ನವದೆಹಲಿ: ದೆಹಲಿ ನ್ಯಾಯಾಧೀಶರೊಬ್ಬರು ಸಫ್ದರ್ಜಂಗ್ ಪ್ರದೇಶದ ಗ್ರೀನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಲ್ಲಿಯೇ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಕುಟುಂಬ ಸದಸ್ಯರು ಕಿರುಕುಳ ಎಂದು ಆರೋಪಿಸಿದ್ದು, ಇದೀಗ ಈ ಸುತ್ತ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮೃತರನ್ನು ಅಮನ್ ಕುಮಾರ್ ಶರ್ಮಾ (30) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಅಮನ್ ಅವರ ಸೋದರ ಮಾವ ಶಿವಂ ಮಾಡಿದ ಪಿಸಿಆರ್ ಕರೆಯನ್ನು ಸ್ವೀಕರಿಸಿದ ನಂತರ ತಂಡವೊಂದು ಸ್ಥಳಕ್ಕೆ ಧಾವಿಸಿ ವಿಚಾರಣೆಯನ್ನು ಪ್ರಾರಂಭಿಸಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಆದಾಗ್ಯೂ, ಶರ್ಮಾ ಅವರು ಮಾನಸಿಕ ಒತ್ತಡದಲ್ಲಿದ್ದರು ಮತ್ತು ಅವರಿಗೆ ಕಿರುಕುಳ ನೀಡಲಾಗಿತ್ತು ಎಂದು ಕುಟುಂಬವು ಗಂಭೀರ ಆರೋಪಗಳನ್ನು ಹೊರಿಸಿದೆ.
ಮೃತರ ಸಂಬಂಧಿ ರಾಜೇಶ್ ಶರ್ಮಾ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿ, ಅಮನ್ ಅವರ ತಂದೆ ಪ್ರೇಮ್ ಶರ್ಮಾ ತಮ್ಮ ಮಗನ ಸಾವಿನ ಸುದ್ದಿ ತಿಳಿದಾಗ ದುಃಖಿತರಾಗಿದ್ದರು ಮತ್ತು ತಡರಾತ್ರಿ 1.30ರ ಸುಮಾರಿಗೆ ಕುಟುಂಬಕ್ಕೆ ಮಾಹಿತಿ ಬಂದ ನಂತರ 'ತುಂಬಾ ಅಳುತ್ತಿದ್ದರು' ಎಂದು ಹೇಳಿದ್ದಾರೆ.
'ನನ್ನ ಮಗ, ಅಮನ್‌ನ ಸೋದರ ಮಾವ ಮತ್ತು ನನ್ನ ಸೊಸೆ ಗ್ರೀನ್ ಪಾರ್ಕ್‌ಗೆ ಹೋಗಿದ್ದರು. ಆ ವೇಳೆಗಾಗಲೇ ಅಮನ್‌ನನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿರುವುದಾಗಿ ಘೋಷಿಸಲಾಯಿತು' ಎಂದು ರಾಜೇಶ್ ಶರ್ಮಾ ಹೇಳಿದರು.
ಪೊಲೀಸರಿಗೆ ಮೃತನ ತಂದೆ ಪ್ರೇಮ್ ಶರ್ಮಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ, ಘಟನೆ ನಡೆದ ದಿನ ರಾತ್ರಿ 10 ಗಂಟೆ ಸುಮಾರಿಗೆ ಅಮನ್ ತನ್ನ ತಂದೆ ಪ್ರೇಮ್ ಶರ್ಮಾ ಅವರಿಗೆ ಕರೆ ಮಾಡಿ ದುಃಖ ವ್ಯಕ್ತಪಡಿಸಿದ್ದ. 'ನಾನು ತುಂಬಾ ತೊಂದರೆಗೀಡಾಗಿದ್ದೇನೆ ಮತ್ತು ನಾನು ಬದುಕುವುದು ಕಷ್ಟಕರವಾಗಿದೆ. ಎರಡು ತಿಂಗಳಿನಿಂದ ನನಗೆ ಕಿರುಕುಳ ನೀಡಲಾಗುತ್ತಿದೆ' ಎಂದು ಹೇಳಿದ್ದನು ಎಂದಿದ್ದಾರೆ.
ಕುಟುಂಬದ ಪ್ರಕಾರ, ಪ್ರೇಮ್ ಶರ್ಮಾ ಅಲ್ವಾರ್‌ನಿಂದ ಧಾವಿಸಿ ಮಧ್ಯರಾತ್ರಿಯ ಸುಮಾರಿಗೆ ನಿವಾಸವನ್ನು ತಲುಪಿದಾಗ, 'ಅಮನ್, ನ್ಯಾಯಾಧೀಶೆಯಾಗಿರುವ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು ಎಂದು ತಿಳಿಸಲಾಯಿತು. ಅಮನ್ ಪತ್ನಿಯ ಸಹೋದರಿ ಐಎಎಸ್ ಅಧಿಕಾರಿಯಾಗಿದ್ದು, ಜಮ್ಮುವಿನಲ್ಲಿ ನಿಯೋಜಿಸಲಾಗಿದೆ' ಎಂದು ಅವರು ಹೇಳಿದರು.
'ರಾತ್ರಿಯಿಡೀ ದಂಪತಿ ನಡುವೆ ಜಗಳವಾಗಿತ್ತು. ಅವರ ಪತ್ನಿ ತುಂಬಾ ಕೋಪಗೊಂಡು ಕೂಗುತ್ತಿದ್ದರು. ಆದರೆ, ಅಮನ್ ಅಳುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಎಲ್ಲವೂ ಸ್ತಬ್ಧವಾಯಿತು' ಎಂದು ಅವರು ಹೇಳಿದರು.
ಪ್ರೇಮ್ ಶರ್ಮಾ ನಂತರ ತಮ್ಮ ಮಗನನ್ನು ಹುಡುಕಲು ಪ್ರಯತ್ನಿಸಿದಾಗ, ಆತ ಕೋಣೆಯಲ್ಲಿ ಇರಲಿಲ್ಲ. ಅವರು ಅಮನ್ ಅವರಿಗೆ ಫೋನ್ ಮಾಡಿದಾಗ, ಸ್ನಾನಗೃಹದ ಒಳಗಿನಿಂದ ರಿಂಗ್‌ಟೋನ್ ಬಂದಿತು. ಪದೇ ಪದೆ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಹಿಂಭಾಗದ ಕಿಟಕಿ ಗಾಜನ್ನು ಒಡೆದು ನೋಡಿದಾಗ, 'ಅಮನ್ ದುಪಟ್ಟಾದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದನು. ಆತನನ್ನು ಕೆಳಗೆ ಇಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು' ಎಂದು ರಾಜೇಶ್ ಶರ್ಮಾ ಹೇಳಿದರು.
ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಮತ್ತು ಘಟನೆಗೆ ಕಾರಣವಾದ ಸಂದರ್ಭಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕೃತ ದಾಖಲೆಗಳ ಪ್ರಕಾರ, ಶರ್ಮಾ ಜೂನ್ 19, 2021 ರಂದು ದೆಹಲಿ ನ್ಯಾಯಾಂಗ ಸೇವೆಗಳಿಗೆ ಸೇರಿದರು. ಪುಣೆಯ ಸಿಂಬಿಯೋಸಿಸ್ ಕಾನೂನು ಶಾಲೆಯಿಂದ ಕಾನೂನು ಪದವೀಧರರಾದ ಅವರು, ಅಕ್ಟೋಬರ್ 2025ರಿಂದ ಈಶಾನ್ಯ ಜಿಲ್ಲೆಯ ಕಾರ್ಕಾರ್ಡೂಮಾ ನ್ಯಾಯಾಲಯಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಪೂರ್ಣ ಸಮಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.