ಕರಜಣ್: CNG ರೀಫಿಲ್ ಬಂಕ್ ನಲ್ಲೇ ಕಾರೊಂದು ಸ್ಫೋಟಗೊಂಡಿದ್ದು, ಈ ಭಯಾನಕ ಘಟನೆಯಲ್ಲಿ ಇಬ್ಬರು ಗಾಯಗೊಂಡು ಹಲವು ವಾಹನಗಳು ಜಖಂಗೊಂಡಿವೆ.
ಗುಜರಾತ್‌ನ ಕರಜಣ್ ಸಮೀಪ ರಾಷ್ಟ್ರೀಯ ಹೆದ್ದಾರಿ-48ರಲ್ಲಿ (NH-48) ಇರುವ CNG ಪಂಪ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾರಿಗೆ CNG ತುಂಬಿಸುತ್ತಿದ್ದ ವೇಳೆ ಏಕಾಏಕಿ ಭಾರೀ ಸ್ಫೋಟ ಸಂಭವಿಸಿ ಆತಂಕದ ವಾತಾವರಣ ನಿರ್ಮಾಣವಾಯಿತು. ಅಕ್ಟೋಬರ್ 1ರಂದು ಮಧ್ಯಾಹ್ನ ಈ ಘಟನೆ ನಡೆದಿದೆ.
ಜಿಂದಾಲ್ ಕಂಪನಿಯ ಎದುರಿರುವ CNG ಪಂಪ್‌ನಲ್ಲಿ ಕಾರಿಗೆ CNG ತುಂಬಿಸುತ್ತಿದ್ದ ವೇಳೆ ವಾಹನದ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ. ಸ್ಫೋಟದ ತೀವ್ರತೆಗೆ ಕಾರಿನ ಹಿಂಭಾಗದ ಭಾಗಗಳು ಹಾಗೂ ಗಾಜಿನ ಚೂರುಗಳು ಹಲವು ಮೀಟರ್ ದೂರಕ್ಕೆ ಹಾರಿವೆ.
ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಎರಡು ವಾಹನಗಳಿಗೂ ಹಾನಿ, ಇಬ್ಬರಿಗೆ ಗಾಯ
ಸ್ಫೋಟದ ಪರಿಣಾಮ ಸಮೀಪದಲ್ಲಿ ನಿಲ್ಲಿಸಿದ್ದ ಮತ್ತೆರಡು ವಾಹನಗಳಿಗೂ ಹಾನಿಯಾಗಿದೆ ಎಂದು ಲಭ್ಯ ಮಾಹಿತಿಯಿಂದ ತಿಳಿದುಬಂದಿದೆ. ಅಲ್ಲದೆ ಬಂಕ್ ನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಫೋಟದ ಬಳಿಕ CNG ಪಂಪ್‌ನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕರಜಣ್ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, CNG ತುಂಬಿಸುವ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆ ವಿಡಿಯೋದಲ್ಲಿ ಕಂಡುಬರುತ್ತಿದೆ.