ನವದೆಹಲಿ: ಭಾರತದಲ್ಲಿ ದೈನಂದಿನ ಕಚೇರಿ ಅಥವಾ ಕೆಲಸದ ಸ್ಥಳಗಳಿಗೆ ಪ್ರಯಾಣಿಸುವ ಉದ್ಯೋಗಿಗಳ ಸಾರಿಗೆ ವ್ಯವಸ್ಥೆಯ ಕುರಿತು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ಅಡಿಯಲ್ಲಿ ಬರುವ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (NSSO) ಮಹತ್ವದ ವರದಿಯೊಂದನ್ನು ಬಿಡುಗಡೆ ಮಾಡಿದೆ.
ವರದಿಗಳ ಪ್ರಕಾರ, ದೇಶದ ಒಟ್ಟು ಉದ್ಯೋಗಿಗಳಲ್ಲಿ ಶೇಕಡಾ 42.6 ರಷ್ಟು ಜನರು ದ್ವಿಚಕ್ರ ವಾಹನಗಳನ್ನು ತಮ್ಮ ಪ್ರಮುಖ ಪ್ರಯಾಣದ ಮೂಲವನ್ನಾಗಿ ಬಳಸುತ್ತಿದ್ದಾರೆಂದು ತಿಳಿದುಬಂದಿದೆ.
ಶೇ.83.4ರಷ್ಟು ಕಾರ್ಮಿಕರು 30 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ತಮ್ಮ ಕೆಲಸದ ಸ್ಥಳ ತಲುಪುತ್ತಾರೆ. ದೇಶಾದ್ಯಂತ ಉದ್ಯೋಗ ಪ್ರಯಾಣದ ಸರಾಸರಿ ಅವಧಿಯೂ ತುಲನಾತ್ಮಕವಾಗಿ ಕಡಿಮೆಯಾಗಿದೆ. ಬಸ್, ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಕೇವಲ ಶೇ.15ರಷ್ಟು ಕಾರ್ಮಿಕರು ಬಳಸುತ್ತಿದ್ದಾರೆ.
ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (NSSO) ನಡೆಸಿದ ವಿಸ್ತೃತ ಅಧ್ಯಯನದ ಬಳಿಕ ಈ ಪ್ರಮುಖ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ.
ಅಧ್ಯಯನವು 14,274 ಗ್ರಾಮಗಳು ಹಾಗೂ 10,377 ನಗರ ಬ್ಲಾಕ್‌ಗಳಲ್ಲಿ ಒಟ್ಟು 4,92,023 ಕುಟುಂಬಗಳು ಮತ್ತು 20,34,371 ವ್ಯಕ್ತಿಗಳನ್ನು ಒಳಗೊಂಡಿತ್ತು. ದೀರ್ಘಾವಧಿಯ ಸಾರಿಗೆ ಅಗತ್ಯಗಳನ್ನು ದಾಖಲಿಸುವ ಉದ್ದೇಶದಿಂದ ಒಂದು ಕಿಲೋಮೀಟರ್‌ಗಿಂತ ಹೆಚ್ಚು ದೂರದ ಪ್ರಯಾಣಗಳನ್ನು ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ.
ದೆಹಲಿ ಸೇರಿದಂತೆ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಗಾಗಿ ತಿಂಗಳಿಗೆ ರೂ.1,000ಕ್ಕಿಂತ ಹೆಚ್ಚು ಖರ್ಚು ಮಾಡುವ ಉದ್ಯೋಗಿಗಳಿಗೆ ಸ್ಥಳೀಯ ಪ್ರಯಾಣ ವೆಚ್ಚವು ಮಾಸಿಕ ಜೀವನ ವೆಚ್ಚದ ಪ್ರಮುಖ ಭಾಗವಾಗಿದೆ.
ದೇಶದಲ್ಲಿ ಕಾರ್ಮಿಕರು ಪ್ರತಿದಿನ ಕೆಲಸದ ಸ್ಥಳಕ್ಕೆ ತೆರಳಲು ಸರಾಸರಿ ತಿಂಗಳಿಗೆ ರೂ.785 ಖರ್ಚು ಮಾಡುತ್ತಾರೆ. ನಗರ ಪ್ರದೇಶದ ಉದ್ಯೋಗಿಗಳು ತಿಂಗಳಿಗೆ ಸರಾಸರಿ ರೂ.1,044 ಖರ್ಚು ಮಾಡಿದರೆ, ಗ್ರಾಮೀಣ ಕಾರ್ಮಿಕರ ಪ್ರಯಾಣ ವೆಚ್ಚ ರೂ.612ರಷ್ಟಿದೆ.
ಪುರುಷ ಕಾರ್ಮಿಕರು ತಿಂಗಳಿಗೆ ಸರಾಸರಿ ರೂ.835 ಪ್ರಯಾಣ ವೆಚ್ಚ ಭರಿಸುತ್ತಾರೆ. ಮಹಿಳಾ ಕಾರ್ಮಿಕರ ಸರಾಸರಿ ವೆಚ್ಚ ರೂ.533ರಷ್ಟಿದೆ. ಇದಲ್ಲದೆ, ಶೇ.61.9ರಷ್ಟು ಪುರುಷ ಕಾರ್ಮಿಕರು ಪ್ರತಿದಿನ 1 ಕಿಲೋಮೀಟರ್‌ಗಿಂತ ಹೆಚ್ಚು ದೂರ ಕೆಲಸಕ್ಕೆ ಪ್ರಯಾಣಿಸುತ್ತಾರೆ. ಮಹಿಳಾ ಕಾರ್ಮಿಕರ ಪೈಕಿ ಇಂತಹ ಪ್ರಯಾಣ ಮಾಡುವವರ ಪ್ರಮಾಣ ಶೇ.41.9ರಷ್ಟಿದೆ.
ವಿದ್ಯಾರ್ಥಿಗಳ ಪ್ರಯಾಣದ ಮಾದರಿಯೂ ವಿಭಿನ್ನವಾಗಿದೆ. 6 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳ ಪೈಕಿ ಸುಮಾರು ಶೇ.66.4ರಷ್ಟು ಮಂದಿ ಶಾಲೆ ಅಥವಾ ಕಾಲೇಜು ತಲುಪಲು ಒಂದು ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸುತ್ತಾರೆ. ವಿದ್ಯಾರ್ಥಿಗಳ ಪ್ರಯಾಣದಲ್ಲಿ ನಡೆದುಕೊಂಡು ಹೋಗುವುದು ಶೇ.37ರಷ್ಟು ಪಾಲು ಹೊಂದಿದ್ದು, ಬಸ್‌ನಲ್ಲಿ ಶೇ.29.5ರಷ್ಟು ಹಾಗೂ ಸೈಕಲ್‌ನಲ್ಲಿ ಶೇ.15.8ರಷ್ಟು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ದೇಶಾದ್ಯಂತ ಶೇ.10.5ರಷ್ಟು ವಿದ್ಯಾರ್ಥಿಗಳು ಆಟೊರಿಕ್ಷಾ ಬಳಸುತ್ತಾರೆ.
ವಿದ್ಯಾರ್ಥಿಗಳ ಪ್ರಯಾಣಕ್ಕೆ ಸರಾಸರಿ 23 ನಿಮಿಷಗಳು ಬೇಕಾಗುತ್ತವೆ. ಶೇ.87.6ರಷ್ಟು ವಿದ್ಯಾರ್ಥಿಗಳು ಅರ್ಧ ಗಂಟೆಯೊಳಗೆ ಶಾಲೆ ಅಥವಾ ಕಾಲೇಜು ತಲುಪುತ್ತಾರೆ. ವಿದ್ಯಾರ್ಥಿಗಳ ಮಾಸಿಕ ಪ್ರಯಾಣ ವೆಚ್ಚ ದೇಶಾದ್ಯಂತ ಸರಾಸರಿ ರೂ.443ರಷ್ಟಿದೆ. ನಗರ ಪ್ರದೇಶದ ವಿದ್ಯಾರ್ಥಿಗಳ ಪ್ರಯಾಣ ವೆಚ್ಚ ತಿಂಗಳಿಗೆ ರೂ.617ರಷ್ಟಿದ್ದರೆ, ಗ್ರಾಮೀಣ ಕುಟುಂಬಗಳು ಸರಾಸರಿ ರೂ.361 ಖರ್ಚು ಮಾಡುತ್ತವೆ. ವಿದ್ಯಾರ್ಥಿಗಳು ಶಾಲೆ ಅಥವಾ ಕಾಲೇಜಿಗೆ ತೆರಳುವ ಗರಿಷ್ಠ ಸಮಯ ಬೆಳಗ್ಗೆ 8ರಿಂದ 9 ಗಂಟೆಯ ನಡುವೆಯಾಗಿದೆ.
ಮನೆಗಳಿಂದ ದೂರದ ಪ್ರಯಾಣದ ವಿಚಾರದಲ್ಲಿಯೂ ರಸ್ತೆ ಸಾರಿಗೆ ಮೂಲಸೌಕರ್ಯದ ಮೇಲಿನ ಅವಲಂಬನೆ ಹೆಚ್ಚಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ರಾತ್ರಿ ತಂಗುವ ಅಗತ್ಯವಿರುವ ದೂರದ ಪ್ರಯಾಣಗಳಲ್ಲಿ ಬಸ್‌ಗಳು ಶೇ.55.8ರಷ್ಟು ಪ್ರಯಾಣಿಕರನ್ನು ಸಾಗಿಸುತ್ತವೆ. ಅಂತಾರಾಜ್ಯ ಅಥವಾ ಅಂತರ್‌ನಗರ ರೈಲುಗಳು ಶೇ.17.7ರಷ್ಟು ಪ್ರಯಾಣಿಕರ ಪ್ರಯಾಣಕ್ಕೆ ಬಳಕೆಯಾಗುತ್ತವೆ. ಖಾಸಗಿ ಕಾರುಗಳ ಪಾಲು ಶೇ.15.1ರಷ್ಟಿದ್ದರೆ, ದ್ವಿಚಕ್ರ ವಾಹನಗಳು ಶೇ.8.8ರಷ್ಟು ಪ್ರಯಾಣಗಳನ್ನು ನಿರ್ವಹಿಸುತ್ತವೆ. ಇಂತಹ ದೂರದ ಪ್ರಯಾಣಗಳಲ್ಲಿ ಸಾಮಾಜಿಕ ಚಟುವಟಿಕೆಗಳು, ಸಂವಹನ ಹಾಗೂ ಧಾರ್ಮಿಕ ಉದ್ದೇಶಗಳು ಒಟ್ಟು ಶೇ.70.2ರಷ್ಟು ಪಾಲು ಹೊಂದಿವೆ.