ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಹಾಗೂ "ಮತ ಕಳ್ಳತನ"ದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ, 'ಇಂಡಿಯಾ' (INDIA) ಮೈತ್ರಿಕೂಟದ ನಾಯಕರು ಗುರುವಾರ ರಾಜ್‌ಘಾಟ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು.
ಇಂದು ರಾಜ್‌ಘಟ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿರೋಧ ಪಕ್ಷಗಳ ನಾಯಕರು, ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು ಮತ್ತು ಬಿಜೆಪಿ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ(CEC) "ಸದ್ಬುದ್ಧಿ" ನೀಡುವಂತೆ ಪ್ರಾರ್ಥಿಸಿದರು.
ಶುಕ್ರವಾರವೂ ಈ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಪಕ್ಷಗಳ ನಾಯಕರು ಹೇಳಿದ್ದು, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ದೇಶದಲ್ಲಿ ಪ್ರತಿಯೊಬ್ಬ ಮತದಾರನ ಹಕ್ಕು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ 'ಇಂಡಿಯಾ' ಮೈತ್ರಿಕೂಟದ ನಾಯಕರು ಪಣ ತೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದರು.
ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಪಿಐ-ಎಂ (CPI-M) ನಾಯಕ ಜಾನ್ ಬ್ರಿಟ್ಟಾಸ್ ಹೇಳಿದರು. "ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಪಣತೊಟ್ಟಿದ್ದರೆ, ನಾವು ಜ್ಞಾನೇಶ್ ಕುಮಾರ್ ಅವರನ್ನು ಕೆಳಗಿಳಿಸಲು ಪಣ ತೊಟ್ಟಿದ್ದೇವೆ" ಎಂದರು.
ಕುಮಾರ್ ಅವರ ರಾಜೀನಾಮೆಯಿಂದ "ದೇಶಕ್ಕೆ ಒಳಿತಾಗುತ್ತದೆ" ಎಂದು ಹೇಳುವ ಮೂಲಕ ಸಿಪಿಐ (CPI) ನಾಯಕ ಪಿ. ಸಂತೋಷ್ ಕೂಡ ರಾಜೀನಾಮೆಗೆ ಆಗ್ರಹಿಸಿದರು; ಅದೇ ವೇಳೆ, ವಿರೋಧ ಪಕ್ಷಗಳ ಒಗ್ಗಟ್ಟು ಅಚಲವಾಗಿದೆ ಎಂದು ಸಿಪಿಐ-ಎಂನ ವಿ. ಶಿವದಾಸನ್ ಹೇಳಿದರು.
ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪ ಮತ್ತು ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ನಡೆಸುತ್ತಿರುವ ಹೋರಾಟ ಸತತ ಮೂರನೇ ದಿನವೂ ಮುಂದುವರೆದಿದೆ.