ಕೋಲ್ಕತ್ತಾ: ಬಿಜೆಪಿಯ ಭರ್ಜರಿ ಗೆಲುವಿನ ಹೊರತಾಗಿಯೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ ಒಂದು ದಿನದ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬುಧವಾರ ತಮ್ಮ ನಿಲುವನ್ನು ಗಟ್ಟಿಗೊಳಿಸಿದ್ದಾರೆ.
ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ತಿರುಚಲಾಗಿದೆ ಎಂಬ ಆರೋಪದ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ ರೀತಿಯಲ್ಲಿ ಪಕ್ಷದ ನಾಯಕರು ಇದನ್ನು ರೂಪಿಸಿದ್ದು, ರಾಜಕೀಯ ಹಾಗೂ ಕಾನೂನು ಹೋರಾಟದ ಸುಳಿವು ನೀಡಿದ್ದಾರೆ.
ತಮ್ಮ ಕಾಲಿಘಾಟ್ ನಿವಾಸದಲ್ಲಿ ಹೊಸದಾಗಿ ಆಯ್ಕೆಯಾದ ಟಿಎಂಸಿ ಶಾಸಕರು ಮತ್ತು ಹಿರಿಯ ನಾಯಕರ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿ ಚುನಾವಣೆಯನ್ನು “ಲೂಟಿ” ಮಾಡಿದೆ ಮತ ಎಣಿಕೆ ವೇಳೆ ದೊಡ್ಡ ಪ್ರಮಾಣದಲ್ಲಿ ತಿರುಚಲಾಗಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟೇಲಿರುವುದಾಗಿ ಹೇಳಿರುವುದಾಗಿ ವರದಿಯಾಗಿದೆ.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ, ಚುನಾವಣೆಯಲ್ಲಿ ಹಿನ್ನಡೆ ಹಾಗೂ ಪಕ್ಷದ ಭವಿಷ್ಯದ ಕಾರ್ಯತಂತ್ರ ಕುರಿತು ಚರ್ಚೆ ನಡೆಸಲಾಗಿದೆ.ಬಿಜೆಪಿಯವರು ಬೇಕಾದ್ರೆ ರಾಷ್ಟ್ರಪತಿ ಆಳ್ವಿಕೆ ಹೇರಲಿ. ನನ್ನನ್ನು ವಜಾಗೊಳಿಸಲಿ. ಇದು ಕರಾಳ ದಿನವಾಗಿ ದಾಖಲಾಗಲಿ" ಎಂದು ಬ್ಯಾನರ್ಜಿ ಪಕ್ಷದ ಶಾಸಕರಿಗೆ ಹೇಳಿದ್ದಾಗಿ ಸಭೆಯಲ್ಲಿ ಹಾಜರಿದ್ದ ನಾಯಕರೊಬ್ಬರು ಹೇಳಿದ್ದಾರೆ.
ಸದ್ಯದ ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 7 ರಂದು ಕೊನೆಗೊಳ್ಳಲಿದೆ. ಅಲ್ಲಿಯವರೆಗೆ, ಬ್ಯಾನರ್ಜಿ ಅಧಿಕಾರದಲ್ಲಿ ಮುಂದುವರಿಯುತ್ತಾರೆ. ಆದರೆ ಅವಧಿ ಮುಗಿದ ನಂತರವೂ ಅವರು ರಾಜೀನಾಮೆ ನೀಡದಿದ್ದರೆ ಬಿಕ್ಕಟ್ಟು ಸೃಷ್ಟಿಯಾಗಬಹುದೇ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಆಂತರಿಕ ಅಸಮಾಧಾನ ಮತ್ತು ಸೋಲಿನ ನಂತರ ಶಿಸ್ತು ಸಮಿತಿಯನ್ನು ರಚಿಸುವುದಾಗಿ ಬ್ಯಾನರ್ಜಿ ಘೋಷಿಸಿದ್ದಾರೆ. ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ್ದನ್ನು ಟಿಎಂಸಿ ವಕ್ತಾರ ಮತ್ತು ಹೊಸದಾಗಿ ಆಯ್ಕೆಯಾದ ಬೆಲಿಯಾಘಾಟ ಶಾಸಕ ಕುನಾಲ್ ಘೋಷ್ ಅವರು ಸಮರ್ಥಿಸಿಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ "ಪ್ರತಿಭಟನೆಯ ಸಂಕೇತ ಎಂದು ಕರೆದಿದ್ದಾರೆ.
ಮತ ಎಣಿಕೆ ವೇಳೆ 100 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚುನಾವಣಾ ಆಯೋಗವು ಫಲಿತಾಂಶ ತಿರುಚಿದೆ ಎಂಬುದರ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.