ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾದ ‘ಮತಗಳ್ಳತನ’ದ ಸಂಪೂರ್ಣ ಯೋಜನೆಯನ್ನು ಮೋದಿ ರೂಪಿಸುತ್ತಾರೆ, ಗೃಹ ಸಚಿವ ಅಮಿತ್ ಶಾ ಅದನ್ನು ಕಾರ್ಯಗತಗೊಳಿಸುತ್ತಾರೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಜಾರಿಗೊಳಿಸುತ್ತಾರೆ ಎಂದು ಆರೋಪಿಸಿದ್ದಾರೆ.
ದಕ್ಷಿಣ ಗೋವಾದ ಮಾರ್ಗೋವ್ನಲ್ಲಿ ಕಾಂಗ್ರೆಸ್ನ ‘ಗೋಯ್ ರಾಖೋನ್ ಯಾತ್ರೆ’ಯ ಸಮಾರೋಪದ ದಿನದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಅಕ್ರಮಗಳ ಕುರಿತು ಕಾಂಗ್ರೆಸ್ ಮಾಡಿರುವ ಆರೋಪಗಳಿಂದ ಮೋದಿ, ಶಾ ಮತ್ತು ಜ್ಞಾನೇಶ್ ಕುಮಾರ್ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ದೂರಿದರು.
ಈಗ ಯಾವುದೇ ಗೊಂದಲವಿಲ್ಲ. ಜ್ಞಾನೇಶ್ ಕುಮಾರ್ ಮತಗಳ್ಳತನವನ್ನು ಜಾರಿಗೊಳಿಸುತ್ತಾರೆ, ಅಮಿತ್ ಶಾ ಅದನ್ನು ಕಾರ್ಯಗತಗೊಳಿಸುತ್ತಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ತೆರೆಮರೆಯಲ್ಲಿ ಸಂಪೂರ್ಣ ಯೋಜನೆ ರೂಪಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಮತಗಳ್ಳತನದ ಆರೋಪಗಳಿಗೆ ಸಂಬಂಧಿಸಿದಂತೆ ಈ ಮೂವರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಮಧ್ಯಪ್ರದೇಶ, ಹರಿಯಾಣ, ಕರ್ನಾಟಕ, ಛತ್ತೀಸ್ಗಢ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಚುನಾವಣಾ ಅಕ್ರಮಗಳು ನಡೆದಿರುವುದಕ್ಕೆ ಕಾಂಗ್ರೆಸ್ ಬಳಿ ಪುರಾವೆಗಳಿವೆ ಎಂದೂ ಅವರು ಪ್ರತಿಪಾದಿಸಿದರು.
ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಾವು ಮಾಡಿರುವುದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ಈ ಹಿಂದೆ ದೆಹಲಿಯಲ್ಲಿ ಪ್ರತಿಭಟನೆಗಳನ್ನು ಮುನ್ನಡೆಸಿದ್ದರು. ವಿರೋಧ ಪಕ್ಷಗಳ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ, ಆಡಳಿತ ಪಕ್ಷದ ಪರವಾಗಿ ಮತಗಳನ್ನು ಸೇರಿಸಲಾಗಿದೆ ಹಾಗೂ ಮತದಾರರನ್ನು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸ್ಥಳಾಂತರಿಸಲಾಗಿದೆ ಅಥವಾ ಬೇರೆ ರಾಜ್ಯಗಳಿಂದ ಕರೆತರಲಾಗಿದೆ ಎಂದು ಅವರು ಆರೋಪಿಸಿದ್ದರು.
ತಮ್ಮ ವಿರುದ್ಧ 45ಕ್ಕೂ ಹೆಚ್ಚು ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಸಂಬಂಧ ಹೊಂದಿರುವವರೂ ಹೂಡಿರುವ ಪ್ರಕರಣಗಳಿವೆ, ಆದರೆ, ತಾವು ಮಾಡಿರುವ ಮತಗಳ್ಳತನದ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಅವರು ಪ್ರತಿಪಾದಿಸಿದರು. ಈ ವಿಷಯ ಕಾನೂನು ಹೋರಾಟಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಅದನ್ನು ನ್ಯಾಯಾಲಯದಲ್ಲಿ ಎದುರಿಸಲು ಹಿಂಜರಿಯುತ್ತಿದೆ ಎಂದು ಅಭಿಪ್ರಾಯಪಟ್ಟರು.
2027ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪೂರ್ಣ ಬಹುಮತ ನೀಡುವಂತೆ ಮತದಾರರನ್ನು ಒತ್ತಾಯಿಸಿದ ರಾಹುಲ್ ಗಾಂಧಿ, ರಾಜ್ಯದಾದ್ಯಂತ ಜನರೊಂದಿಗೆ ಸಂಪರ್ಕದಲ್ಲಿರುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ನೀವು ಗೋವಾದ ಬಗ್ಗೆ ಗಮನ ಹರಿಸಿ. ದೆಹಲಿಯಲ್ಲಿ ನಾವು ಶೀಘ್ರದಲ್ಲೇ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಎದುರಿಸುತ್ತೇವೆ. ಅದರ ಬಗ್ಗೆ ನೀವು ಚಿಂತಿಸಬೇಕಿಲ್ಲ. ಕೆಲಸ ನಡೆಯುತ್ತಿದೆ; ಅವರ ಅವಧಿ ಮುಗಿಯುವ ದಿನ ಸಮೀಪಿಸುತ್ತಿದೆ ಎಂದು ಹೇಳಿದರು.
ರಾಜಕೀಯ ಬೆಂಬಲ ಮತ್ತು ಪ್ರಚಾರದ ಪ್ರತಿಯಾಗಿ ಮೂಲಸೌಕರ್ಯ ಯೋಜನೆಗಳು, ಭೂಮಿ ಹಾಗೂ ಇತರ ಆರ್ಥಿಕ ಅವಕಾಶಗಳನ್ನು ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರಿಗೆ ನೀಡುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅವರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದೂ ರಾಹುಲ್ ಗಾಂಧಿ ಆರೋಪಿಸಿದರು.
ಗೋವಾ ಸ್ವರ್ಗದಂತಿರುವ ಪ್ರದೇಶ. ದೇಶದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದಾಗಿರುವ ಗೋವಾ ತನ್ನದೇ ಆದ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ ಎಂದು ಹೇಳಿದ ಅವರು, ರಾಜ್ಯದ ಭೂಮಿಯನ್ನು ಕೋಟ್ಯಧಿಪತಿಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ದೂರಿದರು.
ದೇಶದಲ್ಲೇ ಗೋವಾದಲ್ಲಿ ನಿರುದ್ಯೋಗ ಪ್ರಮಾಣ ಅತ್ಯಧಿಕವಾಗಿದೆ ಎಂದು ಪ್ರತಿಪಾದಿಸಿದ ಕಾಂಗ್ರೆಸ್ ನಾಯಕ, ಉದ್ಯೋಗಾವಕಾಶಗಳಿಗಾಗಿ ಯುವಜನರು ವಿದೇಶಗಳಿಗೆ ತೆರಳುವಂತಾಗಿದೆ ಎಂದರು. ಬಿಜೆಪಿ ಸರ್ಕಾರ ರಾಜ್ಯದ ಉದ್ಯೋಗ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ, ಸರ್ಕಾರದ ಆಡಳಿತವನ್ನು ‘ಭ್ರಷ್ಟಾಚಾರದ ವಿಶೇಷ ಗೋವಾ ಮಾದರಿ’ ಎಂದು ಬಣ್ಣಿಸಿದರು. ಪ್ರಧಾನಿ ಮೋದಿ ಅವರೊಂದಿಗೆ ಗುರುತಿಸಿಕೊಂಡಿರುವ ಗುಜರಾತ್ ಮಾದರಿಯನ್ನೂ ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಶಿಕ್ಷಣದ ವಿಚಾರವಾಗಿ ಮಾತನಾಡಿದ ರಾಹುಲ್ ಗಾಂಧಿ, ದೆಹಲಿಯಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡಲಾಗಿದೆ ಎನ್ನಲಾದ ಘಟನೆಗಳನ್ನು ಟೀಕಿಸಿದರು. ವಿಶ್ವವಿದ್ಯಾಲಯಗಳ ನೇಮಕಾತಿಗಳ ಮೇಲೆ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಭಾವ ಬೀರುತ್ತಿವೆ ಎಂದು ಆರೋಪಿಸಿದರು. ಚುನಾವಣಾ ಅಕ್ರಮಗಳು, ನಿರುದ್ಯೋಗ, ಶಿಕ್ಷಣದ ವೆಚ್ಚ ಮತ್ತು ಬೆಲೆ ಏರಿಕೆ ಕುರಿತು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ ಅವರು, ಆಗಾಗ್ಗೆ ಉಲ್ಲೇಖಿಸಲಾಗುವ ಮೋದಿಯವರ ‘56 ಇಂಚಿನ ಎದೆ’ ಎಲ್ಲಿದೆ ಎಂದು ಪ್ರಶ್ನಿಸಿದರು. ರಾಜಕೀಯ ಎದುರಾಳಿಗಳ ಮುಂದೆ ನಿಲ್ಲಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.