ಕೊಲ್ಲೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು ಕರ್ನಾಟಕದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕ ದೇಗುಲಕ್ಕೆ ಭೇಟಿ ನೀಡಿರುವ ಫೋಟೋಗಳು ವ್ಯಾಪಕ ವೈರಲ್ ಆಗುತ್ತಿವೆ.
ಭೇಟಿಯ ಸಂದರ್ಭದಲ್ಲಿ ದುರ್ಗಾ ಸ್ಟಾಲಿನ್ ಅವರು ದೇವಾಲಯದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿ ದೇವಿ ಮೂಕಾಂಬಿಕೆಯ ಆಶೀರ್ವಾದ ಪಡೆದರು. ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿ ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರದಲ್ಲಿ ಅವರಿಗೆ ದೇವಾಲಯದ ಅಧಿಕಾರಿಗಳು ಹಾಗೂ ಭಕ್ತರು ಸ್ವಾಗತ ಕೋರಿದರು ಎನ್ನಲಾಗಿದೆ.
ಮೂಲಗಳ ಪ್ರಕಾರ ಕಳೆದ ಮಾರ್ಚ್ 8ರಂದು ದುರ್ಗಾ ಸ್ಟಾಲಿನ್ ಅವರು ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿದ್ದು, ಭೇಟಿಯ ವೇಳೆ ವಿಶೇಷ ಪೂಜೆಗಳು ನೆರವೇರಿಸಲಾಯಿತು. ಪೂಜೆ ಸಲ್ಲಿಸಿದ ಬಳಿಕ ಅವರು ದೇವಾಲಯದ ಆವರಣದಲ್ಲಿ ಕೆಲ ಸಮಯ ಕಳೆದರು ಹಾಗೂ ದೇವಾಲಯದ ಅಧಿಕಾರಿಗಳೊಂದಿಗೆ ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದರು.
ಭೇಟಿಯ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಭದ್ರತೆಯನ್ನು ಕಟ್ಟು ನಿಟ್ಟಾಗಿ ಮಾಡಲಾಗಿತ್ತು. ಭಕ್ತರು ಮತ್ತು ಭೇಟಿ ನೀಡಿದವರ ಸಂಚಾರ ಸುಗಮವಾಗಿರುವಂತೆ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಯಿತು. ಭದ್ರತಾ ವ್ಯವಸ್ಥೆ ಇದ್ದರೂ ಸಹ ದೇವಾಲಯದ ನಿತ್ಯ ಪೂಜೆ ಹಾಗೂ ಭಕ್ತರ ದರ್ಶನಕ್ಕೆ ಯಾವುದೇ ದೊಡ್ಡ ಮಟ್ಟದ ಅಡಚಣೆ ಉಂಟಾಗಲಿಲ್ಲ ಎನ್ನಲಾಗಿದೆ.
ಹಳೇ ಫೋಟೋ ಈಗ ವೈರಲ್ ಆಗಿದ್ದೇಕೆ?
ಇನ್ನು ದುರ್ಗಾ ಸ್ಟಾಲಿನ್ ಅವರ ಈ ಭೇಟಿ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲೂ ಗಮನ ಸೆಳೆದಿದೆ. ಪ್ರಮುಖ ರಾಜಕೀಯ ಕುಟುಂಬಗಳ ಸದಸ್ಯರು ದಕ್ಷಿಣ ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸಾಮಾನ್ಯವಾಗಿ ಚರ್ಚೆಗೆ ಗ್ರಾಸವಾಗುತ್ತದೆ. ದುರ್ಗಾ ಸ್ಟಾಲಿನ್ ಅವರ ದೇವಾಲಯ ಭೇಟಿ ಕುರಿತ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ.
ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ನಾಶ ಮಾಡುವ ಹೇಳಿಕೆ ಬೆನ್ನಲ್ಲೇ ದುರ್ಗಾ ಅವರ ದೇಗುಲ ಭೇಟಿ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ.
'ಸನಾತನ ಧರ್ಮ ನಾಶ ಮಾಡಬೇಕು' ಎಂದಿದ್ದ ಪುತ್ರ ಉದಯನಿಧಿ ಸ್ಟಾಲಿನ್
ಅತ್ತ ದುರ್ಗಾ ಸ್ಟಾಲಿನ್ ತಮಿಳುನಾಡು ವಿಧಾನಸಭೆಯಲ್ಲೇ ಸನಾತನ ಧರ್ಮ ನಾಶ ಮಾಡಬೇಕು ಎಂದು ಹೇಳಿಕೆ ನೀಡಿದ್ದರು.
ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್, “ಜನರನ್ನು ವಿಭಜಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು. ತಮಿಳುನಾಡಿನಿಂದ ಸನಾತನ ಧರ್ಮವನ್ನು ಸಂಪೂರ್ಣ ನಾಶ ಮಾಡಬೇಕು” ಎಂದು ಹೇಳಿದರು. ಈ ವೇಳೆ ಅವರ ಎದುರಗಡೆ ಆಸನದಲ್ಲಿದ್ದ ಸಿಎಂ ವಿಜಯ್ ಮೌನವಾಗಿ ಕುಳಿತಿದ್ದರು.
ಉದಯನಿಧಿ ಮಾತ್ರವಲ್ಲ ಈ ಹಿಂದೆ ಎಂಕೆ ಸ್ಟಾಲಿನ್ ಕೂಡ ಸನಾತನ ವಿರೋಧಿ ಹೇಳಿಕೆಗಳನ್ನು ನೀಡಿ ಸುದ್ದಿಗೆ ಗ್ರಾಸವಾಗಿದ್ದರು.
ವ್ಯಾಪಕ ಟೀಕೆ
ಇನ್ನು ಒಂದೆಡೆ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ನಾಶದ ಕುರಿತು ಮಾತನಾಡುತ್ತಿದ್ದರೆ ಅವರ ತಾಯಿ ದುರ್ಗಾ ಸ್ಟಾಲಿನ್ ಮಾತ್ರ ಎಂದಿನಂತೆ ತಮ್ಮ ಸಾಂಸ್ಕೃತಿಕ ಸಂಪ್ರದಾಯ ಮುಂದುವರೆಸಿದ್ದಾರೆ. ಪೂಜೆಪುನಸ್ಕಾರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಎಂದಿನಂತೆ ತೊಡಗಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗುತ್ತಿದೆ.
ಕೊಲ್ಲೂರು ಮೂಕಾಂಬಿಕ ದೇಗುಲ ಕುರಿತು
ಅಂದಹಾಗೆ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪ್ರತಿವರ್ಷ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಇರುವ ಕೊಲ್ಲೂರು ಮೂಕಾಂಬಿಕಾ ದೇವಾಲಯವು ಪ್ರಮುಖ ಆಧ್ಯಾತ್ಮಿಕ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಈ ದೇವಾಲಯವು ವಿಶೇಷವಾಗಿ ತಮಿಳುನಾಡಿನ ಭಕ್ತರಲ್ಲಿ ಅತ್ಯಂತ ಜನಪ್ರಿಯವಾಗಿದೆ.
ಹಲವಾರು ರಾಜಕೀಯ ನಾಯಕರು, ಸಿನಿತಾರೆಯರು ಮತ್ತು ಸಾರ್ವಜನಿಕ ಗಣ್ಯರು ದೇವಿಯ ಆಶೀರ್ವಾದ ಪಡೆಯಲು ಈ ದೇವಾಲಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ.