ರಾಂಪುರ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿರುವಂತೆಯೇ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಜಂ ಖಾನ್ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದಲ್ಲಿ ಹೈದರಾಬಾದ್ ಬಿರಿಯಾನಿಗೆ ಜಾಗವಿಲ್ಲ, ಗಡ್ಡ ಬಿಟ್ಟ ಮಾತ್ರಕ್ಕೆ ಯಾರೂ ಮೌಲಾನಾ ಅಥವಾ ಸಂತ ಆಗುವುದಿಲ್ಲ ಎಂದು ಹೇಳುವ ಮೂಲಕ ಓವೈಸಿ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜಂ ಖಾನ್, ನಾನು ಮೌಲಾನಾ ಅಲ್ಲ, ಒಬ್ಬ ಬ್ಯಾರಿಸ್ಟರ್ (ವಕೀಲ). ಗಡ್ಡ ಬಿಟ್ಟ ಮಾತ್ರಕ್ಕೆ ಯಾರೂ ಮೌಲಾನಾ ಅಥವಾ ಸಂತ ಆಗುವುದಿಲ್ಲ. ಈ ಬಗ್ಗೆ ಚರ್ಚಿಸಲು ಇನ್ನೂ ಅನೇಕ ಅವಕಾಶಗಳು ಸಿಗುತ್ತವೆ. ಈ ವಿಷಯವನ್ನು ಮುಂದುವರೆಸುವುದು ಬೇಡ, ಆದರೆ ಇಲ್ಲಿ ಹೈದರಾಬಾದ್ ಬಿರಿಯಾನಿ ಅಷ್ಟೇನೂ ಜನಪ್ರಿಯವಾಗಿಲ್ಲ ಎಂದು ವ್ಯಂಗ್ಯವಾಡಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸುಳಿವು ನೀಡುವ ಮೂಲಕ ತಮ್ಮ ರಾಜಕೀಯ ಉದ್ದೇಶಗಳನ್ನು ಸ್ಪಷ್ಟಪಡಿಸಿದರು. ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಸಂಭಾವ್ಯ ರಾಜಕೀಯ ಮೈತ್ರಿಗಳ ಬಗ್ಗೆ ಮಾತನಾಡಿದ ಅವರು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
'ನಾನು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು?' ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಖಾನ್, "ನಾನು ಸ್ಪರ್ಧಿಸಬಾರದು ಅಂತಾ ನೀವು ಯಾಕೆ ಬಯಸುತ್ತೀರಿ?" ಎಂದು ಮರುಪ್ರಶ್ನಿಸಿದರು. ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ತಮ್ಮದೇನೂ ಅಭ್ಯಂತರವಿಲ್ಲ , ಆದರೆ ಯಾವುದೇ ಮೈತ್ರಿ ಅಥವಾ ಒಪ್ಪಂದವು ಪರಸ್ಪರ ಗೌರವದ ಆಧಾರದ ಮೇಲೆ ಇರಬೇಕು ಎಂದು ಒತ್ತಿ ಹೇಳಿದರು.
ಇದು ಹಿಂದಿನ ಕಾಂಗ್ರೆಸ್ ಅಲ್ಲ. ಮೈತ್ರಿ ಮಾಡಿಕೊಳ್ಳುವುದರಲ್ಲಿ ನನಗೆ ಯಾವುದೇ ತೊಂದರೆಯಿಲ್ಲ. ಆದರೆ, ಅದೊಂದು ಗೌರವಾನ್ವಿತ ತಿಳುವಳಿಕೆಯಾಗಿರಬೇಕು. ಒಂದು ವೇಳೆ ನಾವು ಇನ್ನೂ ಕೆಲವು ತ್ಯಾಗಗಳನ್ನು ಮಾಡಬೇಕಾಗಿ ಬಂದರೂ, ಅದಕ್ಕೆ ನಾವು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು. ಇದೇ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಮಮಂದಿರಕ್ಕೆ ಭೇಟಿ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಖಾನ್, ಅದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದರು.
ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಖಾನ್, ಆ ಸಂಸ್ಥೆಗಳು ತಮ್ಮ ವಿಶ್ವಾಸಾರ್ಹತೆಯನ್ನು ತಾವೇ ಕಾಪಾಡಿಕೊಳ್ಳಬೇಕು, ಸಾಂವಿಧಾನಿಕ ಸಂಸ್ಥೆಗಳು ತಮ್ಮ ಘನತೆಯನ್ನು ರಕ್ಷಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿರುವ ಇಂತಹ ಸಂಸ್ಥೆಗಳಿಂದಾಗಿ ಜನರು ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಲಖನೌದಲ್ಲಿ ಸುಮಾರು 50 ವರ್ಷಗಳ ಕಾಲ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರೂ, ಅಲ್ಲಿ ತಮಗೆ ಸ್ವಂತ ಮನೆ ಇಲ್ಲ ಎಂದು ತಿಳಿಸಿದರು.