ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಎಂ.ಕೆ. ಸ್ಟಾಲಿನ್ ಮತ್ತು ದಿವಂಗತ ನಾಯಕ ಎಂ. ಕರುಣಾನಿಧಿ ಅವರ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅಪಮಾನಕಾರಿ ಟೀಕೆ ಮಾಡಿದ್ದಾರೆ ಎಂದು ವಿಪಕ್ಷ ಡಿಎಂಕೆ ಆರೋಪಿಸಿದ್ದು, ಇದನ್ನು ಖಂಡಿಸಿ ಸೆಪ್ಟೆಂಬರ್ 12 ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
ವಿಧಾನಸಭೆಯಲ್ಲಿ ವಿಜಯ್ ಮಾಡಿದ ಭಾಷಣವು ಪಕ್ಷವನ್ನು, ಅದರ ದಿವಂಗತ ಹಿರಿಯ ನಾಯಕ ಹಾಗೂ ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರನ್ನು, ದಿವಂಗತ ಕೇಂದ್ರ ಸಚಿವ ಮುರಸೋಳಿ ಮಾರನ್ ಅವರನ್ನು ಮತ್ತು ಪಕ್ಷದ ಮುಖ್ಯಸ್ಥ ಸ್ಟಾಲಿನ್ ಅವರ ತ್ಯಾಗಗಳನ್ನು ಕೀಳಾಗಿ ಕಾಣುವಂತಿದ್ದು, ಇದು ತೀವ್ರ ಖಂಡನೀಯವಾಗಿದೆ ಎಂದು ಡಿಎಂಕೆ ಹೇಳಿದೆ.
ಕುಖ್ಯಾತ ತುರ್ತು ಪರಿಸ್ಥಿತಿಯ (1975-77) ಅವಧಿಯಲ್ಲಿ ಒಂದು ವರ್ಷದ ಕಾಲ ಜೈಲುವಾಸದ ವೇಳೆ ಸ್ಟಾಲಿನ್ ಅನುಭವಿಸಿದ "ಯಾತನೆ"ಯನ್ನು ಉಲ್ಲೇಖಿಸಿದ್ದು, ಅವರನ್ನು 'ಮೀಸಾ' (ಆಂತರಿಕ ಭದ್ರತಾ ನಿರ್ವಹಣಾ ಕಾಯ್ದೆ - MISA) ಅಡಿಯಲ್ಲಿ ಬಂಧಿಸಲಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ವಿಧಾನಸಭೆಯು ಎಂದಿಗೂ ಇಂತಹ "ಅಸಹ್ಯಕರ ಭಾಷಣ"ವನ್ನು ಕಂಡಿರಲಿಲ್ಲ ಮತ್ತು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸದನದ ಘನತೆ, ಸಂಪ್ರದಾಯ ಮತ್ತು ಇತಿಹಾಸವನ್ನೆಲ್ಲ ಗಾಳಿಗೆ ತೂರಲಾಗಿದೆ ಎಂದು ಪಕ್ಷ ಆರೋಪಿಸಿದೆ. ಆಡಳಿತ ವೈಫಲ್ಯಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ, ಮುಖ್ಯಮಂತ್ರಿ ವಿಜಯ್ ಅವರು ಕೀಳು ಮಟ್ಟದ ಮಾತುಗಳನ್ನಾಡುವ ಮೂಲಕ "ಯಾವುದೇ ಮೌಲ್ಯಗಳಿಲ್ಲದ" ವ್ಯಕ್ತಿಯಾಗಿ ವರ್ತಿಸಿದ್ದಾರೆ ಎಂದು ಡಿಎಂಕೆ ಟೀಕಿಸಿದೆ.
ವಿಜಯ್ ಭಾಷಣವನ್ನು ಖಂಡಿಸಿ, ಪಕ್ಷವು ತನ್ನ ಜಿಲ್ಲಾ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸೆಪ್ಟೆಂಬರ್ 12 ರಂದು ಬೃಹತ್ ರಾಜ್ಯವ್ಯಾಪಿ ಪ್ರತಿಭಟನೆಯನ್ನು ನಡೆಸಲಿದೆ. ಸೆಪ್ಟೆಂಬರ್ 7 ರಂದು ವಿಧಾನಸಭೆಯಲ್ಲಿ ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿಜಯ್, ಪಕ್ಷದ ಹಿಂದಿನ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಗಂಭೀರ ಹಾಗೂ ವ್ಯವಸ್ಥಿತ ಭ್ರಷ್ಟಾಚಾರದ ವಿಷಯವನ್ನು ಪ್ರಸ್ತಾಪಿಸಿ ಟೀಕಿಸಿದ್ದರು.
ದಶಕಗಳ ಹಿಂದೆ ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದ ವಿಜಯ್, ಸರ್ಕಾರಿಯಾ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡಿದ್ದರು. ಮಾರನ್ ಅವರ ಹೆಸರನ್ನೂ ಪ್ರಸ್ತಾಪಿಸಿದ್ದರು.
ಡಿಎಂಕೆಯ 2021-26ರ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಜಾರಿ ನಿರ್ದೇಶನಾಲಯವು (ED) ರಾಜ್ಯ ಸರ್ಕಾರಕ್ಕೆ ಹಂಚಿಕೊಂಡ ಅಧಿಕೃತ ದಾಖಲೆಗಳನ್ನು ಉಲ್ಲೇಖಿಸಿ, ಅಂದಿನ ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಅವರ ಉಪಮುಖ್ಯಮಂತ್ರಿ ಉದಯನಿಧಿ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸ್ಟಾಲಿನ್ ಅವರನ್ನು 'ಮೀಸಾ' (MISA) ಕಾಯ್ದೆಯಡಿ ಬಂಧಿಸಲಾಗಿತ್ತು ಎಂಬುದನ್ನು ಸೂಚಿಸುವ ಯಾವುದೇ ಅಧಿಕೃತ ದಾಖಲೆಗಳಿಲ್ಲ ಎಂದು ಕಾನೂನು ಸಚಿವ ಆರ್. ನಿರ್ಮಲ್ ಕುಮಾರ್ ಪ್ರತಿಪಾದಿಸಿದರು.
ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ತುರ್ತು ಪರಿಸ್ಥಿತಿಯನ್ನು ಘೋಷಿಸಿದ ನಂತರ ಪ್ರಕಟಿಸಲಾದ '20 ಅಂಶಗಳ ಕಾರ್ಯಕ್ರಮ' ಹಾಗೂ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತು ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಸ್ಟಾಲಿನ್ ಅವರನ್ನು ಬಂಧಿಸಲಾಗಿತ್ತು ಎಂದೂ ಸಚಿವರು ಹೇಳಿದ್ದರು.