ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಾಹನ ಸವಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಎಕ್ಸ್ಪ್ರೆಸ್ವೇಗಳಲ್ಲಿ ಇನ್ಮುಂದೆ 120 ಕಿ.ಮೀ ವೇಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ದಂಡ ವಿಧಿಸಿದಂತೆ ಆದೇಶಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಪ್ರಕಾರ, ರಸ್ತೆಗಳಲ್ಲಿ ನಿಗದಿ ಪಡಿಸಿರುವ ಗರಿಷ್ಠ ವೇಗಕ್ಕಿಂತ ಶೇ. 20ರಷ್ಟು ಹೆಚ್ಚು ವೇಗದಲ್ಲಿ ಚಲಾಯಿಸಿದರೂ ಚಲನ್ ಜಾರಿಮಾಡಬಾರದು. ಅದಕ್ಕಿಂತ ಹೆಚ್ಚಿನ ವೇಗ ಮೀರಿದರೆ ಚಲನ್ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದ ಸ್ವಲ್ಪ ವೇಗದಲ್ಲಿಯೂ ಚಲಿಸಿದರೂ ದಂಡ ಬೀಳುವ ಆತಂಕದಲ್ಲಿ ವಾಹನ ಸವಾರರು ಕೊಂಚ ಮಟ್ಟಿಗೆ ನಿರಾಳರಾಗಿದ್ದಾರೆ.
ಹೆದ್ದಾರಿಗಳಲ್ಲಿ ವೇಗದ ಕಾರಣಕ್ಕೆ ಹಲವರಿಗೆ ನೋಟಿಸ್ಗಳು ತಲುಪುತ್ತಿವೆ. 120 ಕಿ.ಮೀ. ವೇಗದವರೆಗೆ ಯಾವುದೇ ನೋಟಿಸ್ ಕಳುಹಿಸಬಾರದು ಎಂದು ನಾನು ಸೂಚಿಸಿದ್ದೇನೆ. ಅಷ್ಟೇ ಅಲ್ಲದೆ, 120 ಕಿ.ಮೀ.ಗಿಂತ ಶೇ. 20ರಷ್ಟು ವೇಗ ಹೆಚ್ಚಿದ್ದರೂ ಅಂಥವರಿಗೆ ರಿಯಾಯಿತಿ ನೀಡಿ ಬಿಡಬೇಕು. ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವವರಿಗೆ ಮಾತ್ರ ಚಲನ್ ವಿಧಿಸಬೇಕು ಎಂದು ಗಡ್ಕರಿ ಸ್ಪಷ್ಟಪಡಿಸಿದರು.
ದೇಶದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಹೆದ್ದಾರಿ ಜಾಲದಲ್ಲಿ ಸಂಚಾರ ನಿಯಮಗಳ ಜಾರಿಯನ್ನು ಚುರುಕುಗೊಳಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು (ATMS) ಅಳವಡಿಸಿಕೊಳ್ಳಲು ಕೈಗಾರಿಕಾ ವಲಯದ ಸಹಕಾರವನ್ನು ಸಚಿವರು ಕೋರಿದರು. ಈ ಅತ್ಯಾಧುನಿಕ ತಂತ್ರಜ್ಞಾನವು ಲೇನ್ ಶಿಸ್ತು ಉಲ್ಲಂಘಿಸುವವರನ್ನು ಸುಲಭವಾಗಿ ಪತ್ತೆಹಚ್ಚಲು ಮತ್ತು ಹೆದ್ದಾರಿ ಸುರಕ್ಷತೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂದರು.