ನವದೆಹಲಿ: ಕೇಂದ್ರ ಸಚಿವ ಕಿರಣ್ ರಿಜಿಜು ಅವರು ನಟ ನಸೀರುದ್ದೀನ್ ಶಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟಿಸುತ್ತಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಬೆಂಬಲಿಸಿ 76 ವರ್ಷದ ನಟ ವೀಡಿಯೊವೊಂದನ್ನು ಬಿಡುಗಡೆ ಮಾಡಿದ ನಂತರ, ರಿಜಿಜು ಅವರನ್ನು "ಅಪಾಯಕಾರಿ ನಗರ ನಕ್ಸಲ್" ಮತ್ತು "ವಿನಾಶಕಾರಿ ಚಿಂತಕ" ಎಂದು ಕರೆದಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಕಿರಣ್ ರಿಜಿಜು, ನಟನ ಸೈದ್ಧಾಂತಿಕ ಒಲವುಗಳನ್ನು ತಾನು ಇಷ್ಟು ವರ್ಷ ತಪ್ಪಾಗಿ ಅರ್ಥೈಸಿಕೊಂಡಿದ್ದೆ ಎಂದು ಹೇಳಿರುವ ರಿಜಿಜು, ಅವರ ನಡವಳಿಕೆಯು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂದು ಬಣ್ಣಿಸಿದ್ದಾರೆ.
ನಾಸೀರುದ್ದೀನ್ ಶಾ ಒಬ್ಬ ಸಾಮಾನ್ಯ ನಟ ಎಂದು ಭಾವಿಸಿ ನಾನು ಅವರನ್ನು ಗೌರವಿಸುತ್ತಿದ್ದೆ ಮತ್ತು ಇಷ್ಟಪಡುತ್ತಿದ್ದೆ. ಆದರೆ ಅವರು ಒಬ್ಬ ಅಪಾಯಕಾರಿ ನಗರ ನಕ್ಸಲ್ ಮತ್ತು ವಿನಾಶಕಾರಿ ಚಿಂತಕ ಎಂದು ನನಗೆ ತಿಳಿದಿರಲಿಲ್ಲ. ಅವರ ನಿಜವಾದ ಸ್ವರೂಪ ನನಗೆ ಬಹಳ ತಡವಾಗಿ ಅರಿವಾಯಿತು. ಅವರು ಭಾರತದ ಪ್ರಜಾಪ್ರಭುತ್ವಕ್ಕೆ ಅತ್ಯಂತ ಹಾನಿಕಾರಕ ವ್ಯಕ್ತಿ," ಎಂದು ಪೋಸ್ಟ್ ಮಾಡಿದ್ದಾರೆ.
ಮಂಗಳವಾರ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವೊಂದಕ್ಕೆ ಪ್ರತಿಕ್ರಿಯೆಯಾಗಿ ರಿಜಿಜು ಈ ಹೇಳಿಕೆ ನೀಡಿದ್ದಾರೆ. ಆ ವೀಡಿಯೊದಲ್ಲಿ, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಸಂಘವನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ನಸೀರುದ್ದೀನ್ ಶಾ ಬೆಂಬಲ ವ್ಯಕ್ತಪಡಿಸಿದ್ದರು.
'ದಿಮಾಗಿ ನಕ್ಸಲ್' (Dimagi Naxal - ಬೌದ್ಧಿಕ ನಕ್ಸಲ್) ಎಂದು ಬರೆದ ಬ್ಯಾಡ್ಜ್ ಧರಿಸಿದ್ದ ಶಾ, ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸಿದರು. "ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ನಾನೊಬ್ಬ 'ದಿಮಾಗಿ ನಕ್ಸಲ್'. ನನ್ನಂತಹ ಜನರಿಗೆ ಈ 'ಕಾವಲುಗಾರರು' (watchmen) ಇನ್ಯಾವೆಲ್ಲಾ ಅಡ್ಡಹೆಸರುಗಳನ್ನು ಇಟ್ಟಿದ್ದಾರೋ ನನಗೆ ಗೊತ್ತಿಲ್ಲ - 'ರಾಷ್ಟ್ರವಿರೋಧಿಗಳು', 'ತುಕ್ಡೆ ತುಕ್ಡೆ ಗ್ಯಾಂಗ್' ಹೀಗೆ ಇನ್ನೂ ಏನೇನೋ ಕರೆದಿರಬಹುದು," ಎಂದು ಶಾ ಆ ವೀಡಿಯೊದಲ್ಲಿ ಹಿಂದಿಯಲ್ಲಿ ಹೇಳಿದ್ದಾರೆ.
'ದಿಮಾಗಿ ನಕ್ಸಲ್' ಎಂಬ ಪದವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವೊಂದರಲ್ಲಿ ಮೊದಲ ಬಾರಿಗೆ ಬಳಸಿದ್ದರು. ನಂತರ, ಉತ್ತಮ ಹಾದಿಗಳನ್ನು ಆರಿಸಿಕೊಳ್ಳಲು ಬೇಕಾದ ಶಿಕ್ಷಣವನ್ನು ಹೊಂದಿದ್ದರೂ, ಕಠಿಣ ಮಾವೋವಾದಿ ಬೆಂಬಲಿಗರಂತೆ ವರ್ತಿಸುವ ವಿರೋಧ ಪಕ್ಷದವರನ್ನು ಟೀಕಿಸಲು ಆಡಳಿತ ಪಕ್ಷದ ನಾಯಕರು ಈ ಪದವನ್ನು ಬಳಸತೊಡಗಿದರು.
ದೇಶಾದ್ಯಂತ ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿರ್ವಹಿಸಿದ ರೀತಿಯ ಬಗ್ಗೆ ಆಡಳಿತವನ್ನು ಪ್ರಶ್ನಿಸಿದ ನಾಸಿರುದ್ದೀನ್ ಶಾ ಯುವ ಭಾರತೀಯರು ಮತ್ತು ಸಾರ್ವಜನಿಕ ಸಂಸ್ಥೆಗಳ ವಿಷಯದಲ್ಲಿ ಕೇಂದ್ರ ಸರ್ಕಾರದ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ .ನಾನು ಈ ಸರ್ಕಾರವನ್ನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನಮ್ಮ ದೇಶದ ಯುವಜನರ ಧೈರ್ಯವನ್ನು ಮುರಿಯಲು, ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡಲು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ತಳ್ಳಲು ನೀವು ಇನ್ನೇನು ಮಾಡುತ್ತೀರಿ? ಇನ್ನು ಎಷ್ಟು ಮಾಡುತ್ತೀರಿ? ಎಲ್ಲಿಯವರೆಗೆ ಹೋಗುತ್ತೀರಿ?" ಎಂದು ಅವರು ಪ್ರಶ್ನಿಸಿದರು.
ಮೊದಲು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನಂತರ ಸತ್ಯಜಿತ್ ರೇ ಫಿಲ್ಮ್ ಇನ್‌ಸ್ಟಿಟ್ಯೂಟ್, ಮತ್ತು ಈಗ ಜಾಮಿಯಾ ಮಿಲಿಯಾ. ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.