ಪಾಕಿಸ್ತಾನ ಸಚಿವ ಮುಸಾದಿಕ್ ಮಸೂದ್ ಮಲಿಕ್ 
ದೇಶ

ಸಿಂಧೂ ಜಲ ಒಪ್ಪಂದದ ಬಗ್ಗೆ ಮಾತುಕತೆಗೆ ಭಾರತ ಆಹ್ವಾನಿಸಲಿ: ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್

ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಶಾಂಘೈ ಸಹಕಾರ ಸಂಘಟನೆಯ (SCO) ನಾಗರಿಕತೆಯ ಸಂವಾದ ವೇದಿಕೆಯಲ್ಲಿ ಪಾಕಿಸ್ತಾನದ ನಿಯೋಗವನ್ನು ಮುನ್ನಡೆಸುತ್ತಿರುವ ಮಲಿಕ್, ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ನವದೆಹಲಿ: ಸಿಂಧೂ ಜಲ ಒಪ್ಪಂದದ (Indus Waters Treaty) ಕುರಿತು ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧವಿದ್ದೇವೆ. ಆದರೆ, ಇದಕ್ಕಾಗಿ ಭಾರತವೇ ಅಧಿಕೃತವಾಗಿ ಆಹ್ವಾನ ನೀಡಬೇಕು ಎಂದು ಪಾಕಿಸ್ತಾನದ ಹವಾಮಾನ ಬದಲಾವಣೆ ಮತ್ತು ಪರಿಸರ ಸಮನ್ವಯ ಸಚಿವ ಮುಸಾದಿಕ್ ಮಸೂದ್ ಮಲಿಕ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಶಾಂಘೈ ಸಹಕಾರ ಸಂಘಟನೆಯ (SCO) ನಾಗರಿಕತೆಯ ಸಂವಾದ ವೇದಿಕೆಯಲ್ಲಿ ಪಾಕಿಸ್ತಾನದ ನಿಯೋಗವನ್ನು ಮುನ್ನಡೆಸುತ್ತಿರುವ ಮಲಿಕ್, ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಒಪ್ಪಂದದ ಕುರಿತು ಚರ್ಚಿಸಲು ನೀವು ಆಹ್ವಾನಿಸಿದರೆ ಖಂಡಿತವಾಗಿಯೂ ಮಾತುಕತೆ ನಡೆಸುತ್ತೇವೆ. ಆದರೆ, ಸದ್ಯಕ್ಕೆ ಭಾರತ ಅಂತಹ ಯಾವುದೇ ಆಹ್ವಾನ ನೀಡಿಲ್ಲ" ಎಂದರು.

ಈ ಹಿಂದೆ ಭಾರತಕ್ಕೆ ಎಚ್ಚರಿಕೆ ನೀಡಿದ್ದ ಹೇಳಿಕೆಗಳ ಬಗ್ಗೆ ಕೇಳಿದಾಗಲೂ ಅವರು ನೇರ ಉತ್ತರ ನೀಡಲಿಲ್ಲ. ಭಾರತ ದ್ವಿಪಕ್ಷೀಯ ಮಾತುಕತೆಗೆ ಆಹ್ವಾನಿಸಿದರೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದಾಗಿ ತಿಳಿಸಿದರು.

'ನೀರು ಕಸಿಯುವ ಕೈ ಕತ್ತರಿಸುತ್ತೇವೆ' ಎಂದಿದ್ದ ಸಚಿವ

1960ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಹಿಯಾಗಿದ್ದ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ ನಿರ್ಧಾರವನ್ನು ಮುಸಾದಿಕ್ ಮಲಿಕ್ ಈ ಹಿಂದೆ ತೀವ್ರವಾಗಿ ಟೀಕಿಸಿದ್ದರು.

ಕಳೆದ ಜೂನ್‌ನಲ್ಲಿ ಮಾತನಾಡಿದ್ದ ಅವರು, ಪಾಕಿಸ್ತಾನದ ಪಾಲಿನ ನೀರನ್ನು ಕಸಿಯಲು ಪ್ರಯತ್ನಿಸುವ ಕೈಯನ್ನೇ ಕತ್ತರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಭಾರತ ನೀರನ್ನು ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಅಸ್ತ್ರವಾಗಿ ಬಳಸುತ್ತಿದೆ ಎಂದೂ ಆರೋಪಿಸಿದ್ದರು.

ಆದರೆ, ಭಾನುವಾರದ ಮಾತುಕತೆಯಲ್ಲಿ ಈ ಹಿಂದಿನ ಹೇಳಿಕೆಗಳ ಬಗ್ಗೆ ನೇರವಾಗಿ ಪ್ರತಿಕ್ರಿಯಿಸುವುದನ್ನು ಅವರು ತಪ್ಪಿಸಿದರು.

ಒಪ್ಪಂದದ ಬಗ್ಗೆ ಭಾರತದ ನಿಲುವಿನಲ್ಲಿ ಬದಲಾವಣೆ ಇಲ್ಲ

ಸಿಂಧೂ ಜಲ ಒಪ್ಪಂದದ ಕುರಿತು ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಶುಕ್ರವಾರ ಸ್ಪಷ್ಟಪಡಿಸಿದ್ದರು.

"ಒಪ್ಪಂದದ ಬಗ್ಗೆ ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದು ಅವರು ಹೇಳಿದ್ದರು.

ಒಪ್ಪಂದ ರದ್ದು ಮಾಡಿದ್ದ ಭಾರತ

2025ರ ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈ ದಾಳಿಯ ಬಳಿಕ ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತ್ತು. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ವಿಶ್ವಾಸಾರ್ಹವಾಗಿ ಮತ್ತು ಶಾಶ್ವತವಾಗಿ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ಒಪ್ಪಂದದ ಅಮಾನತು ಮುಂದುವರಿಯಲಿದೆ ಎಂಬುದು ಭಾರತದ ನಿಲುವಾಗಿದೆ.

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ನಡೆಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಉಭಯ ದೇಶಗಳ ನಡುವೆ ಸೇನಾ ಸಂಘರ್ಷ ಮುಂದುವರಿದ ಬಳಿಕ 2025ರ ಮೇ 10ರಂದು ಕದನ ವಿರಾಮದ ತಿಳಿವಳಿಕೆ ಏರ್ಪಟ್ಟಿತ್ತು.

ಕೃಷಿ ಮತ್ತು ನೀರಿನ ಪೂರೈಕೆಗೆ ಮಹತ್ವದ ಒಪ್ಪಂದ

1960ರಲ್ಲಿ ಸಹಿಯಾದ ಸಿಂಧೂ ಜಲ ಒಪ್ಪಂದವು ಸಿಂಧೂ ನದಿ ವ್ಯವಸ್ಥೆಯ ನೀರನ್ನು ಭಾರತ ಮತ್ತು ಪಾಕಿಸ್ತಾನ ಹಂಚಿಕೊಳ್ಳುವ ನಿಯಮಗಳನ್ನು ನಿರ್ಧರಿಸುತ್ತದೆ. ಪಾಕಿಸ್ತಾನದ ಕೃಷಿ ಮತ್ತು ಕುಡಿಯುವ ನೀರಿನ ಪೂರೈಕೆಗೆ ಈ ನದಿಗಳ ನೀರು ಅತ್ಯಂತ ಮಹತ್ವದ್ದಾಗಿದೆ. ಅಲ್ಲಿನ ಕೃಷಿ ಭೂಮಿಯ ದೊಡ್ಡ ಭಾಗ ಈ ನೀರಿನ ಮೇಲೆ ಅವಲಂಬಿತವಾಗಿದೆ.

ನವೆಂಬರ್ 20ರಿಂದ 22ರವರೆಗೆ ನಡೆಯುತ್ತಿರುವ ಎಸ್‌ಸಿಒ ವೇದಿಕೆಯಲ್ಲಿ ಪಾಲ್ಗೊಳ್ಳಲು ಮುಸಾದಿಕ್ ಮಲಿಕ್ ನವದೆಹಲಿಗೆ ಭೇಟಿ ನೀಡಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಕೇಂದ್ರ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿರುವುದು ಅಪರೂಪದ ಬೆಳವಣಿಗೆಯಾಗಿದೆ. ಎಸ್‌ಸಿಒ ಸದಸ್ಯ ರಾಷ್ಟ್ರಗಳ ಪೈಕಿ ಪಾಕಿಸ್ತಾನಕ್ಕೂ ಭಾರತ ಆಹ್ವಾನ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Haryana: ಸೇನಾ ತರಬೇತಿ ವೇಳೆ ಭೀಕರ ದುರಂತ: ಟ್ಯಾಂಕ್ ಹರಿದು ಇಬ್ಬರು ಯೋಧರು ಸಾವು

Bisleri ನೀರು ಕೂಡ ಅಸುರಕ್ಷಿತ; ಅಪಾಯಕಾರಿ ರಾಸಾಯನಿಕಗಳಿದ್ದು ಕ್ಯಾನ್ಸರ್ ಕಾರಕ; ಕಾನೂನು ಕ್ರಮಕ್ಕೆ FSSAI ಅನುಮತಿ!

'ರಾಮಾಯಣ' ಸಂಗೀತಕ್ಕಾಗಿ 3 ವರ್ಷ ಮೀಸಲು; 10-12 ಸಿನಿಮಾಗಳ ಆಫರ್ ತಿರಸ್ಕರಿಸಿದ್ದೆ: ಎ.ಆರ್. ರೆಹಮಾನ್

ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ: ಮರಕ್ಕೆ ಕಾರು ಡಿಕ್ಕಿ; 8 ಮಂದಿ ಸಾವು; ಸಿಎಂ ವಿಜಯ್ ಸಂತಾಪ!

ಪ್ಯಾಲೆಸ್ ವಿವಾದ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೈಡ್ರಾಮಾ.. YS ಶರ್ಮಿಳಾರನ್ನು ತಡೆದ ಪೊಲೀಸರು! Video