ನವದೆಹಲಿ: ಜೂನ್ 17 ರಂದು ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ (MoU) ನಂತರ ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರ ಸುಗಮಗೊಳ್ಳುತ್ತಿದೆ. ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಭಾರತಕ್ಕೆ ತೆರಳುವ 11 ಹಡಗುಗಳು ಜಲಮಾರ್ಗವನ್ನು ಯಶಸ್ವಿಯಾಗಿ ದಾಟಿವೆ. ಆದಾಗ್ಯೂ, ಭಾರತೀಯ ಧ್ವಜ ಹೊಂದಿರುವ 10 ಹಡಗುಗಳು ಇನ್ನೂ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಕಾಯುತ್ತಿವೆ. ಇದಲ್ಲದೆ ಎರಡು ಇತ್ತೀಚೆಗೆ ಅಲ್ಲಿಗೆ ಬಂದಿವೆ.
ಜೂನ್ 17 ರಂದು ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಭಾರತಕ್ಕೆ ತೆರಳುವ 11 ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಾರ್ಮುಜ್ ದಾಟಿದ ಹಡಗುಗಳಲ್ಲಿ ಮೂರು ಭಾರತೀಯ ಧ್ವಜ ಹೊಂದಿರುವ ಕಚ್ಚಾ ತೈಲ ಟ್ಯಾಂಕರ್‌ಗಳು ಸೇರಿವೆ. ಪ್ರತಿಯೊಂದೂ 285,000 ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಕಚ್ಚಾ ತೈಲವನ್ನು ಸಾಗಿಸುತ್ತಿತ್ತು. ಒಂದು ವಿದೇಶಿ ಧ್ವಜ ಹೊಂದಿರುವ ಎಲ್‌ಪಿಜಿ ಅನಿಲ ಸಾಗಿಸುತ್ತಿದ್ದ ಹಡಗು ಆಗಿದೆ ಎಂದರು.
ಒಂದು ವಿದೇಶಿ ಧ್ವಜ ಹೊಂದಿರುವ ಕಚ್ಚಾ ತೈಲ ಟ್ಯಾಂಕರ್ ಆಗಿದ್ದು, ರಸಗೊಬ್ಬರ ಸಾಗಿಸುತ್ತಿದ್ದ ಆರು ವಿದೇಶಿ ಧ್ವಜ ಹೊಂದಿರುವ ಬೃಹತ್ ಹಡಗುಗಳು ಸೇರಿವೆ, ಉಳಿದ ಭಾರತ ಧ್ವಜ ಹೊಂದಿರುವ ಹಡಗುಗಳು ಸಹ ಶೀಘ್ರದಲ್ಲೇ ಹಾರ್ಮುಜ್ ಜಲಸಂಧಿ ದಾಟುವ ವಿಶ್ವಾಸವಿದೆ ಎಂದು ಹೇಳಿದರು.
ಹಾರ್ಮುಜ್ ಜಲಸಂಧಿಯಲ್ಲಿ ಇನ್ನು ಮುಂದೆ ಅಮೆರಿಕದ ನೌಕಾ ದಿಗ್ಬಂಧನ ಇರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ನಂತರ ಮತ್ತು ಇರಾನ್ ಪರಮಾಣು ತಪಾಸಣೆಗೆ ಅನುಮತಿ ನೀಡಲು ಒಪ್ಪಿಕೊಂಡಿದೆ ಎಂದು ಹೇಳಿಕೆ ನಂತರ ಸರಕು ಹಡಗುಗಳು ಸಂಚಾರ ಆರಂಭಿಸಿವೆ. ಆದಾಗ್ಯೂ, ಮಧ್ಯಂತರ ಒಪ್ಪಂದದ ಹೊರತಾಗಿಯೂ ನಿರಂತರ ಉದ್ವಿಗ್ನತೆಯನ್ನು ಇರಾನ್ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳ ಸಂಚಾರ ಹೆಚ್ಚಾಗಿದೆ. ಆದರೂ ಸಂಘರ್ಷ ಪ್ರಮಾಣ ಕಡಿಮೆಯಾಗಿದೆ. ಕಡಲ ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ಪ್ರಕಾರ, ಶುಕ್ರವಾರ ಮತ್ತು ಭಾನುವಾರದ ನಡುವೆ 71 ಹಡಗುಗಳು ಜಲಮಾರ್ಗವನ್ನು ದಾಟಿವೆ. ಇದರಲ್ಲಿ ಶನಿವಾರ ಒಂದೇ ದಿನ 35 ಹಡುಗಳು ಹಾರ್ಮುಜ್ ಜಲಸಂಧಿ ದಾಟಿವೆ. ಸಂಘರ್ಷದ ಮುನ್ನ ಜಲಸಂಧಿಯಲ್ಲಿ ಸಾಮಾನ್ಯವಾಗಿ ಪ್ರತಿದಿನ 100 ರಿಂದ 130 ಹಡಗುಗಳು ಸಂಚಾರ ನಿರ್ವಹಿಸುತ್ತಿದ್ದವು ಎನ್ನಲಾಗಿದೆ.