ಅಮೆಜಾನ್ ಸಂಸ್ಥೆ 250 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಿಂಡಲ್ ಇ-ರೀಡರ್‌ಗಳು ಮತ್ತು ಎಕೋ ಸ್ಮಾರ್ಟ್ ಸ್ಪೀಕರ್‌ಗಳಂತಹ ಉತ್ಪನ್ನಗಳಿಗೆ ಜವಾಬ್ದಾರರಾಗಿರುವ ಕಂಪನಿಯ ಸಾಧನ (devices) ಘಟಕದಲ್ಲಿ ಉದ್ಯೋಗ ಕಡಿತ ಮಾಡಲಾಗಿದೆ. ಕಡಿತಗಳು ಪ್ರಾಥಮಿಕವಾಗಿ ಸಾಫ್ಟ್‌ವೇರ್ ಅಭಿವೃದ್ಧಿ ಪಾತ್ರಗಳ ಮೇಲೆ ಪರಿಣಾಮ ಬೀರುತ್ತವೆ.
ಅಮೆಜಾನ್‌ನ ಸಾಧನಗಳ (Devices) ತಂಡ ಜಾಗತಿಕವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಅದರ ಪ್ರಮುಖ ನಾಯಕತ್ವವು ಯುಎಸ್‌ನಲ್ಲಿದೆ. ಯಾವ ಪ್ರದೇಶದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ರಾಯಿಟರ್ಸ್‌ನ ವರದಿಯ ಪ್ರಕಾರ, ಅಮೆಜಾನ್ ಸಂಸ್ಥೆ, ಉದ್ಯೋಗ ಕಡಿತದ ಬಗ್ಗೆ ಮುಂಜಾನೆ ಇಮೇಲ್‌ಗಳು ಮತ್ತು Text ಸಂದೇಶಗಳ ಮೂಲಕ ಪ್ರಭಾವಿತ ಉದ್ಯೋಗಿಗಳಿಗೆ ಮಾಹಿತಿ ನೀಡಿದೆ. ವರದಿಯಲ್ಲಿ ಉಲ್ಲೇಖಿಸಿದ ಪ್ರಕಾರ ಒಂದು ಇಮೇಲ್ ಅಮೆಜಾನ್ ಉಪಾಧ್ಯಕ್ಷ ಚೆರಿ ರಾಬಿನ್ಸನ್ ಅವರಿಂದ ಬಂದಿದೆ. ಕಂಪನಿ "ನಮ್ಮ ರಚನೆಯ ಸಂಪೂರ್ಣ ವಿಮರ್ಶೆಯನ್ನು" ನಡೆಸಿದೆ ಎಂದು ರಾಬಿನ್ಸನ್ ಹೇಳಿದ್ದಾರೆ. ಇದರ ಪರಿಣಾಮವಾಗಿ ಉದ್ಯೋಗ ಕಡಿತದ ಅಗತ್ಯ ಉಂಟಾಗಿದೆ. ವಜಾಗೊಳಿಸುವ ವಿಷಯದಲ್ಲಿ ಬೆಳಗಿನ ಇಮೇಲ್‌ಗಳು ಅಸಾಮಾನ್ಯವೇನಲ್ಲ. ಈ ಹಿಂದೆ, ಮೆಟಾ ಮತ್ತು ಒರಾಕಲ್‌ನಂತಹ ಕಂಪನಿಗಳು ಸಹ ಇಂತಹ ಇಮೇಲ್‌ಗಳ ಮೂಲಕ ಪ್ರಭಾವಿತ ಉದ್ಯೋಗಿಗಳಿಗೆ ಉದ್ಯೋಗ ಕಡಿತದ ಬಗ್ಗೆ ತಿಳಿಸಿರುವ ಉದಾಹರಣೆಗಳಿವೆ.
ಅಮೆಜಾನ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ವಜಾಗೊಳಿಸುವಿಕೆಯನ್ನು ದೃಢಪಡಿಸಿದೆ. "ಕಡಿಮೆ ಸಂಖ್ಯೆಯ ಪಾತ್ರಗಳನ್ನು ತೆಗೆದುಹಾಕಲು ನಾವು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ" ಎಂದು ವಕ್ತಾರರು ತಿಳಿಸಿದ್ದಾರೆ. ಈ ನಿರ್ಧಾರದಿಂದ ಎಷ್ಟು ಪಾತ್ರಗಳ (roles) ಮೇಲೆ ಪರಿಣಾಮ ಬೀರಿವೆ ಎಂದು ಕಂಪನಿಯು ನಿರ್ದಿಷ್ಟಪಡಿಸದಿದ್ದರೂ, ವರದಿಯಲ್ಲಿ 250 ಕಾರ್ಮಿಕರನ್ನು ವಜಾಗೊಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಅಮೆಜಾನ್ ಕಾರ್ಮಿಕರನ್ನು ಏಕೆ ವಜಾಗೊಳಿಸುತ್ತಿದೆ?
ವಕ್ತಾರರ ಪ್ರಕಾರ, ಉದ್ಯೋಗ ಕಡಿತ ಅಮೆಜಾನ್ "ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತು ನಮ್ಮ ಉತ್ಪನ್ನ ಮಾರ್ಗಸೂಚಿಯೊಂದಿಗೆ ಉತ್ತಮವಾಗಿ ಹೊಂದಿಕೊಳ್ಳಲು" ಸಹಾಯ ಮಾಡುತ್ತದೆ. ಈ ನಿರ್ಧಾರಕ್ಕೆ ಒಂದು ದಿನ ಮೊದಲು, ಅಮೆಜಾನ್ ತನ್ನ ಎಂಜಿನಿಯರಿಂಗ್ ನಾಯಕತ್ವದಿಂದ AI ಯುಗದಲ್ಲಿ ಡೆವಲಪರ್‌ಗಳ ಪಾತ್ರದ ಕುರಿತು ಸೆಪ್ಟೆಂಬರ್‌ನಲ್ಲಿ ಒಂದು ಜ್ಞಾಪಕ ಪತ್ರವನ್ನು ಪ್ರಕಟಿಸಿತ್ತು. "ನಾವೆಲ್ಲರೂ ಈ ಬದಲಾವಣೆಯನ್ನು ಅಳವಡಿಸಿಕೊಳ್ಳಬೇಕು ಮತ್ತು ಕಲಿಯಲು ಸಮಯ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ನಾವು ಹಿಂದೆ ಉಳಿಯುವ ಅಪಾಯವಿದೆ" ಎಂದು ಮೆಮೋದಲ್ಲಿ ಹೇಳಲಾಗಿದ್ದು, AI ಸಾಫ್ಟ್‌ವೇರ್ ಎಂಜಿನಿಯರಿಂಗ್ ಅಭ್ಯಾಸಗಳಿಗೆ ಕೇಂದ್ರವಾಗಿರುತ್ತದೆ ಎಂದು ಸೇರಿಸಿತ್ತು.
ಮರುವಿನ್ಯಾಸಗೊಳಿಸಲಾದ ಎಕೋ ಶೋ 16 ಸ್ಮಾರ್ಟ್ ಡಿಸ್ಪ್ಲೇ, ಅಲೆಕ್ಸಾ ಫೋಟೋ ಫ್ರೇಮ್ ಮತ್ತು ಎಕೋ ಟೈಮ್ ಬೆಡ್‌ಸೈಡ್ ಗಡಿಯಾರ ಸೇರಿದಂತೆ ಐದು ಹೊಸ ಅಲೆಕ್ಸಾ-ಚಾಲಿತ ಸಾಧನಗಳನ್ನು ಅಮೆಜಾನ್ ಘೋಷಿಸಿದ ದಿನದಂದು ಉದ್ಯೋಗ ಕಡಿತಗಳ ಘೋಷಣೆ ಬಂದಿವೆ. ಈ ಸಾಧನಗಳನ್ನು ಕಂಪನಿಯ ಸಾಧನಗಳ ಘಟಕ ಅಭಿವೃದ್ಧಿಪಡಿಸಿದೆ.
ಇತ್ತೀಚಿನ ಸುತ್ತಿನ ವಜಾಗೊಳಿಸುವಿಕೆಗಳು ಅಮೆಜಾನ್ ತನ್ನ ಪ್ರಮುಖ ಚಿಲ್ಲರೆ ವಿಭಾಗದಲ್ಲಿ ಸುಮಾರು 1,000 ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರವನ್ನು ಅನುಸರಿಸುತ್ತದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ 14,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ನಂತರ, ಜನವರಿಯಲ್ಲಿ ಕಂಪನಿಯು ಮತ್ತೆ 16,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿತ್ತು. ಅದೇ ಸಮಯದಲ್ಲಿ, ಕಂಪನಿಯು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುತ್ತಿದೆ. ಅಮೆಜಾನ್ ಸಂಸ್ಥೆಯು ಈ ವರ್ಷವೊಂದರಲ್ಲೇ AI ಕ್ಷೇತ್ರದಲ್ಲಿ 220 ಶತಕೋಟಿ ಡಾಲರ್‌ಗಳಷ್ಟು ಬೃಹತ್ ಮೊತ್ತವನ್ನು ಹೂಡಿಕೆ ಮಾಡುವ ನಿರೀಕ್ಷೆಯಿದೆ.
ಆದರೆ, ಉದ್ಯೋಗ ಕಡಿತ ಮಾಡುತ್ತಿರುವ ಏಕೈಕ ಕಂಪನಿ ಅಮೆಜಾನ್ ಮಾತ್ರವಲ್ಲ. 'Layoffs.fyi' ವರದಿಯ ಪ್ರಕಾರ, ಈ ವರ್ಷವೊಂದರಲ್ಲೇ 1,35,000ಕ್ಕೂ ಹೆಚ್ಚು ತಂತ್ರಜ್ಞಾನ ವಲಯದ ಉದ್ಯೋಗಗಳು ಕಡಿತಗೊಂಡಿವೆ. ಇತ್ತೀಚೆಗಷ್ಟೇ, ಡ್ರಾಪ್‌ಬಾಕ್ಸ್ (Dropbox) ತನ್ನ ಜಾಗತಿಕ ಉದ್ಯೋಗಿಗಳಲ್ಲಿ ಶೇಕಡಾ 9ರಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕುವುದಾಗಿ ಘೋಷಿಸಿದೆ. ಮತ್ತೊಂದೆಡೆ, ಮೈಕ್ರೋಸಾಫ್ಟ್ (Microsoft) ಸುಮಾರು 60,000 ಉದ್ಯೋಗಿಗಳಿಗೆ — ಅಂದರೆ ತನ್ನ ಒಟ್ಟು ಉದ್ಯೋಗಿಗಳಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬರಿಗೆ — ಸ್ವಯಂಪ್ರೇರಿತವಾಗಿ ಕೆಲಸದಿಂದ ನಿರ್ಗಮಿಸುವ (voluntary exit) ಆಯ್ಕೆಯನ್ನು ನೀಡಿದೆ.