ನವದೆಹಲಿ: ಕಾಂಗ್ರೆಸ್ ನೇತೃತ್ವದ ಇಂಡಿಯಾ (INDIA) ಮೈತ್ರಿಕೂಟದ ಬೃಹತ್ ರ‍್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕರ್ತರಿಗೆ ಖಡಕ್ ವಾರ್ನಿಂಗ್ ಕೊಟ್ಟ ಘಟನೆ ನಡೆದಿದೆ.
ದೆಹಲಿಯಲ್ಲಿ ಭಾನುವಾರ ನಡೆದ ಪ್ರತಿಪಕ್ಷಗಳ ಇಂಡಿಯಾ (INDIA) ಮೈತ್ರಿಕೂಟದ ಬೃಹತ್ ರ‍್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕರ್ತರ ಗದ್ದಲಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ನೀವು ಸುಮ್ಮನಿದ್ದರೆ ಐದು ನಿಮಿಷದಲ್ಲೇ ಭಾಷಣ ಮುಗಿಸುತ್ತೇನೆ. ಇಲ್ಲದಿದ್ದರೆ ಒಂದು ಗಂಟೆ ಮಾತನಾಡುತ್ತೇನೆ ಎಂದು ವೇದಿಕೆಯಿಂದಲೇ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ರ‍್ಯಾಲಿಯಲ್ಲಿ ಘೋಷಣೆಗಳು, ಕೂಗಾಟ ಹಾಗೂ ಸಂಗೀತ ವಾದ್ಯದ ಸದ್ದಿನಿಂದಾಗಿ ಭಾಷಣ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ತಮ್ಮ ಸರದಿ ಬಂದಾಗ ವೇದಿಕೆಗೆ ಬಂದ ಖರ್ಗೆ ಸುಮಾರು 30 ಸೆಕೆಂಡುಗಳ ಕಾಲ ಮೌನವಾಗಿ ನಿಂತಿದ್ದರು. ಆದರೂ ಗದ್ದಲ ಕಡಿಮೆಯಾಗದ ಹಿನ್ನೆಲೆಯಲ್ಲಿ 84 ವರ್ಷದ ಖರ್ಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕರ್ತರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್
"ನೋಡಿ, ನೀವು ಸುಮ್ಮನೆ ಕುಳಿತರೆ ಐದು ನಿಮಿಷಗಳಲ್ಲಿ ನನ್ನ ಭಾಷಣ ಮುಗಿಸುತ್ತೇನೆ. ಸುಮ್ಮನಿರದಿದ್ದರೆ ಒಂದು ಗಂಟೆ ಭಾಷಣ ಮಾಡುತ್ತೇನೆ" ಎಂದು ಖರ್ಗೆ ಹಿಂದಿಯಲ್ಲಿ ಹೇಳಿದರು. ಬಳಿಕ ತಮ್ಮ ಭಾಷಣ ಮುಂದುವರೆಸಿದರು.
ರ‍್ಯಾಲಿಯಲ್ಲಿ ಬಹುತೇಕ ಘೋಷಣೆಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಖರ್ಗೆ ಈ ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಯೂ ರ‍್ಯಾಲಿಯಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಯಿತು.
'ಮೋದಿ ಕಾ ಬಾಪ್ ಭಿ ಜಾಯೇಗಾ' ಘೋಷಣೆ!
ಖರ್ಗೆ ಭಾಷಣ ಆರಂಭಿಸುವ ವೇಳೆ ಸಭಿಕರಲ್ಲಿದ್ದ ಕೆಲವರು, "ಮೋದಿ ಕಾ ಬಾಪ್ ಭಿ ಜಾಯೇಗಾ" (ಮೋದಿ ತಂದೆಯೂ ಹೋಗುತ್ತಾರೆ) ಎಂಬ ಘೋಷಣೆ ಕೂಗಿದರು. ಪ್ರಧಾನಿ ಮೋದಿ ಕುರಿತು ಖರ್ಗೆ ವಾರದ ಹಿಂದೆ ನೀಡಿದ್ದ ಹೇಳಿಕೆಯನ್ನೇ ಕಾರ್ಯಕರ್ತರು ಪುನರಾವರ್ತಿಸಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ, "ಮೋದಿ ಕಹೀಂ ನಹೀಂ ಜಾಯೇಗಾ" (ಮೋದಿ ಎಲ್ಲಿಗೂ ಹೋಗುವುದಿಲ್ಲ) ಎಂಬ ಘೋಷಣೆಯೊಂದಿಗೆ ಅಭಿಯಾನ ಆರಂಭಿಸಿತ್ತು. ಭಾನುವಾರದ ರ‍್ಯಾಲಿಯಲ್ಲಿ ಸುಮಾರು ಒಂಬತ್ತು ನಿಮಿಷಗಳ ಕಾಲ ಮಾತನಾಡಿದ ಖರ್ಗೆ, ತಮ್ಮ ಹಿಂದಿನ ಹೇಳಿಕೆಯ ವಿವಾದಾತ್ಮಕ ಭಾಗವನ್ನು ಪುನರುಚ್ಚರಿಸದೆ ಅದೇ ಅರ್ಥವನ್ನು ಬಿಂಬಿಸುವ ಮಾತುಗಳನ್ನಾಡಿದರು.
"ಮೋದಿ ಹೋಗುತ್ತಾರೆ, ಆಗ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ" ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಖರ್ಗೆ ಹೇಳಿದರು.
ಪಾಟ್ನಾದಲ್ಲಿ ಖರ್ಗೆ ಹೇಳಿಕೆಯಿಂದ ವಿವಾದ
ಅಕ್ಟೋಬರ್ 25ರಂದು ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕುರಿತು ಖರ್ಗೆ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಖರ್ಗೆ ಭಾಷಣ ಮಾಡುತ್ತಿದ್ದ ವೇಳೆ ಸಭಿಕರಲ್ಲಿದ್ದ ಸಂತೋಷ್ ಕುಮಾರ್ ಎಂಬ ವ್ಯಕ್ತಿ, "ಮೋದಿ ಕಹೀಂ ನಹೀಂ ಜಾಯೇಗಾ" (ಮೋದಿ ಎಲ್ಲಿಗೂ ಹೋಗುವುದಿಲ್ಲ) ಎಂದು ಹೇಳಿದ್ದು ಕೇಳಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಖರ್ಗೆ, "ಮೋದಿ ಕಾ ಬಾಪ್ ಭಿ ಜಾಯೇಗಾ" ಎಂದು ಮೂರು ಬಾರಿ ಪುನರುಚ್ಚರಿಸಿದ್ದರು.
ಈ ವೇಳೆ ಸಭಿಕರು ಸಂತೋಷ್ ಕುಮಾರ್ ಮೇಲೆ ಹಲ್ಲೆ ನಡೆಸಿ, ಸಭಾಂಗಣದಿಂದ ಹೊರಹಾಕಿದ್ದರು. ಬಳಿಕ ಎನ್‌ಡಿಟಿವಿಗೆ ಪ್ರತಿಕ್ರಿಯಿಸಿದ್ದ ಸಂತೋಷ್, ತಾನು ಹೇಳಿದ್ದನ್ನು ಪೂರ್ಣವಾಗಿ ಕೇಳಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. "ಜನರು ದಂಗೆ ಏಳದಿದ್ದರೆ ಮೋದಿ ಎಲ್ಲಿಗೂ ಹೋಗುವುದಿಲ್ಲ ಎಂದು ನಾನು ಹೇಳುತ್ತಿದ್ದೆ" ಎಂದು ಅವರು ತಿಳಿಸಿದ್ದರು.
ಖರ್ಗೆ ಹೇಳಿಕೆಗೆ ಬಿಜೆಪಿ ಕ್ಷಮೆಯಾಚಿಸುವಂತೆ ಆಗ್ರಹಿಸಿತ್ತು. ಅಲ್ಲದೆ, ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ವಕ್ತಾರ ಸುರೇಂದ್ರ ರಾಜ್‌ಪೂತ್, ಖರ್ಗೆ ಕೇವಲ ಒಂದು ನಾಣ್ಣುಡಿಯನ್ನು ಬಳಸಿದ್ದಾರೆ. ಪ್ರಧಾನಿ ಮೋದಿ ಇದಕ್ಕಿಂತಲೂ ಕೆಟ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು.
ರ‍್ಯಾಲಿಯಲ್ಲಿ ಸೋನಿಯಾ, ಪ್ರಿಯಾಂಕಾ, ಅಖಿಲೇಶ್, ಮಮತಾ ಭಾಗಿ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಈ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಹಲವು ನಾಯಕರು ಭಾಗವಹಿಸಿದ್ದರು.
ರ‍್ಯಾಲಿಗೂ ಮುನ್ನ ಮಿಂಟೋ ರಸ್ತೆ-ಕನಾಟ್ ಪ್ಲೇಸ್ ಜಂಕ್ಷನ್‌ನಿಂದ ರಾಮಲೀಲಾ ಮೈದಾನದವರೆಗೆ ಸುಮಾರು ಒಂದೂವರೆ ಕಿ.ಮೀ. ಪಾದಯಾತ್ರೆ ನಡೆಸಲಾಯಿತು. ಇನ್ನು, ಭಾನುವಾರದ ರ‍್ಯಾಲಿಯನ್ನು ಬಿಜೆಪಿ 'ಫ್ಲಾಪ್ ಶೋ' ಎಂದು ಟೀಕಿಸಿದೆ. ರಾಹುಲ್ ಗಾಂಧಿ ಮಾತನಾಡುತ್ತಿದ್ದಾಗಲೇ ಜನರು ರ‍್ಯಾಲಿಯಿಂದ ಹೊರನಡೆದರು ಎಂದು ಬಿಜೆಪಿ ಆರೋಪಿಸಿದೆ.