ನವದೆಹಲಿ: 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ದೆಹಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದ್ದು, ಬಿಡುಗಡೆಯಾಗುವ ಮೊದಲು ಶಾಂತಿ ಒಪ್ಪಂದ ಪತ್ರಕ್ಕೆ (peace bond) ಸಹಿ ಹಾಕುವಂತೆ ಸೂಚಿಸಿದೆ.
ಬಾಂಡ್ ಗೆ ಸಹಿ ಹಾಕಿಸಿದ ಮೇಲೆ ಅಭಿಜಿತ್ ದೀಪ್ಕೆ ಅವರನ್ನು ಬಿಡುಗಡೆ ಮಾಡಲಾಗಿದೆ.
ಅಕ್ಟೋಬರ್ 10 ರಂದು ತಾವು ನೀಡಿದ್ದ ಶಾಂತಿ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧಿತರಾಗಿದ್ದ ದೀಪ್ಕೆ ಅವರನ್ನು, ಶನಿವಾರ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿರುವ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಮುಂದೆ ಹಾಜರುಪಡಿಸಲಾಗಿತ್ತು ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.
ದೆಹಲಿಯ ಜಂಡೇವಾಲನ್ ಪ್ರದೇಶದಲ್ಲಿರುವ ತಮ್ಮ ಮನೆಯಿಂದ ಹೊರಬಂದ ಕೂಡಲೇ, ಕನ್ನಾಟ್ ಪ್ಲೇಸ್ನಲ್ಲಿ CJP ಆಯೋಜಿಸಿದ್ದ "ಲೆಹರಾ ದೋ ತಿರಂಗಾ" ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಶುಕ್ರವಾರ ಅವರನ್ನು ವಶಕ್ಕೆ ಪಡೆಯಲಾಯಿತು. ಶನಿವಾರ ಬೆಳಿಗ್ಗೆ ಅವರನ್ನು ಬಂಧಿಸಲಾಯಿತು.
ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿದ್ದ ರ್ಯಾಲಿಯ ಹಿನ್ನೆಲೆಯಲ್ಲಿ, ಶುಕ್ರವಾರ ದೀಪ್ಕೆ ಮತ್ತು 'ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್' (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿತ್ತು.
"ಶಾಂತಿ ಒಪ್ಪಂದದಲ್ಲಿ ನೀಡಿದ ಭರವಸೆಯ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ನಾವು ಲಿಖಿತ ಆದೇಶಕ್ಕಾಗಿ ಕಾಯುತ್ತಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ (PTI) ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಶುಕ್ರವಾರ ನವದೆಹಲಿಯಲ್ಲಿರುವ ಅವರ ನಿವಾಸದಿಂದ ದೀಪ್ಕೆ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದರು. ಇದಕ್ಕಾಗಿ 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ'ಯ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಜಾರಿಗೊಳಿಸಲಾಗಿತ್ತು. ತಮ್ಮನ್ನು ವಕೀಲರನ್ನು ಸಂಪರ್ಕಿಸಲು ಅವಕಾಶ ನೀಡದೆ, ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು CJP ಪ್ರತಿನಿಧಿಗಳು ಆರೋಪಿಸಿದ್ದಾರೆ.
ಶುಕ್ರವಾರ ನಡೆದ ಪ್ರತಿಭಟನೆಗಳ ವೇಳೆ ಕನ್ನಾಟ್ ಪ್ಲೇಸ್ ಮತ್ತು ನವದೆಹಲಿಯ ಇತರ ಭಾಗಗಳಲ್ಲಿ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಹಲವು ಎಫ್ಐಆರ್ಗಳನ್ನು (FIR) ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಜನರು ಗುಂಪುಗೂಡದಂತೆ ಪದೇ ಪದೇ ಘೋಷಣೆಗಳನ್ನು ಮಾಡಿದರೂ, ಕನ್ನಾಟ್ ಪ್ಲೇಸ್ ಸುತ್ತಲೂ ಗುಂಪು ಸೇರಿತ್ತು. 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ'ಯ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಉಲ್ಲಂಘನೆಗಾಗಿ ಎಫ್ಐಆರ್ಗಳನ್ನು ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಪದೇ ಪದೇ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.