ನವದೆಹಲಿ: 'ಕಾಕ್ರೋಚ್ ಜನತಾ ಪಾರ್ಟಿ'ಯ (CJP) ಕಾರ್ಯಕರ್ತ ಅಭಿಜೀತ್ ದಿಪ್ಕೆ ಶುಕ್ರವಾರ ಪಕ್ಷದ ಪ್ರತಿಭಟನೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಅಧಿಕಾರದಲ್ಲಿರುವವರಿಂದ ಹೊಣೆಗಾರಿಕೆಯನ್ನು ಕೇಳುವುದು ಅರಾಜಕತೆಯಲ್ಲ, ಬದಲಾಗಿ ಅದೊಂದು ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕು ಎಂದು ಅವರು ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಿಗಳು ವಿಧಿಸಿರುವ ನಿರ್ಬಂಧಗಳನ್ನು ಅವರು ಟೀಕಿದ್ದು, ಇಂತಹ ಕ್ರಮಗಳು ಶಾಂತಿಯುತ ಪ್ರತಿಭಟನೆಗಳಿಗಿಂತ ಹೆಚ್ಚಾಗಿ ಅಡಚಣೆಯನ್ನು ಉಂಟುಮಾಡುತ್ತವೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಪ್ರತಿಭಟನೆಗಳಿಂದ ವ್ಯಾಪಾರ-ವಹಿವಾಟುಗಳಿಗೆ ಹಾನಿಯಾಗುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯುಂಟಾಗುತ್ತದೆ ಎಂಬ ವಾದವನ್ನು ತಳ್ಳಿಹಾಕಿದ್ದಾರೆ. ವ್ಯಾಪಾರಿಗಳು ಮತ್ತು ಸಾಮಾನ್ಯ ನಾಗರಿಕರಿಗೆ ತೊಂದರೆಯಾಗುತ್ತಿರುವುದು ಆಡಳಿತಾತ್ಮಕ ಕಠಿಣ ಕ್ರಮಗಳು, ಸಂಚಾರ ನಿರ್ಬಂಧಗಳು ಮತ್ತು ಹಠಾತ್ ತಡೆಗಳಿಂದಲೇ ಹೊರತು ಪ್ರತಿಭಟನೆಗಳಿಂದಲ್ಲ ಎಂದು ಅವರು ಹೇಳಿದ್ದಾರೆ.
ಶಾಂತಿಯುತ ಪ್ರತಿಭಟನೆಗಳಿಂದ ವ್ಯಾಪಾರಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಸರ್ಕಾರವು ಇಡೀ ನಗರವನ್ನೇ ಬಂದ್ ಮಾಡಲು ನಿರ್ಧರಿಸಿದಾಗ, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದಾಗ, ನಾಗರಿಕರ ಓಡಾಟವನ್ನು ನಿರ್ಬಂಧಿಸಿದಾಗ ಮತ್ತು ನಗರವನ್ನು ಯುದ್ಧಭೂಮಿಯನ್ನಾಗಿ ಪರಿವರ್ತಿಸಿದಾಗ ವ್ಯಾಪಾರಗಳಿಗೆ ತೊಂದರೆಯಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ತಮ್ಮ ಪಕ್ಷವು (CJP) ಸ್ಥಾಪನೆಯಾದಾಗಿನಿಂದಲೂ ಮಹಾತ್ಮ ಗಾಂಧಿಯವರ ಶಾಂತಿ ಮತ್ತು ಅಹಿಂಸೆಯ ತತ್ವಗಳಿಗೆ ಬದ್ಧವಾಗಿದೆ. ಮುಂಬೈ, ಪುಣೆ, ಜೈಪುರ, ಲಕ್ನೋ, ಬೆಂಗಳೂರು ಮತ್ತು ನಾಗ್ಪುರಗಳಲ್ಲಿ ತಮ್ಮ ಪಕ್ಷವು ಆಯೋಜಿಸಿದ್ದ ಪ್ರತಿಭಟನೆಗಳೆಲ್ಲವೂ ಶಾಂತಿಯುತವಾಗಿದ್ದವು ಎಂದು ಅವರು ಹೇಳಿದ್ದಾರೆ.
ಜೈಪುರದಲ್ಲಿ ನಡೆದ ಘಟನೆಯೊಂದನ್ನು ಅವರು ನೆನಪಿಸಿಕೊಂಡಿದ್ದು, ತಮ್ಮ ಮೇಲೆ ಹಲ್ಲೆ ನಡೆದಾಗಲೂ ತಾವು ಪ್ರತಿದಾಳಿ ನಡೆಸದಿರಲು ನಿರ್ಧರಿಸಿದೆ. ಹಿಂಸಾಚಾರಕ್ಕೆ ಹಿಂಸಾಚಾರದಿಂದಲೇ ಉತ್ತರಿಸುವುದು ಪಕ್ಷದ ತತ್ವಗಳಿಗೆ ವಿರುದ್ಧವಾಗಿರುತ್ತದೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವು ನಮಗೆ ನೀಡಿರುವ ಹಕ್ಕುಗಳನ್ನು ಚಲಾಯಿಸುವುದೇ ಹೊರತು, ದೈಹಿಕ ಬಲಪ್ರಯೋಗಕ್ಕೆ ಮುಂದಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸರ್ಕಾರವನ್ನು ಪ್ರಶ್ನಿಸುವುದನ್ನು ಮುಂದುವರಿಸಿದ್ದಕ್ಕಾಗಿ ಮತ್ತು ತಮಗೆ ಅನ್ಯಾಯವೆಂದು ತೋರುವ ವಿಷಯಗಳ ವಿರುದ್ಧ ಬೀದಿಗಿಳಿದು ಹೋರಾಡಿದ್ದಕ್ಕಾಗಿ, ತಮ್ಮ ಪಕ್ಷವನ್ನು 'ಅರಾಜಕತಾವಾದಿ' ಎಂದು ಬಿಂಬಿಸಿದ ಆಡಳಿತಾರೂಢರ ಕ್ರಮವನ್ನು 'ದೊಂಬರಾಟ' (ಕಪಟತನ) ಎಂದು ದೀಪ್ಕೆ ಟೀಕಿಸಿದ್ದಾರೆ. ಸರ್ಕಾರದಿಂದ ಉತ್ತರಗಳನ್ನು ಕೇಳುವುದು ಅರಾಜಕತೆಯಲ್ಲ, ಅನ್ಯಾಯದ ವಿರುದ್ಧ ಬೀದಿಗಿಳಿದು ಪ್ರತಿಭಟಿಸುವುದು ಅರಾಜಕತೆಯಲ್ಲ, ಮತ್ತು ಸಾರ್ವಜನಿಕ ಹುದ್ದೆಗಳಲ್ಲಿರುವವರನ್ನು ಪ್ರಶ್ನಿಸುವುದು ಖಂಡಿತವಾಗಿಯೂ ಅರಾಜಕತೆಯಲ್ಲ ಎಂದಿದ್ದಾರೆ.
ಪ್ರಸ್ತುತ ಅಧಿಕಾರದಲ್ಲಿರುವ ಪಕ್ಷವು, ವಿರೋಧ ಪಕ್ಷದಲ್ಲಿದ್ದಾಗ ದಶಕಗಳ ಕಾಲ ಪ್ರತಿಭಟನೆಗಳನ್ನು ಆಯೋಜಿಸುತ್ತಾ ಮತ್ತು ಆಗಿನ ಸರ್ಕಾರಗಳನ್ನು ಪ್ರಶ್ನಿಸುತ್ತಾ ಬಂದಿತ್ತು. ಅಂದು ಆ ಪ್ರತಿಭಟನೆಗಳ ಮೇಲೆ ಇಂದಿನಂತಹ ನಿರ್ಬಂಧಗಳನ್ನು ಹೇರಿ, ಪೊಲೀಸರ ಮೂಲಕ ಕ್ರಮ ಕೈಗೊಂಡಿದ್ದರೆ, ಬಹುಶಃ ಇಂದಿನ ಅನೇಕ ರಾಜಕೀಯ ನಾಯಕರು ತಾವು ಈಗಿರುವ ಸ್ಥಾನಗಳನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ಪ್ರತಿಭಟನೆಗಳನ್ನು ಪ್ರಜಾಸತ್ತಾತ್ಮಕ ಹಕ್ಕು ಎಂದು ಕೊಂಡಾಡಿ, ಅಧಿಕಾರಕ್ಕೆ ಬಂದ ನಂತರ ಅದೇ ಪ್ರತಿಭಟನೆಗಳನ್ನು ಸಾರ್ವಜನಿಕ ಶಾಂತಿಗೆ ಬೆದರಿಕೆ ಎಂದು ಪರಿಗಣಿಸುವುದು ತೀವ್ರವಾದ ಕಪಟತನವಾಗಿದೆ ದೀಪ್ಕೆ ಟೀಕಾ ಪ್ರಹಾರ ನಡೆಸಿದ್ದಾರೆ.