ಲಖನೌ: 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಮತ್ತು ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ್ ಪಾರ್ಟಿ (ಕಾನ್ಶಿ ರಾಮ್) ಗುರುವಾರ 'ಸಾಮಾಜಿಕ ಪರಿವರ್ತನ್ ಮೋರ್ಚಾ' (Social Change Front) ಹೆಸರಿನಲ್ಲಿ ಮೈತ್ರಿ ಮಾಡಿಕೊಂಡಿವೆ.
ಈ ಹೊಸ ಮೈತ್ರಿಯನ್ನು ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ ಸ್ವಾಗತಿಸಿದ್ದಾರೆ. ಅಲ್ಲದೆ, ಈ ಮೈತ್ರಿಯು ಬಿಜೆಪಿಯ ಮತ ಹಂಚಿಕೆಯ ಮೇಲೆ (vote share) ಪರಿಣಾಮ ಬೀರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಇತರರ ಕೈಗೊಂಬೆಗಳಾಗುವ ರಾಜಕೀಯ ನಾಯಕರನ್ನು ಮತದಾರರು ತಿರಸ್ಕರಿಸಬಹುದು ಎಂದು ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಯಾದವ್, "ನಾವು 'ಸಾಮಾಜಿಕ ಬದಲಾವಣೆ ಮೋರ್ಚಾ'ವನ್ನು ಸ್ವಾಗತಿಸುತ್ತೇವೆ. ಬದಲಾವಣೆಯು ಸಾಮಾಜಿಕ ಮಟ್ಟದಲ್ಲಿ ಆಗಬೇಕಿದೆ, ಆದರೆ 'ರಾಜಕೀಯ ಬದಲಾವಣೆ ಮೋರ್ಚಾ' ಸಕ್ರಿಯಗೊಂಡಾಗ ಮಾತ್ರ ನಿಜವಾದ ಯಶಸ್ಸು ಸಿಗುತ್ತದೆ ಎಂದು ಹೇಳಿದ್ದಾರೆ.
ಪಿಡಿಎ ( ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತ) ಸಮುದಾಯದ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಎತ್ತಿಹಿಡಿಯುವವರಿಗೆ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವವರಿಗೆ ತಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥರು ತಿಳಿಸಿದ್ದಾರೆ.
ಪಿಡಿಎ ಸಮುದಾಯದ ಕಲ್ಯಾಣಕ್ಕಾಗಿ ಕೋಮುವಾದಿ ಶಕ್ತಿಗಳ ವಿರುದ್ಧ ಯಾರು ನಿಜವಾಗಿಯೂ ಹೋರಾಡುತ್ತಾರೋ ಮತ್ತು ಆ ಸಮುದಾಯದ ಧ್ವನಿಯಾಗುತ್ತಾರೋ, ಅವರ ಪ್ರಾಮಾಣಿಕ ದನಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ನಾವು ಸಹಕರಿಸುತ್ತೇವೆ. ಇದರಿಂದ ವಿರೋಧ ಪಕ್ಷಗಳಿಗೆ ಆಗುವ ಒಂದು ಲಾಭವೆಂದರೆ, ಭಾವನಾತ್ಮಕ ಮಾತುಗಳು ಮತ್ತು ವಂಚನೆಗೆ ಬಲಿಯಾಗಿ ಕೋಮುವಾದಿ ಶಕ್ತಿಗಳಿಗೆ ಮತ ಹಾಕುತ್ತಿದ್ದವರು, ಇನ್ನು ಮುಂದೆ ಅವರ ಕಡೆಗೆ ಹೋಗುವುದಿಲ್ಲ ಎಂದು ಯಾದವ್ ಹೇಳಿದ್ದಾರೆ.
ಈ ಹೊಸ ಮೈತ್ರಿಯು ಬಿಜೆಪಿಯಿಂದ ಮತದಾರರನ್ನು ದೂರ ಸೆಳೆಯಬಲ್ಲದು ಮತ್ತು ಆ ಪಕ್ಷದ ಮತ ಹಂಚಿಕೆಯನ್ನು (vote share) 2-3% ರಷ್ಟು ಕಡಿಮೆ ಮಾಡಬಲ್ಲದು ಎಂದು ಯಾದವ್ ಪ್ರತಿಪಾದಿಸಿದ್ದಾರೆ. "ಯಾವುದೋ ಪ್ರಭಾವಕ್ಕೆ ಒಳಗಾಗಿ ಮತ ಚಲಾಯಿಸುವ ಮುಗ್ಧ ಜನರಿಗೆ ಈಗ ಮತ್ತೊಂದು ಆಯ್ಕೆ ಲಭ್ಯವಾಗಲಿದೆ. ಇದರಿಂದ ಬಿಜೆಪಿಗೆ ಇನ್ನೂ 2-3% ಮತಗಳ ನಷ್ಟವಾಗಲಿದೆ. ಆಗ ಬಿಜೆಪಿ ಸಂಪೂರ್ಣವಾಗಿ ಅಪ್ರಸ್ತುತವಾಗುತ್ತದೆ. ಕೇವಲ ಮಾತುಗಳು ಮತ್ತು ಹೇಳಿಕೆಗಳ ಮೂಲಕ ಗದ್ದಲ ಸೃಷ್ಟಿಸುವುದನ್ನೇ ಏಕೈಕ ಗುರಿಯನ್ನಾಗಿಸಿಕೊಂಡಿರುವವರ ಸತ್ಯವನ್ನು ಜನರು ಅರಿತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೈತ್ರಿಯ ಘೋಷಣೆಯ ಕುರಿತು ಮಾತನಾಡಿದ ಯಾದವ್, ಈ ಬೆಳವಣಿಗೆಯು ರಾಜಕೀಯ ಬದಲಾವಣೆಯನ್ನು ಬಯಸುವ ಜನರನ್ನು, ಉತ್ತರ ಪ್ರದೇಶದಲ್ಲಿ ಅತಿ ದೊಡ್ಡ 'ಬೇಸ್ ವೋಟ್' (ನೆಲೆ ಮತಗಳು) ಹೊಂದಿರುವ ಪಕ್ಷದ ಸುತ್ತ ಒಗ್ಗೂಡಿಸಲಿದೆ "ಬಹುಕಾಲದಿಂದ ನಿರೀಕ್ಷಿಸಲಾಗಿದ್ದ ಈ ಬೆಳವಣಿಗೆಯಿಂದ, ನಿಜವಾದ ಬದಲಾವಣೆಯನ್ನು ಬಯಸುವ ಜನರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ 'ಬೇಸ್ ವೋಟ್' ಹೊಂದಿರುವ ಪಕ್ಷದತ್ತ ವಾಲಲಿದ್ದಾರೆ ಎಂಬುದು ಇಂದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ, 'ಪಿಡಿಎ' (PDA) ಗಿಂತ ಉತ್ತಮವಾದ ಬೇರೆ ಆಯ್ಕೆಯಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. 'ಸಾಮಾಜಿಕ ಬದಲಾವಣೆ ರಂಗ'ಕ್ಕೆ (Social Change Front)ಶುಭಾಶಯ ಸಹ ಕೋರಿದ್ದಾರೆ.