'ನಮ್ಮ ನಿಲುವಿನಲ್ಲಿ ರಾಜಿ ಇಲ್ಲ, ನಿರ್ಧಾರಕ್ಕೆ ಬದ್ಧ, ಸೋದರ ರಾಹುಲ್ ಗಾಂಧಿಗೆ ತುಂಬಾ ಥ್ಯಾಂಕ್ಸ್': ಕಡ್ಡಿಮುರಿದಂತೆ ಹೇಳಿದ ಸ್ಟಾಲಿನ್ !
ಈ ಹಾದಿಯಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ,ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಡಿಎಂಕೆ ನಾಯಕ ಮಾಜಿ ಸಿಎಂ ಎಂ ಕೆ ಸ್ಟಾಲಿನ್ ಪುನರುಚ್ಛರಿಸಿದ್ದಾರೆ.
ಸಂವಿಧಾನ ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಡಿಎಂಕೆ ವಹಿಸಿರುವ ಐತಿಹಾಸಿಕ ಪಾತ್ರವನ್ನು ಗುರುತಿಸಿರುವ ಸಹೋದರ ರಾಹುಲ್ ಗಾಂಧಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ತಮಿಳುನಾಡು ಮತ್ತು ತಮಿಳು ಜನರ ಹಿತಾಸಕ್ತಿಯನ್ನೇ ಮೊದಲ ಆದ್ಯತೆಯಾಗಿಟ್ಟುಕೊಂಡು ನಾವು ಪ್ರತಿಯೊಂದು ನಿರ್ಧಾರವನ್ನೂ ಕೈಗೊಂಡಿದ್ದೇವೆ.
ಈ ಹಾದಿಯಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ,ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಡಿಎಂಕೆ ನಾಯಕ ಮಾಜಿ ಸಿಎಂ ಎಂ ಕೆ ಸ್ಟಾಲಿನ್ ಪುನರುಚ್ಛರಿಸಿದ್ದಾರೆ.
ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ತಮ್ಮ ಪಕ್ಷ ಬೆಂಬಲ ನೀಡಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಪಕ್ಷ ಮುಂದಿಟ್ಟಿದ್ದ ಎರಡು ಪ್ರಮುಖ ಬೇಡಿಕೆಗಳನ್ನು ಹೊಸ ಕರಡು ಮಸೂದೆಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಿನ್ನೆ ಶನಿವಾರ ನಡೆದ ಡಿಎಂಕೆ ಸಂಸದರ ಸಭೆಯ ಬಳಿಕ ಹೇಳಿಕೆ ನೀಡಿದ ಸ್ಟಾಲಿನ್, ಎಲ್ಲಾ ರಾಜ್ಯಗಳಲ್ಲೂ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಯಿಂದ ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಪ್ರಸ್ತುತ ಅನುಪಾತಕ್ಕೆ ಧಕ್ಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಜನಸಂಖ್ಯೆ ಬೆಳವಣಿಗೆಯನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ತಮಿಳುನಾಡಿನಂತಹ ರಾಜ್ಯಗಳು ಸಂಸತ್ತಿನಲ್ಲಿ ತಮ್ಮ ಪ್ರಾತಿನಿಧ್ಯದ ಪಾಲನ್ನು ಕಳೆದುಕೊಳ್ಳಬಾರದು ಎಂದು ವಾದಿಸಿದ್ದ ಡಿಎಂಕೆ, ಈ ಹಿಂದೆ ಮಂಡಿಸಲಾಗಿದ್ದ ಪ್ರಸ್ತಾವನೆಯನ್ನು ವಿರೋಧಿಸಿತ್ತು.
ಪರಿಷ್ಕೃತ ಮಸೂದೆಯಲ್ಲಿ ಪಕ್ಷದ ಆತಂಕಗಳಿಗೆ ಪರಿಹಾರ ಕಲ್ಪಿಸಲಾಗಿದೆ ಎಂದು ಹೇಳಿದ ಸ್ಟಾಲಿನ್, ಇದು ತಮಿಳುನಾಡು ಸೇರಿದಂತೆ ಇತರ ದಕ್ಷಿಣದ ರಾಜ್ಯಗಳ ಗೆಲುವು ಎಂದು ಬಣ್ಣಿಸಿದ್ದಾರೆ.
ತಮಿಳುನಾಡಿನ ಪ್ರಸ್ತುತ ಶೇ.7.18ರಷ್ಟು ಲೋಕಸಭಾ ಸ್ಥಾನಗಳ ಪಾಲನ್ನು ರಕ್ಷಿಸುವ ಉದ್ದೇಶದಿಂದ ಪಕ್ಷ ಈ ನಿರ್ಧಾರ ಕೈಗೊಂಡಿದೆ ಎಂದು ಡಿಎಂಕೆ ಸಂಸದ ಎ. ರಾಜಾ ಹೇಳಿದ್ದಾರೆ. ಅಗತ್ಯವಿದ್ದರೆ ಸಂಸದರು ಮತ್ತಷ್ಟು ತಿದ್ದುಪಡಿಗಳನ್ನು ಕೋರುವ ಅವಕಾಶವೂ ಇದೆ ಎಂದು ತಿಳಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಬದಲಿಸಿರುವುದಕ್ಕೆ ಸ್ಟಾಲಿನ್ ಟೀಕಿಸಿದ್ದಾರೆ. ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಡಿಎಂಕೆಯ ಬೇಡಿಕೆಯನ್ನು ಕಾಂಗ್ರೆಸ್ ಈ ಹಿಂದೆ ಬೆಂಬಲಿಸಿತ್ತು ಎಂದು ಅವರು ಹೇಳಿದ್ದಾರೆ.
ಪರಿಷ್ಕೃತ ಮಸೂದೆಯಲ್ಲಿನ ನಿಬಂಧನೆಗಳು ದಕ್ಷಿಣದ ರಾಜ್ಯಗಳಿಗೆ ರಕ್ಷಣೆ ಒದಗಿಸುತ್ತವೆ ಎಂಬ ವಾದದೊಂದಿಗೆ ಡಿಎಂಕೆ ಈ ಹಿಂದೆ ವಿರೋಧಿಸಿದ್ದ ಪ್ರಸ್ತಾವನೆಗೆ ಈಗ ಬೆಂಬಲ ನೀಡಿದೆ.
ಡಿಎಂಕೆಗೆ ಮನವಿ ಮಾಡಿದ್ದ ರಾಹುಲ್ ಗಾಂಧಿ
ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳನ್ನು ವಿರೋಧಿಸುವಂತೆ, ತಮ್ಮ ನಿಲುವಿನಿಂದ ಹಿಂದೆ ಸರಿಯುವಂತೆ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ರಾಹುಲ್ ಗಾಂಧಿ ಇಂದು ಭಾನುವಾರ ಕೊನೆ ಕ್ಷಣದ ಮನವಿ ಮಾಡಿದ್ದರು.
ಇಂಡಿಯಾ ಮೈತ್ರಿಕೂಟದ ಹಿರಿಯ ನಾಯಕರು ಮತ್ತು ನಾನು ಚೆನ್ನೈಗೆ ಹೋಗಿ ಸೋದರ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿ, ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ವಿರೋಧಿಸುವಂತೆ ಅವರಲ್ಲಿ ಮತ್ತು ಡಿಎಂಕೆಯಲ್ಲಿ ಮನವಿ ಮಾಡಲಿದ್ದೇವೆ.
ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವುದರಿಂದ ಭಾರತದಲ್ಲಿ ಪ್ರಜಾಪ್ರಭುತ್ವವೇ ನಾಶವಾಗಲಿದೆ. ಭಾರತದ ಸಂಪೂರ್ಣ ಚುನಾವಣಾ ನಕ್ಷೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮರುರೂಪಿಸಲು ಬಿಜೆಪಿ-ಆರ್‌ಎಸ್‌ಎಸ್‌ಗೆ ಇದರಿಂದ ಮಿತಿಯಿಲ್ಲದ ಅವಕಾಶ ಸಿಗಲಿದೆ.
ಸಹೋದರ ಸ್ಟಾಲಿನ್ ಅವರು ತಮಿಳು ವಿರೋಧಿ ಶಕ್ತಿಗಳ ವಿರುದ್ಧ ಯಾವಾಗಲೂ ಬಂಡೆಯಂತೆ ನಿಂತಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿ, ತಮಿಳುನಾಡಿನ ಹಿತಾಸಕ್ತಿ ಮತ್ತು ಸಂವಿಧಾನದ ರಕ್ಷಣೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಈ ಮಸೂದೆಯನ್ನು ಸೋಲಿಸಬೇಕಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.