ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ 'ಕಾಕ್ರೋಚ್ ಜನತಾ ಪಾರ್ಟಿ'(CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಬಂಧನದ ಹೊರತಾಗಿಯೂ ತಾವು ದೇಶಾದ್ಯಂತ ತಿರಂಗಾ ಯಾತ್ರೆ ಮಾಡುವುದಾಗಿ ಘೋಷಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷವು ಜನರ ಆಹಾರ ಪದ್ಧತಿ, ವೈಯಕ್ತಿಕ ಸಂಬಂಧಗಳು ಮತ್ತು ಮತದಾನದ ಹಕ್ಕುಗಳನ್ನು ಸಹ ನಿಯಂತ್ರಿಸಲು ಪ್ರಯತ್ನಿಸುತ್ತಿವೆ ಎಂದು ದೀಪ್ಕೆ ಆರೋಪಿಸಿದರು.
ಎಸ್ಐಆರ್ ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ 'ಕಾಕ್ರೋಚ್ ಜನತಾ ಪಾರ್ಟಿ' (CJP) ಆಯೋಜಿಸಿದ್ದ 'ಕೊಚ್ಚಿಯ ಜಂತರ್ ಮಂತರ್' ಅಭಿಯಾನದ ಭಾಗವಾಗಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ದೀಪ್ಕೆ, ದೇಶದಲ್ಲಿ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣಾ ವ್ಯವಸ್ಥೆ ಸ್ಥಾಪನೆಯಾಗುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ದೆಹಲಿಯಲ್ಲಿ ರಾಷ್ಟ್ರಧ್ವಜದೊಂದಿಗೆ 'ಜಂತರ್ ಮಂತರ್' ಪ್ರವೇಶಿಸಿದ್ದಕ್ಕಾಗಿ ನನ್ನನ್ನು ಬಂಧಿಸಲಾಯಿತು. ಪಕ್ಷದ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಜೈಲಿಗೆ ಕಳುಹಿಸಿದ್ದರು. ಆದರೆ ಇದನ್ನು ವಿರೋಧಿಸಿ ನಾನು ದೇಶಾದ್ಯಂತ ತಿರಂಗಾ ಯಾತ್ರೆ ಮಾಡುತ್ತೇನೆ. ತಾನು ಎಲ್ಲಿಗೆ ಹೋದರೂ ತ್ರಿವರ್ಣ ಧ್ವಜವನ್ನು ಕೊಂಡೊಯ್ಯುವುದನ್ನು ಮುಂದುವರಿಸುವುದಾಗಿ ತಿಳಿಸಿದರು.
"ಈ ತ್ರಿವರ್ಣ ಧ್ವಜವನ್ನು ಹಿಡಿದಿದ್ದಕ್ಕಾಗಿ ನನ್ನನ್ನು ಜೈಲಿಗೆ ಕಳುಹಿಸಲಾಯಿತು. ನನ್ನ ಸಹೋದರರಂತಿರುವ ಸೌರವ್ ಮತ್ತು ಅಶು ಅವರನ್ನೂ ಇದೇ ಕಾರಣಕ್ಕೆ ಜೈಲಿಗೆ ಹಾಕಲಾಯಿತು. ಭಾರತದಲ್ಲಿ ಇಂತಹ ಘಟನೆ ಕೊನೆಯದಾಗಿ ನಡೆದಿದ್ದು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ" ಎಂದು ದೀಪ್ಕೆ ಹೇಳಿದರು.
ಮೋದಿ ಸರ್ಕಾರವನ್ನು ಬ್ರಿಟಿಷ್ ಆಳ್ವಿಕೆಗೆ ಹೋಲಿಸಿದ ದೀಪ್ಕೆ, ಪ್ರಸ್ತುತ ಆಡಳಿತವು ಜನರ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
"ನರೇಂದ್ರ ಮೋದಿ ಅವರಿಗೆ ನಾನು ಹೇಳಬಯಸುವುದೇನೆಂದರೆ, ನಾನು ಈ ತ್ರಿವರ್ಣ ಧ್ವಜವನ್ನು ದೇಶದ ಪ್ರತಿಯೊಂದು ಭಾಗಕ್ಕೂ ಕೊಂಡೊಯ್ಯುತ್ತೇನೆ. ನನ್ನನ್ನು ಬಂಧಿಸಬೇಕೆಂದು ನೀವು ಬಯಸಿದರೆ, ದೆಹಲಿ, ಮಹಾರಾಷ್ಟ್ರ, ಕೇರಳ ಅಥವಾ ತಮಿಳುನಾಡಿನಲ್ಲಿ ಎಲ್ಲಿ ಬೇಕಾದರೂ ಬಂಧಿಸಬಹುದು. ದೇಶದ ಪ್ರತಿಯೊಂದು ಮೂಲೆಯಿಂದಲೂ ನನ್ನನ್ನು ಬಂಧಿಸಿ, ಆದರೆ ನಾನು ಮತ್ತೆ ಹಿಂತಿರುಗಿ ಬಂದು ಈ ತ್ರಿವರ್ಣ ಧ್ವಜವನ್ನು ಹಾರಿಸುತ್ತೇನೆ" ಎಂದು ಸವಾಲು ಹಾಕಿದರು.
ಜನರು ಏನು ತಿನ್ನಬೇಕು, ಯಾರನ್ನು ಮದುವೆಯಾಗಬೇಕು ಮತ್ತು ಯಾರಿಗೆ ಮತ ಹಾಕಬೇಕು ಎಂಬುದನ್ನು ಈ ಸರ್ಕಾರವು ಹಂತ ಹಂತವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಎಂಬ ಮೂವರು ನಾಯಕರ ಆದರ್ಶಗಳ ಮೇಲೆ ಈ ದೇಶ ನಿರ್ಮಾಣವಾಗಿದೆ. ಗಾಂಧಿಯವರನ್ನು ಭಾರತದ ಆತ್ಮವೆಂದೂ, ಅಂಬೇಡ್ಕರ್ ಅವರನ್ನು ಅದರ ಬೆನ್ನೆಲುಬೆಂದೂ ಹಾಗೂ ನೆಹರೂ ಅವರನ್ನು ಅದರ ಮಿದುಳು ಎಂದು ಬಣ್ಣಿಸಿದ ದೀಪ್ಕೆ, ಮೋದಿ ಅವರು ಇನ್ನೂ 120 ವರ್ಷ ಅಧಿಕಾರದಲ್ಲಿದ್ದರೂ ಈ ಮೂವರು ನಾಯಕರಿಗಿಂತ ದೊಡ್ಡವರಾಗಲು ಸಾಧ್ಯವಿಲ್ಲ ಎಂದರು.