ಬಹುಕೋಟಿ ಯುರೋ ಮೌಲ್ಯದ ಜಾಗತಿಕ ನಾವೀನ್ಯತೆ ಕಾರ್ಯಕ್ರಮದ ಮಾತುಕತೆ ಪೂರ್ಣಗೊಳಿಸಿದ ಭಾರತ-ಯುರೋಪಿಯನ್ ಒಕ್ಕೂಟ (ಇಯು) 
ದೇಶ

India-EU: ಪ್ರಧಾನಿ ಮೋದಿ ಭೇಟಿ ಮುನ್ನ ಸಂಶೋಧನೆ, ನಾವೀನ್ಯತೆ ಕಾರ್ಯಕ್ರಮ ಸಂಬಂಧಿಸಿದ ಮಾತುಕತೆ ಪೂರ್ಣ

ಭಾರತ ಮತ್ತು ಇಯು ನಡುವಿನ ಸಂಬಂಧವನ್ನು ಬಲಪಡಿಸುವುದು, ವೈಜ್ಞಾನಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸುವುದು ಹಾಗೂ ಎರಡೂ ಕಡೆಯ ಸಂಶೋಧಕರು, ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮಾತುಕತೆ ಪೂರ್ಣಗೊಂಡಿರುವುದು ಮಹತ್ವದ ಹೆಜ್ಜೆಯಾಗಿದೆ.

ನವದೆಹಲಿ: ಡಿಸೆಂಬರ್ ಮಧ್ಯಭಾಗದಲ್ಲಿ ಭಾರತ-ಐರೋಪ್ಯ ಒಕ್ಕೂಟದ (EU) ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಅಧಿಕೃತ ಸಹಿ ಹಾಕುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಸೆಲ್ಸ್‌ಗೆ ಭೇಟಿ ನೀಡುವ ನಿರೀಕ್ಷೆಯ ನಡುವೆಯೇ, 93.5 ಬಿಲಿಯನ್ ಯುರೋ ಮೌಲ್ಯದ ಇಯುನ ಪ್ರಮುಖ ಸಂಶೋಧನೆ ಮತ್ತು ನಾವೀನ್ಯತೆ ಕಾರ್ಯಕ್ರಮವಾದ 'ಹಾರಿಜಾನ್ ಯುರೋಪ್‌'ನಲ್ಲಿ ಭಾರತದ ಸಹಭಾಗಿತ್ವಕ್ಕೆ ಸಂಬಂಧಿಸಿದ ಮಾತುಕತೆಗಳು ಪೂರ್ಣಗೊಂಡಿವೆ.

ಭಾರತ ಮತ್ತು ಇಯು ನಡುವಿನ ಸಂಬಂಧವನ್ನು ಬಲಪಡಿಸುವುದು, ವೈಜ್ಞಾನಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸುವುದು ಹಾಗೂ ಎರಡೂ ಕಡೆಯ ಸಂಶೋಧಕರು, ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮಾತುಕತೆ ಪೂರ್ಣಗೊಂಡಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದು ಯುರೋಪಿಯನ್ ಕಮಿಷನ್ ಹೇಳಿದೆ.

ಎರಡೂ ಕಡೆಯಿಂದ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಲು ಈ ಬೆಳವಣಿಗೆ ಹಾದಿ ಸುಗಮಗೊಳಿಸಿದೆ. 2027ರ ಜನವರಿಯಿಂದ ಈ ಕಾರ್ಯಕ್ರಮದಲ್ಲಿ ಭಾರತದ ಸಹಭಾಗಿತ್ವ ಆರಂಭವಾಗುವ ನಿರೀಕ್ಷೆಯಿದೆ.

ಒಪ್ಪಂದಕ್ಕೆ ಸಹಿ ಹಾಕಿ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಭಾರತೀಯ ಸಂಶೋಧಕರು ಮತ್ತು ಸಂಸ್ಥೆಗಳು ಹಾರಿಜಾನ್ ಯುರೋಪ್‌ನಿಂದ ನೇರವಾಗಿ ಅನುದಾನ ಪಡೆಯಲು ಅರ್ಹರಾಗಲಿದ್ದಾರೆ. ಅಲ್ಲದೆ, 'ಜಾಗತಿಕ ಸವಾಲುಗಳು ಮತ್ತು ಯುರೋಪಿಯನ್ ಕೈಗಾರಿಕಾ ಸ್ಪರ್ಧಾತ್ಮಕತೆ'ಗೆ ಒತ್ತು ನೀಡುವ ಅದರ ಎರಡನೇ ಸ್ತಂಭದಡಿ (ಪಿಲ್ಲರ್ II) ಜಂಟಿ ಸಂಶೋಧನಾ ಯೋಜನೆಗಳ ನೇತೃತ್ವ ವಹಿಸಲೂ ಅವಕಾಶ ದೊರೆಯಲಿದೆ.

ಪಿಲ್ಲರ್ II ಈ ಕಾರ್ಯಕ್ರಮದ ಅತಿದೊಡ್ಡ ವಿಭಾಗವಾಗಿದ್ದು, ಆರೋಗ್ಯ ಸೇವೆ, ಡಿಜಿಟಲ್ ತಂತ್ರಜ್ಞಾನ, ಕೈಗಾರಿಕೆ, ಬಾಹ್ಯಾಕಾಶ, ಹವಾಮಾನ ಬದಲಾವಣೆ, ಇಂಧನ ಮತ್ತು ಜೈವಿಕ ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಬಹುರಾಷ್ಟ್ರೀಯ ಸಂಶೋಧನೆ ಮತ್ತು ನಾವೀನ್ಯತಾ ಯೋಜನೆಗಳಿಗೆ ಬೆಂಬಲ ನೀಡುತ್ತದೆ.

ಈ ಬೆಳವಣಿಗೆಯನ್ನು ಸ್ವಾಗತಿಸಿರುವ ಸ್ಟಾರ್ಟ್‌ಅಪ್‌ಗಳು, ಸಂಶೋಧನೆ ಮತ್ತು ನಾವೀನ್ಯತೆ ವಿಭಾಗದ ಇಯು ಆಯುಕ್ತೆ ಎಕಟೆರಿನಾ ಜಹರಿಯೆವಾ, ಈ ಒಪ್ಪಂದವು ಉದ್ಯಮಗಳು ಮತ್ತು ಸಂಶೋಧಕರಿಗೆ ಪರಸ್ಪರ ಸಹಕರಿಸಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಿದೆ ಎಂದು ಹೇಳಿದ್ದಾರೆ.

ಈ ಒಪ್ಪಂದ ನಮ್ಮ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ. ಮುಂದಿನ ದಿನಗಳಲ್ಲಿ ಏನು ಮಾಡಬೇಕೆಂಬುದರ ಕುರಿತು ನಮ್ಮ ಸಂಶೋಧಕರು ಮತ್ತು ನಾವೀನ್ಯಕಾರರು ಒಟ್ಟಾಗಿ ಕೆಲಸ ಮಾಡಲು ಹಾರಿಜಾನ್ ಯುರೋಪ್ ನೆರವಾಗಲಿದೆ. ನಮ್ಮ ಭವಿಷ್ಯವನ್ನು ರೂಪಿಸಲಿರುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಯುರೋಪ್ ಮತ್ತು ಭಾರತ ಪಾಲುದಾರರಾಗಬೇಕೆಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ.

ಈ ಸಹಭಾಗಿತ್ವದಿಂದ ಭಾರತೀಯ ಮತ್ತು ಯುರೋಪಿಯನ್ ಪಾಲುದಾರರು ತಮ್ಮ ಪರಿಣತಿಯನ್ನು ಒಗ್ಗೂಡಿಸಿ, ಉದಯೋನ್ಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಹಾಗೂ ಸಾಮಾನ್ಯ ವೈಜ್ಞಾನಿಕ ಮತ್ತು ತಾಂತ್ರಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ.

ಹಾರಿಜಾನ್ ಯುರೋಪ್‌ನ ಸಹಭಾಗಿ ರಾಷ್ಟ್ರಗಳ ಸಂಸ್ಥೆಗಳು, ಆಯಾ ಒಪ್ಪಂದಗಳ ವ್ಯಾಪ್ತಿಗೆ ಒಳಪಡುವ ಕ್ಷೇತ್ರಗಳಲ್ಲಿ ಇಯು ಸದಸ್ಯ ರಾಷ್ಟ್ರಗಳ ಸಂಸ್ಥೆಗಳೊಂದಿಗೆ ಸಮಾನ ನಿಯಮಗಳಡಿ ಪಾಲ್ಗೊಳ್ಳಲು ಅವಕಾಶವಿದೆ. ಇದಕ್ಕೆ ಪ್ರತಿಯಾಗಿ ಸಹಭಾಗಿ ರಾಷ್ಟ್ರಗಳು ಕಾರ್ಯಕ್ರಮಕ್ಕೆ ಆರ್ಥಿಕ ಕೊಡುಗೆ ನೀಡಬೇಕಾಗುತ್ತದೆ.

ಭಾರತ ಮತ್ತು ಇಯು ಫೆಬ್ರವರಿಯಲ್ಲಿ ಈ ಸಹಭಾಗಿತ್ವದ ಕುರಿತು ಪ್ರಾಥಮಿಕ ಚರ್ಚೆಗಳನ್ನು ಆರಂಭಿಸಿದ್ದವು. ಬಳಿಕ ಜುಲೈನಲ್ಲಿ ಅಧಿಕೃತ ಮಾತುಕತೆಗಳು ಪ್ರಾರಂಭವಾಗಿದ್ದವು.

2001ರಲ್ಲಿ ಉಭಯ ದೇಶಗಳ ನಡುವೆ ಸಹಿ ಹಾಕಲಾಗಿದ್ದ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಒಪ್ಪಂದದ ಮುಂದುವರಿದ ಭಾಗವಾಗಿ ಈ ಬೆಳವಣಿಗೆ ನಡೆದಿದೆ. ಈ ಒಪ್ಪಂದವನ್ನು 2030ರವರೆಗೆ ನವೀಕರಿಸಲಾಗಿದೆ.

ಸಂಶೋಧನೆ ಮತ್ತು ನಾವೀನ್ಯತೆಯು ಜನವರಿಯಲ್ಲಿ ನಡೆದ ಭಾರತ-ಇಯು ಶೃಂಗಸಭೆಯಲ್ಲಿ ಅಂಗೀಕರಿಸಲಾದ 2030ರ ಜಂಟಿ ಸಮಗ್ರ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸೆಮಿಕಂಡಕ್ಟರ್‌ಗಳು, ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್, ಡಿಜಿಟಲ್ ಕೌಶಲಗಳು ಮತ್ತು ಆರನೇ ತಲೆಮಾರಿನ ವೈರ್‌ಲೆಸ್ ದೂರಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರಕ್ಕೆ ವೇದಿಕೆ ಕಲ್ಪಿಸುವ ದ್ವಿಪಕ್ಷೀಯ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯ ಮೂಲಕವೂ ಸಹಕಾರ ವಿಸ್ತರಿಸಿದೆ.

ಡಿಜಿಟಲ್ ಕೌಶಲಗಳ ಕ್ಷೇತ್ರದಲ್ಲಿಯೂ ಉಭಯ ದೇಶಗಳು ಸಹಕಾರವನ್ನು ಹೆಚ್ಚಿಸಿವೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ವಲಯದ ವೃತ್ತಿಪರರು ಇಯು ಸದಸ್ಯ ರಾಷ್ಟ್ರಗಳಿಗೆ ಸುರಕ್ಷಿತ ಹಾಗೂ ಕಾನೂನುಬದ್ಧವಾಗಿ ತೆರಳಲು ಅನುಕೂಲವಾಗುವಂತೆ ಫೆಬ್ರವರಿಯಲ್ಲಿ ಭಾರತದಲ್ಲಿ ಮೊದಲ ಯುರೋಪಿಯನ್ ಲೀಗಲ್ ಗೇಟ್‌ವೇ ಕಚೇರಿಯನ್ನು ಆರಂಭಿಸಲಾಗಿತ್ತು.

ಜನವರಿಯಲ್ಲಿ ಮಾತುಕತೆ ಪೂರ್ಣಗೊಂಡಿದ್ದ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ ಮಧ್ಯಭಾಗದಲ್ಲಿ ಬ್ರಸೆಲ್ಸ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಯುರೋಪಿಯನ್ ಸಂಸತ್ತಿನ ಅನುಮೋದನೆ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಈ ವ್ಯಾಪಾರ ಒಪ್ಪಂದ ಮುಂದಿನ ವರ್ಷ ಜಾರಿಗೆ ಬರುವ ನಿರೀಕ್ಷೆಯಿದೆ.

2021ರಿಂದ 2027ರವರೆಗೆ ಜಾರಿಯಲ್ಲಿರುವ ಹಾರಿಜಾನ್ ಯುರೋಪ್ ಕಾರ್ಯಕ್ರಮವು 93.5 ಬಿಲಿಯನ್ ಯುರೋಗಳ ಅಂದಾಜು ಬಜೆಟ್ ಹೊಂದಿದೆ. ಇದು ಸಂಶೋಧನೆ ಮತ್ತು ನಾವೀನ್ಯತೆಗಾಗಿ ಇಯು ರೂಪಿಸಿರುವ ಪ್ರಮುಖ ಅನುದಾನ ಕಾರ್ಯಕ್ರಮವಾಗಿದೆ. ಜಾಗತಿಕ ಸವಾಲುಗಳನ್ನು ಎದುರಿಸುವುದು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಬೆಂಬಲ ನೀಡುವುದು, ಯುರೋಪಿನ ಕೈಗಾರಿಕಾ ಸ್ಪರ್ಧಾತ್ಮಕತೆಯನ್ನು ಬಲಪಡಿಸುವುದು ಹಾಗೂ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ವೈಜ್ಞಾನಿಕ ಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಪ್ರಸರಣವನ್ನು ಸುಧಾರಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಅಂತಾರಾಷ್ಟ್ರೀಯ ಸಂಶೋಧನಾ ಪಾಲುದಾರಿಕೆಗಳ ಮೂಲಕ ಯುರೋಪಿಯನ್ ಸಂಶೋಧನಾ ವಲಯವನ್ನು ಬಲಪಡಿಸುವ ಗುರಿಯನ್ನೂ ಈ ಕಾರ್ಯಕ್ರಮ ಹೊಂದಿದೆ.

ಪ್ರಸ್ತುತ ಕೆನಡಾ, ಈಜಿಪ್ಟ್, ಜಪಾನ್, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್, ನಾರ್ವೆ, ಸ್ವಿಟ್ಜರ್ಲೆಂಡ್, ಉಕ್ರೇನ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಇಯುಯೇತರ 23 ರಾಷ್ಟ್ರಗಳು ಹಾರಿಜಾನ್ ಯುರೋಪ್ ಕಾರ್ಯಕ್ರಮದ ಸಹಭಾಗಿ ರಾಷ್ಟ್ರಗಳಾಗಿವೆ. ಆಸ್ಟ್ರೇಲಿಯಾದೊಂದಿಗಿನ ಸಹಭಾಗಿತ್ವದ ಮಾತುಕತೆಗಳೂ ಪೂರ್ಣಗೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಸೆಂಬರ್ 2 ಬೆಳಗಾವಿ ಅಧಿವೇಶನಕ್ಕೆ ಮುನ್ನ ಮಹಿಳೆಗೆ ಸಚಿವ ಸ್ಥಾನ: ಸಿಎಂ ಡಿಕೆ ಶಿವಕುಮಾರ್; Video

ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಿದ ಭಾರತದ ವೇಗಿ ಮೊಹಮ್ಮದ್ ಶಮಿ! Video ಸಂದೇಶದಲ್ಲಿ ಹೇಳಿದ್ದು ಏನು?

ವಿರೋಧದ ಬೆನ್ನಲ್ಲೇ ದೆಹಲಿ-ಮಹಾರಾಷ್ಟ್ರ ಸೇರಿ 7 ರಾಜ್ಯಗಳಲ್ಲಿ SIRಗೆ ಸಂಬಂಧ ಚುನಾವಣಾ ಆಯೋಗ ಮಹತ್ವದ ಆದೇಶ!

ನಾಲ್ವರು IAS ಅಧಿಕಾರಿಗಳ ದಿಢೀರ್ ವರ್ಗಾವಣೆ: GBAಗೆ ವಿಶೇಷ ಆಯುಕ್ತರ ನೇಮಕ!

ಅತ್ಯುತ್ತಮ ಪ್ರತಿಕ್ರಿಯೆಗಳ ಬೆನ್ನಲ್ಲೇ ರಾಮಾಯಣಕ್ಕೆ ಭರ್ಜರಿ ರೆಸ್ಪಾನ್ಸ್: Bookmyshowನಲ್ಲೇ ಗಂಟೆಗೆ 80 ಸಾವಿರ ಟಿಕೆಟ್ ಮಾರಾಟ!