Vijay 
ದೇಶ

TVK–ಕಾಂಗ್ರೆಸ್ ಮೈತ್ರಿ: ಸಂಪುಟದಲ್ಲಿ ಎರಡು ಸ್ಥಾನಕ್ಕೆ 'ಕೈ' ಬೇಡಿಕೆ; ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆ ಬಹುತೇಕ ಖಚಿತ..!

ಟಿವಿಕೆ ತನ್ನ ಮೊದಲ ಚುನಾವಣೆಯಲ್ಲೇ 234 ವಿಧಾನಸಭಾ ಕ್ಷೇತ್ರಗಳಲ್ಲಿ 108 ಸ್ಥಾನಗಳನ್ನು ಗೆದ್ದು ಭರ್ಜರಿ ಪ್ರದರ್ಶನ ನೀಡಿದ್ದರೂ, ಸರಳ ಬಹುಮತಕ್ಕೆ ಅಗತ್ಯವಾದ 118 ಸಂಖ್ಯೆಗೆ ಇನ್ನೂ ಕೆಲವು ಶಾಸಕರ ಬೆಂಬಲದ ಅಗತ್ಯವಿದೆ.

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ವೇಗವಾಗಿ ಬದಲಾಗುತ್ತಿರುವ ಬೆಳವಣಿಗೆಗಳ ನಡುವೆ, ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆತ್ರಿ ಕಳಗಂ (ಟಿವಿಕೆ) ಸರ್ಕಾರ ರಚನೆಗೆ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚನೆ ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.

ಟಿವಿಕೆ ತನ್ನ ಮೊದಲ ಚುನಾವಣೆಯಲ್ಲೇ 234 ವಿಧಾನಸಭಾ ಕ್ಷೇತ್ರಗಳಲ್ಲಿ 108 ಸ್ಥಾನಗಳನ್ನು ಗೆದ್ದು ಭರ್ಜರಿ ಪ್ರದರ್ಶನ ನೀಡಿದ್ದರೂ, ಸರಳ ಬಹುಮತಕ್ಕೆ ಅಗತ್ಯವಾದ 118 ಸಂಖ್ಯೆಗೆ ಇನ್ನೂ ಕೆಲವು ಶಾಸಕರ ಬೆಂಬಲದ ಅಗತ್ಯವಿದೆ.

ಈ ಹಿನ್ನೆಲೆ ಮೈತ್ರಿ ರಾಜಕಾರಣ ಅನಿವಾರ್ಯವಾಗಿದ್ದು, ಕಾಂಗ್ರೆಸ್ ಜೊತೆಗಿನ ಮಾತುಕತೆಗಳಿಗೆ ಹೆಚ್ಚಿನ ಮಹತ್ವ ಸಿಕ್ಕಿದೆ.

ಮಾಹಿತಿಗಳ ಪ್ರಕಾರ, ಕಾಂಗ್ರೆಸ್ ಪಕ್ಷ ಸರ್ಕಾರದಲ್ಲಿ ಎರಡು ಪ್ರಮುಖ ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದು, ಈ ಕುರಿತು ಅಂತಿಮ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಇದು ಕೇವಲ ಬೆಂಬಲ ಪಡೆಯುವುದಷ್ಟೇ ಅಲ್ಲದೆ, ಸರ್ಕಾರದ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ರಾಜಕೀಯ ಕ್ರಮವಾಗಿ ನೋಡಲಾಗುತ್ತಿದೆ.ಈ ಕುರಿತು ಹಲವು ಸುತ್ತಿನ ಸಭೆಗಳನ್ನು ನಡೆಸಿದೆ ಎನ್ನಲಾಗಿದೆ.

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಕಾಂಗ್ರೆಸ್, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಸರ್ಕಾರ ರಚನೆಗಾಗಿ ತಮ್ಮ ಬೆಂಬಲವನ್ನು ಕೋರಿದೆ ಎಂದು ಹೇಳಿತ್ತು. ಇದರಿಂದ ಮೈತ್ರಿ ಪಕ್ಷಗಳು ಸರ್ಕಾರ ರಚನೆಯಾಗುವ ಸಾಧ್ಯತೆಗಳು ವ್ಯಕ್ತವಾಗಿದ್ದವು.

ವಿಜಯ್ ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಸರ್ಕಾರ ರಚನೆಗೆ ಮುಂದಾಗಿರುವುದು ವಿಶೇಷವಾಗಿದೆ.

ಜನಪ್ರಿಯ ನಟನಾಗಿ ಅಪಾರ ಬೆಂಬಲ ಹೊಂದಿರುವ ವಿಜಯ್, ತನ್ನ ರಾಜಕೀಯ ಬಲವನ್ನು ಬಳಸಿಕೊಂಡು ಕುಟುಂಬ ರಾಜಕೀಯ ಹೊಂದಿರುವ ಪಕ್ಷಗಳ ನಡುವೆ ಸಮತೋಲನ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್ ಹೈಕಮಾಂಡ್ ಈ ವಿಚಾರದಲ್ಲಿ ತುರ್ತು ನಿರ್ಧಾರ ಕೈಗೊಳ್ಳದೆ, ತಮಿಳುನಾಡು ಘಟಕದ ನಾಯಕರಿಗೆ ಅಂತಿಮ ತೀರ್ಮಾನವನ್ನು ಬಿಟ್ಟಿದೆ.

ಸ್ಥಳೀಯ ರಾಜಕೀಯ ಪರಿಸ್ಥಿತಿ, ಮತದಾರರ ಮನೋಭಾವ ಮತ್ತು ಇತರ ಪಕ್ಷಗಳ ನಿಲುವುಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಇದರಿಂದ ರಾಜ್ಯ ಕಾಂಗ್ರೆಸ್ ಒಳಗೆ ಚರ್ಚೆಗಳು ತೀವ್ರಗೊಂಡಿದ್ದು, ಬೆಂಬಲ ನೀಡಬೇಕೇ ಅಥವಾ ದೂರ ಉಳಿಯಬೇಕೇ ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈ ಬೆಳವಣಿಗೆಯು ರಾಜ್ಯದ ಇತರ ಪ್ರಮುಖ ಪಕ್ಷಗಳ ಗಮನವನ್ನೂ ಸೆಳೆದಿದೆ. ಕೆಲವು ಪಕ್ಷಗಳು ಇದನ್ನು ರಾಜಕೀಯ ತಂತ್ರ ಎಂದು ಟೀಕಿಸುತ್ತಿದ್ದರೆ, ಇನ್ನೂ ಕೆಲವು ಪಕ್ಷಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ.

ಸರ್ಕಾರ ರಚನೆಗೆ ಅಗತ್ಯವಾದ ಸಂಖ್ಯಾಶಕ್ತಿ ಯಾರ ಬಳಿ ಇದೆ ಎಂಬುದು ಸ್ಪಷ್ಟವಾಗದ ಹಿನ್ನೆಲೆ, ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಚಟುವಟಿಕೆಗಳು ನಡೆಯುವ ಸಾಧ್ಯತೆ ಇದೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅವಶ್ಯಕತೆಯಿದೆ. 108 ಸ್ಥಾನಗಳನ್ನು ಗೆದ್ದಿರುವ ಟಿವಿಕೆಗೆ ಬಹುಮತಕ್ಕೆ 10 ಸ್ಥಾನಗಳ ಕೊರತೆಯಿತ್ತು. ಐದು ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಬೆಂಬಲದೊಂದಿಗೆ ಟಿವಿಕೆ ಬಲ ಈಗ 113ಕ್ಕೆ ಏರಿದೆ. ಬಹುಮತ ಸಾಬೀತುಪಡಿಸಲು ಡಿಎಂಕೆ ಮೈತ್ರಿಕೂಟದಲ್ಲಿದ್ದ ಸಿಪಿಐ (2 ಸ್ಥಾನ), ಸಿಪಿಎಂ (2 ಸ್ಥಾನ) ಮತ್ತು ವಿಸಿಕೆ (2 ಸ್ಥಾನ) ಪಕ್ಷಗಳ ಬೆಂಬಲವನ್ನು ಟಿವಿಕೆ ನಿರೀಕ್ಷಿಸುತ್ತಿದೆ.

ಈ ನಡುವೆ ಗೆಲವು ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಜಯ್ ಅವರು, ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಪಕ್ಷ ಪ್ರಾರಂಭಿಸಿದಾಗ ನಮ್ಮ ವಿರುದ್ಧ ಮಾತನಾಡಿದವರನ್ನು ಜಯಿಸಿ, ಜನರನ್ನು ನಂಬಿ ಏಕಾಂಗಿಯಾಗಿ ನಿಂತು ಈ ಹಂತ ತಲುಪಿದ್ದೇವೆ ಎಂದು ಅವರು ಹೇಳಿದ್ದಾರೆ. ನಮ್ಮನ್ನು ಯಾವಾಗಲೂ ತಾಯಿಯಂತೆ ಬೆಂಬಲಿಸಿದ ತಮಿಳುನಾಡಿನ ಜನರಿಗೆ ನಾನು ಜೀವಮಾನದ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ.

ಈ ಭರ್ಜರಿ ಜಯವು ಕೇವಲ ಪಕ್ಷದ ಗೆಲುವಲ್ಲ, ಇದು ಪ್ರಜಾಪ್ರಭುತ್ವದ ಗೆಲುವು ಎಂದು ವಿಜಯ್ ಅಭಿಪ್ರಾಯಪಟ್ಟಿದ್ದಾರೆ. ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಲಿರುವ ವಿಜಯ್, ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

40 ಕೋಟಿ ಯುವಕರು ದೇಶದ ನಿಜವಾದ ಶಕ್ತಿ, ಆದರೆ ನಿರುದ್ಯೋಗ ತಾಂಡವವಾಡುತ್ತಿದೆ: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ

Toxic Trailer: ನಾನು ಬರೋ ಸಮಯ ಬಂದಿದೆ ಎಂದ ಯಶ್, ನಾವೆಲ್ಲರೂ ಕಾಯುತ್ತಿದ್ದೇವೆ ಎಂದ ಶಿವಣ್ಣ!

UPI ಪಾವತಿಗಳಿಗೆ ಶುಲ್ಕ ವಿಧಿಸಲ್ಲ: ಯಾರಿಗೆ MDR ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!

ಟೆಸ್ಟ್ ಪಂದ್ಯದ ಕೊನೆಯ ಓವರ್​ನಲ್ಲಿ 6, 6, 0, 6, 6 ಸಿಡಿಸಿದ ಗುರ್ನೂರ್ ಬ್ರಾರ್; ಗಂಭೀರ್ ಚಲ್ಲಾಳೆ, Video!

ಅಸಮಾಧಾನಿತ ಕಾಂಗ್ರೆಸ್ ಶಾಸಕರಿಗೆ ಕುಮಾರಸ್ವಾಮಿ ಆಫರ್; ಹೊಸ ದಾಳ ಉರುಳಿಸಿದ 'ದಳಪತಿ'