ಮೊರ್ಬಿ: ಹೆದ್ದಾರಿ ದಾಟುತ್ತಿದ್ದ ಕುರಿ ಮಂದೆ ಮೇಲೆ ಸರಕುಸಾಗಾಣಿಕಾ ಟ್ರಕ್ ಹರಿದಿದ್ದು, ಈ ವೇಳೆ 23 ಕುರಿ, 2 ಮೇಕೆಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಾಳಿಯಾ-ಮಿಯಾಣಾ ಸಮೀಪದ ಕಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ವೇಗವಾಗಿ ಬಂದ ಟ್ರಕ್‌ವೊಂದು ಕುರಿ-ಮೇಕೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ 25 ಪ್ರಾಣಿಗಳು ಮೃತಪಟ್ಟಿವೆ.
ಅಪಘಾತದ ಭೀಕರ ದೃಶ್ಯ ಹೆದ್ದಾರಿ ಬದಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೂಲಗಳ ಪ್ರಕಾರ ಮಾಳಧಾರಿ ಸಮುದಾಯದ ಕುರಿಗಾಹಿಗಳ ಗುಂಪೊಂದು ಕುರಿ-ಮೇಕೆಗಳ ಹಿಂಡಿನೊಂದಿಗೆ ಕಚ್ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಿಂಡು ಹೆದ್ದಾರಿ ದಾಟುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಪ್ರಾಣಿಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ 23 ಕುರಿಗಳು ಮತ್ತು ಎರಡು ಮೇಕೆಗಳು ಮೃತಪಟ್ಟಿವೆ. ಇನ್ನು ಸುಮಾರು 25 ಪ್ರಾಣಿಗಳು ಗಾಯಗೊಂಡಿವೆ ಎಂದು ತಿಳಿದುಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತ
ಹೆದ್ದಾರಿ ಬದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಕುರಿ-ಮೇಕೆಗಳ ಹಿಂಡು ಹೆದ್ದಾರಿ ದಾಟುತ್ತಿರುವಾಗ ವೇಗವಾಗಿ ಬಂದ ಟ್ರಕ್ ಅವುಗಳತ್ತ ನುಗ್ಗಿದೆ.
ಬಳಿಕ ಟ್ರಕ್ ಹಿಂಡಿಗೆ ಡಿಕ್ಕಿ ಹೊಡೆದು ಮುಂದೆ ಸಾಗುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ.
ಟ್ರಕ್‌ನ ವೇಗದಿಂದಾಗಿ ಹಲವು ಪ್ರಾಣಿಗಳು ಅದರ ಅಡಿಗೆ ಸಿಲುಕಿದ್ದು, ಅಪಘಾತದ ತೀವ್ರತೆ ಸಿಸಿಟಿವಿ ದೃಶ್ಯದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಮಾಳಿಯಾ-ಮಿಯಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಣಿಗಳ ಮಾಲೀಕರು ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಟ್ರಕ್ ಚಾಲಕನ ವಿರುದ್ಧ ಮುಂದಿನ ಕ್ರಮಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜನರು ಹಾಗೂ ಪ್ರಾಣಿಗಳು ಸಂಚಾರ ದಟ್ಟಣೆಯಿರುವ ಹೆದ್ದಾರಿಗಳನ್ನು ದಾಟುವ ಸಂದರ್ಭದಲ್ಲಿ ಎದುರಿಸುತ್ತಿರುವ ಅಪಾಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.