ನವದೆಹಲಿ: ಮಹಿಳೆಯರ ವಿರುದ್ಧ ಅಪರಾಧ ಎಸಗುವವರಲ್ಲಿ ಭಯ ಮೂಡಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದೆಹಲಿ-ಎನ್‌ಸಿಆರ್‌ನಲ್ಲಿ, ಅದರಲ್ಲೂ ವಿಶೇಷವಾಗಿ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂಬ ಭಾವನೆ ಇದೆ ಎಂದು ನ್ಯಾಯಾಲಯ ಗಮನಿಸಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ನಾವು ಒಟ್ಟಾಗಿ ಕೆಲಸ ಮಾಡಬೇಕು. ದೆಹಲಿ-ಎನ್‌ಸಿಆರ್‌ನ ಪ್ರತಿಯೊಬ್ಬ ಮಹಿಳೆಯೂ ರಾತ್ರಿ 11 ಗಂಟೆಯಾದರೂ ರಸ್ತೆಯಲ್ಲಿ ಅಥವಾ ಮೆಟ್ರೋದಲ್ಲಿ ಪ್ರಯಾಣಿಸುವಾಗ ಸುರಕ್ಷಿತವಾಗಿದ್ದೇನೆ ಎಂಬ ಭಾವನೆ ಹೊಂದುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿತು.
ಅಪರಾಧ ನಡೆದ ಬಳಿಕ ಏನು ಮಾಡುತ್ತೀರಿ ಎಂಬುದಕ್ಕಿಂತ, ಅಪರಾಧ ನಡೆಯದಂತೆ ತಡೆಯುವುದು ಮುಖ್ಯ. ಇಂತಹ ಅಪರಾಧಗಳನ್ನು ಎಸಗುವ ಸಾಧ್ಯತೆ ಇರುವ ಗೂಂಡಾಗಳು ಮತ್ತು ಸಮಾಜವಿರೋಧಿ ಶಕ್ತಿಗಳಲ್ಲಿ ಪೊಲೀಸರು ಭಯ ಮೂಡಿಸಬೇಕು ಎಂದು ಹೇಳಿತು.
‘In Re: Recent rape incidents in Delhi NCR’ ಎಂಬ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಅತ್ಯಾಚಾರವು ಯಾವುದೇ ಸಮಾಜಕ್ಕೂ ಸಂಪೂರ್ಣವಾಗಿ ಒಪ್ಪಿಗೆಯಾಗದ ಕೃತ್ಯ ಎಂದು ಹೇಳಿತು.
ದೆಹಲಿ-ಎನ್‌ಸಿಆರ್‌ನಲ್ಲಿ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ವಿರುದ್ಧ ನಡೆದ ಅಪರಾಧಗಳ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರಕರಣಗಳು ಕಾನೂನು ಜಾರಿ ಅಧಿಕಾರಿಗಳ ಮಟ್ಟದಲ್ಲಿ ವ್ಯವಸ್ಥಿತ ವೈಫಲ್ಯವನ್ನು ಸೂಚಿಸುತ್ತವೆ ಎಂದು ನ್ಯಾಯಾಲಯ ಆಗ ಗಮನಿಸಿತ್ತು.
ದೆಹಲಿಯ ಆಸ್ಥಾ ಕುಂಜ್ ಪಾರ್ಕ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದಿದೆ ಎಂದು ಆರೋಪಿಸಲಾದ ಸಾಮೂಹಿಕ ಅತ್ಯಾಚಾರ, ರಾಜಧಾನಿಯ ಸ್ವರೂಪ್ ನಗರ ಪ್ರದೇಶದಲ್ಲಿ ವರದಿಯಾದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಹಾಗೂ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪರಿಗಣಿಸಿತ್ತು.
ಬಸ್ ಪ್ರಕರಣದಲ್ಲಿ, ಬಸ್ ಗ್ರೇಟರ್ ನೋಯ್ಡಾದಿಂದ ದೆಹಲಿಗೆ 47 ಕಿ.ಮೀ.ಗೂ ಹೆಚ್ಚು ದೂರ ಸಂಚರಿಸಿದರೂ ಅದನ್ನು ತಡೆಯಲು ಕಾನೂನು ಜಾರಿ ಸಂಸ್ಥೆಗಳು ವಿಫಲವಾಗಿವೆ ಎಂದು ಆರೋಪಿಸಲಾಗಿದೆ.