಿಗೆ ಬಂದಿದ್ದೇ ರೋಚಕ
ಹಲವು ವರ್ಷಗಳಿಂದ ಕಾರ್ಯನಿರ್ವಹಿಸದೆ ಇದ್ದ ಮೊಬೈಲ್ ಟವರ್ ದುರಸ್ತಿಗಾಗಿ GTL ಇನ್‌ಫ್ರಾಸ್ಟ್ರಕ್ಚರ್ ಕಂಪನಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ವಸತಿ ಪ್ರದೇಶದ ಮಧ್ಯದಲ್ಲಿದ್ದ ಬೃಹತ್ ಟವರ್ ಯಾರಿಗೂ ಗೊತ್ತಾಗದೆ ಕಾಣೆಯಾಗಿರುವುದು ಸ್ಥಳೀಯರನ್ನು ಆಶ್ಚರ್ಯಕ್ಕೀಡು ಮಾಡಿದೆ.
ಸ್ಥಳಕ್ಕೆ ತಲುಪಿದ ಅಧಿಕಾರಿಗಳು 132 ಅಡಿ ಎತ್ತರದ ಟವರ್ ಸಂಪೂರ್ಣವಾಗಿ ಇಲ್ಲದಿರುವುದನ್ನು ಕಂಡು ಬೆಚ್ಚಿಬಿದ್ದರು. ಟವರ್ ಜೊತೆಗೆ ಅಲ್ಲಿದ್ದ 15 ಕೆವಿಎ ಜನರೇಟರ್ ಸೆಟ್ ಹಾಗೂ ಇತರ ತಾಂತ್ರಿಕ ಉಪಕರಣಗಳೂ ನಾಪತ್ತೆಯಾಗಿದ್ದವು. ಈ ಬಗ್ಗೆ ಕಂಪನಿಯ ಪ್ರತಿನಿಧಿಯೊಬ್ಬರು ಡುಮ್ರಾವ್ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದು, ಟವರ್ ಹಾಗೂ ಸಂಬಂಧಿತ ಉಪಕರಣಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಕ್ಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭಂ ಆರ್ಯಾ ಮಾತನಾಡಿ, “ಟವರ್ ತೆರವುಗೊಳಿಸಿರುವ ಬಗ್ಗೆ ದೂರು ಬಂದಿದೆ. ದೂರು ಸ್ವೀಕರಿಸಿದ ಬಳಿಕ ಪ್ರಕರಣದ ತನಿಖೆ ನಡೆಸಲಾಗುತ್ತಿದೆ,” ಎಂದು ಹೇಳಿದರು. ಅಂತೆಯೇ ಭೂಮಿಯ ಮಾಲೀಕರನ್ನು ಹಾಗೂ ಸಂಬಂಧಪಟ್ಟ ಇತರ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುವುದು. ತನಿಖೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಭೂಮಿಯ ಮಾಲೀಕ ಹರೇನಾಥ್ ಯಾದವ್ ಅವರು, ಸುಮಾರು 10 ವರ್ಷಗಳ ಹಿಂದೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದರು.
“2022ರಲ್ಲಿ ಒಪ್ಪಂದದ ಅವಧಿ ಮುಗಿಯಿತು. ಅದರ ನಂತರ ಟವರ್ ಸ್ಥಾಪನೆಗಾಗಿ ಬಳಸಿದ ಭೂಮಿಗೆ ಕಂಪನಿ ಬಾಡಿಗೆ ಪಾವತಿಸುವುದನ್ನೂ ನಿಲ್ಲಿಸಿತು. ನಾವು ನಾಲ್ಕು ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ಟವರ್ ನಾಪತ್ತೆಯಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ,” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಸ್ಥಳೀಯ ನಿವಾಸಿಗಳ ಪ್ರಕಾರ, ಸುಮಾರು 15 ವರ್ಷಗಳ ಹಿಂದೆ ಈ ಟವರ್ ಅಳವಡಿಸಲಾಗಿತ್ತು. “ಆದರೆ ಅದು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಈಗ ಟವರ್ ಕಾಣೆಯಾಗಿರುವುದು ನಮಗೆ ಗೊತ್ತಾಗಿದೆ,” ಎಂದು ಸ್ಥಳೀಯ ನಿವಾಸಿ ವಿಕಾಸ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸೇತುವೆ ಕಳ್ಳತನ ವೈರಲ್
ಇದಕ್ಕೂ ಮೊದಲು, ಇದೇ ಬಿಹಾರದ ರೋಹ್ತಾಸ್ ಜಿಲ್ಲೆಯ ಡೆಹ್ರಿ-ಆನ್-ಸೋನ್ ಪ್ರದೇಶದಲ್ಲಿ ಸೋನ್ ನದಿಯ ಮೇಲಿದ್ದ ಬಳಕೆಯಲ್ಲದ ಕಬ್ಬಿಣದ ರೈಲ್ವೆ ಸೇತುವೆಯ ಬಹುಭಾಗವನ್ನು ಕಳವು ಮಾಡಲಾಗಿತ್ತು. 2022ರಲ್ಲಿ, ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ **60 ಅಡಿ ಉದ್ದದ ಹಾಗೂ 500 ಟನ್ ತೂಕದ ಕಬ್ಬಿಣದ ಸೇತುವೆಯನ್ನು, ಸರ್ಕಾರಿ ಅಧಿಕಾರಿಗಳಂತೆ ನಟಿಸಿದ ಕಳ್ಳರು ಕದ್ದು ಸಾಗಿಸಿದ್ದರು.
ಅದೇ ರೀತಿ, 2023ರ ಫೆಬ್ರವರಿಯಲ್ಲಿ ಸಮಸ್ತಿಪುರ ಜಿಲ್ಲೆಯಲ್ಲಿ ಸುಮಾರು 2 ಕಿಲೋಮೀಟರ್ ಉದ್ದದ ರೈಲು ಹಳಿ ಮತ್ತು ಅದರ ಸ್ಕ್ರಾಪ್ ಸಾಮಗ್ರಿಯನ್ನೂ ಕಳ್ಳರು ಕಳವು ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಎರಡೂ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದ್ದರೂ, ಪೊಲೀಸ್ ತನಿಖೆಯಿಂದ ಇದುವರೆಗೆ ಯಾವುದೇ ಮಹತ್ವದ ಬೆಳವಣಿಗೆ ಹೊರಬಂದಿಲ್ಲ.