ನವದೆಹಲಿ: ದೆಹಲಿಯ ಪ್ರಧಾನಿ ನಿವಾಸದ ಬಳಿ ಇರುವ 125 ವರ್ಷ ಹಳೆಯದಾದ ಐತಿಹಾಸಿಕ ರೇಸ್ ಕೋರ್ಸ್ ಮಸೀದಿಯ ಕೆಡವಲು ದಿನಗಣನೆ ಆರಂಭವಾಗಿದೆ. ಆರು ದಿನಗಳಲ್ಲಿ ಆವರಣವನ್ನು ಖಾಲಿ ಮಾಡುವಂತೆ ಎಲ್ & ಡಿಒ ಆದೇಶಿಸಿದೆ ಎಂದು ಮಸೀದಿಗೆ ಸಂಬಂಧಿಸಿದವರು ಆರೋಪಿಸಿದ್ದಾರೆ. ಅಲ್ಲದೆ ಮಸೀದಿಯ ವಿದ್ಯುತ್ ಮತ್ತು ನೀರು ಸರಬರಾಜು ಕಡಿತಗೊಂಡಿದೆ. ಇದಕ್ಕೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿಯಿಂದ ಕಾಶ್ಮೀರಿ ನಾಯಕ ಮಿರ್ವೈಜ್ ಉಮರ್ ಫಾರೂಕ್ ವರೆಗೆ ಎಲ್ಲರೂ ಕಳವಳ ವ್ಯಕ್ತಪಡಿಸಿದ್ದು ಸರ್ಕಾರದ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.
ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ಮತ್ತು ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಲಾದ ಮಸೀದಿಯನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಇತರ ಧಾರ್ಮಿಕ ಸ್ಥಳಗಳ ಭದ್ರತೆಯನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು ಎಂದು ಮಿರ್ವೈಜ್ ಪ್ರಶ್ನಿಸಿದ್ದಾರೆ. ವಾಸ್ತವವಾಗಿ, ರೇಸ್ ಕೋರ್ಸ್ ಮಸೀದಿ 1977ರಿಂದ ಅಧಿಸೂಚಿತ ವಕ್ಫ್ ಆಸ್ತಿಯಾಗಿದೆ. ಇದನ್ನು ಪರಂಪರೆಯ ತಾಣವಾಗಿಯೂ ಪಟ್ಟಿ ಮಾಡಲಾಗಿದೆ. ಇಷ್ಟೆಲ್ಲಾ ಇದ್ದರೂ, ಅದನ್ನು ತೆರವುಗೊಳಿಸಲು ಆದೇಶ ಹೊರಡಿಸಲಾಗಿದೆ. ವಕ್ಫ್ ಅಧಿಕಾರಿಗಳ ಪಾತ್ರವನ್ನು ಮಿರ್ವೈಜ್ ಪ್ರಶ್ನಿಸಿದ್ದಾರೆ. ಅವರು ಅದನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಮಿರ್ವೈಜ್ ಉಮರ್ ಫಾರೂಕ್ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿ, "1977 ರಿಂದ ವಕ್ಫ್ ಆಸ್ತಿಯಾಗಿರುವ ಮತ್ತು ಪರಂಪರೆಯ ತಾಣವೂ ಆಗಿರುವ ದೆಹಲಿಯ ಐತಿಹಾಸಿಕ 'ರೇಸ್ ಕೋರ್ಸ್ ಮಸೀದಿ'ಯನ್ನು ಆರು ದಿನಗಳಲ್ಲಿ ಖಾಲಿ ಮಾಡುವಂತೆ ನೋಟಿಸ್ ನೀಡಿರುವುದು ಅತ್ಯಂತ ಕಳವಳಕಾರಿಯಾಗಿದೆ. ಅಷ್ಟೇ ಕಳವಳಕಾರಿ ಸಂಗತಿಯೆಂದರೆ ವಕ್ಫ್ ಅಧಿಕಾರಿಗಳು ಅದನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ವಕ್ಫ್ ತಿದ್ದುಪಡಿಗಳನ್ನು ಮತ್ತು ಸರ್ಕಾರಿ ಪ್ರತಿನಿಧಿಗಳ ಮೂಲಕ ಮುಸ್ಲಿಂ ಧಾರ್ಮಿಕ ಆಸ್ತಿಗಳ ಮೇಲೆ ಹೆಚ್ಚಿದ ಸರ್ಕಾರಿ ನಿಯಂತ್ರಣವನ್ನು ನಾವು ಬಲವಾಗಿ ವಿರೋಧಿಸಲು ಇದು ಮುಖ್ಯ ಕಾರಣವಾಗಿದೆ. ಕಾನೂನುಬದ್ಧವಾಗಿ ಮಾನ್ಯತೆ ಪಡೆದ ಮಸೀದಿಯನ್ನು ಸಹ ಉಳಿಸಲಾಗದಿದ್ದರೆ, ಇತರ ಸ್ಥಳಗಳಿಗೆ ಯಾವ ಸುರಕ್ಷತಾ ಕ್ರಮಗಳು ಉಳಿದಿವೆ? ಎಂದು ಪ್ರಶ್ನಿಸಿದ್ದಾರೆ.