ನವದೆಹಲಿ: ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯವೆಂದು ಹೇಳಲಾದ ವಿವಾಹವಾಗಿದ್ದರೂ, ಅಪ್ರಾಪ್ತ ಪತ್ನಿಯೊಂದಿಗೆ ದೈಹಿಕ ಸಂಬಂಧ ಹೊಂದಲು ವಿನಾಯಿತಿ ನೀಡುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಈ ವಿಷಯದಲ್ಲಿ ಕ್ರಿಮಿನಲ್ ಕಾನೂನು ಕ್ರಮದಿಂದ ರಕ್ಷಣೆ ಪಡೆಯಲು ಅದು ಅವಕಾಶ ನೀಡುವುದಿಲ್ಲ ಎಂದಿದೆ.
18 ವರ್ಷದೊಳಗಿನ ಬಾಲಕಿಗೆ ಸಂಬಂಧಿಸಿದ ಕಾನೂನು ಕ್ರಮವೊಂದಕ್ಕೆ, ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯತೆ ಪಡೆದ ವಿವಾಹ ಪ್ರಮಾಣಪತ್ರವನ್ನು ಹಾಜರುಪಡಿಸಿದ ಮಾತ್ರಕ್ಕೆ ಅದನ್ನು ಒಪ್ಪಿದರೆ, ಅದು POCSO ವ್ಯವಸ್ಥೆಯನ್ನು ಗಣನೀಯವಾಗಿ ದುರ್ಬಲಗೊಳಿಸುತ್ತದೆ ಎಂದು ಹೈಕೋರ್ಟ್ ಹೇಳಿದೆ.
'ಹಾಗಾದಲ್ಲಿ, ಶಾಸನಬದ್ಧ ರಕ್ಷಣೆಯು ಮಗುವಿನ ವಯಸ್ಸಿನ ಮೇಲೆ ಅವಲಂಬಿತವಾಗಿರುವುದಿಲ್ಲ; ಬದಲಾಗಿ, ಲೈಂಗಿಕ ಸಂಬಂಧ ಬೆಳಕಿಗೆ ಬಂದ ನಂತರ ವಿವಾಹವನ್ನು ಏರ್ಪಡಿಸಲಾಗಿತ್ತೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದು ಶಾಸನದ ಮೂಲ ಉದ್ದೇಶವನ್ನೇ ತಲೆಕೆಳಗಾಗಿಸುತ್ತದೆ' ಎಂದು ನ್ಯಾಯಮೂರ್ತಿ ಸಂಜೀವ್ ನರುಲಾ ತಮ್ಮ ಸೆಪ್ಟೆಂಬರ್ 23ರ ಆದೇಶದಲ್ಲಿ ತಿಳಿಸಿದ್ದಾರೆ.
ತನ್ನ ಅಪ್ರಾಪ್ತ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಸಂತ್ರಸ್ತೆಗೆ 16 ವರ್ಷ ಮೂರು ತಿಂಗಳು ಮತ್ತು ಪುರುಷನಿಗೆ 28 ವರ್ಷ ವಯಸ್ಸಿದ್ದಾಗ ಆ ಜೋಡಿ ವಿವಾಹವಾಯಿತು. ನಂತರ ಅವರು ಒಟ್ಟಿಗೆ ವಾಸಿಸತೊಡಗಿದರು ಮತ್ತು ಆ ಯುವತಿ ಗರ್ಭಿಣಿಯಾದಳು. ಗರ್ಭಾವಸ್ಥೆಯಲ್ಲಿದ್ದಾಗ ಆಕೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಆಕೆಯ ವಯಸ್ಸಿನ ವಿಷಯ ಬೆಳಕಿಗೆ ಬಂದಿತು. ದುರದೃಷ್ಟವಶಾತ್, ಜೂನ್ ತಿಂಗಳಲ್ಲಿ ಆಕೆ ಮೃತ ಶಿಶುವಿಗೆ ಜನ್ಮ ನೀಡಿದಳು.
ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ವಿಷಯವನ್ನು ತಿಳಿಸಿದಾಗ, ಆ ವ್ಯಕ್ತಿಯ ವಿರುದ್ಧ 'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ' (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು.
ಆ ವಿವಾಹ ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ನಡೆದಿದೆ ಮತ್ತು ತನ್ನ ಮೇಲೆ ಯಾವುದೇ ಬಲವಂತ ಅಥವಾ ಒತ್ತಡ ಹೇರಿಲ್ಲ ಎಂದು ಯುವತಿ ಪ್ರತಿಪಾದಿಸಿದಳು. ಆಕೆ ಈ ಹಿಂದೆ ಆ ವ್ಯಕ್ತಿಯ ಜಾಮೀನು ಅರ್ಜಿಯನ್ನು ಬೆಂಬಲಿಸಿದ್ದರು ಮತ್ತು ತಮ್ಮ ಗರ್ಭಾವಸ್ಥೆಯ ಅವಧಿಯಲ್ಲಿ ಆತನ ಉಪಸ್ಥಿತಿಯನ್ನು ಕೋರಿದ್ದರು.
ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಪ್ರೌಢಾವಸ್ಥೆಯನ್ನು ತಲುಪಿದ ಮುಸ್ಲಿಂ ಯುವತಿಯು ವಿವಾಹವಾಗಲು ಅರ್ಹಳಾಗಿರುತ್ತಾಳೆ ಮತ್ತು ವಿವಾಹವು ಕಾನೂನುಬದ್ಧವಾಗಿರುವುದರಿಂದ, ಅದರ ನಂತರದ ಲೈಂಗಿಕ ಸಂಬಂಧವು ಯಾವುದೇ ಕ್ರಿಮಿನಲ್ ಹೊಣೆಗಾರಿಕೆಗೆ ಕಾರಣವಾಗುವುದಿಲ್ಲ ಎಂದು ಆ ದಂಪತಿ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ಆದರೆ, ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ವಿವಾಹ ನಡೆದರೂ, ನಂತರದ ಲೈಂಗಿಕ ಸಂಬಂಧವು ಅಪರಾಧ ಸ್ವರೂಪ ಹೊಂದಿರುವುದಿಲ್ಲ ಎಂಬ ವಾದವನ್ನು ಒಪ್ಪಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
'ಸಂಬಂಧಪಟ್ಟವರು ತಾವು ವಿವಾಹಿತರೆಂದು ಹೇಳಿಕೊಳ್ಳುತ್ತಾರೆ ಮತ್ತು 2ನೇ ಅರ್ಜಿದಾರರು (ಯುವತಿ) 1ನೇ ಅರ್ಜಿದಾರರನ್ನು (ಯುವಕ) ಬೆಂಬಲಿಸುತ್ತಾರೆ ಎಂಬ ಕಾರಣಕ್ಕಾಗಿಯೇ ಎಫ್ಐಆರ್ ರದ್ದುಗೊಳಿಸುವುದು, ಪೋಕ್ಸೊ ಕಾಯ್ದೆಯಲ್ಲಿ ವಿವಾಹಕ್ಕೆ ಸಂಬಂಧಿಸಿದ ವಿನಾಯಿತಿಯನ್ನು ಪರಿಚಯಿಸಿದಂತಾಗುತ್ತದೆ; ಆದರೆ ಸಂಸತ್ತು ಉದ್ದೇಶಪೂರ್ವಕವಾಗಿಯೇ ಅಂತಹ ಯಾವುದೇ ವಿನಾಯಿತಿಯನ್ನು ಈ ವರ್ಗದ ಮಕ್ಕಳಿಗೆ ಕಲ್ಪಿಸಿಲ್ಲ' ಎಂದು ನ್ಯಾಯಾಲಯ ತಿಳಿಸಿದೆ.
ವಿವಾಹದಿಂದ ಮಗುವಿನ ವಯಸ್ಸು ಹೆಚ್ಚಾಗುವುದಿಲ್ಲ ಮತ್ತು ವಿವಾಹಕ್ಕೂ ಮೊದಲು 16 ವರ್ಷ ವಯಸ್ಸಾಗಿದ್ದ ಆಕೆಯು ವಿವಾಹದ ನಂತರವೂ ಅದೇ ವಯಸ್ಸಿನಲ್ಲಿಯೇ ಇರುತ್ತಾರೆ. ವಿವಾಹದ ಸಿವಿಲ್ ಮಾನ್ಯತೆ ಹಾಗೂ ಅಪ್ರಾಪ್ತೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಉಂಟಾಗುವ ಕ್ರಿಮಿನಲ್ ಪರಿಣಾಮಗಳ ನಡುವಿನ ವ್ಯತ್ಯಾಸವನ್ನು ನ್ಯಾಯಾಲಯವು ಎತ್ತಿ ತೋರಿಸಿತು.
'ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ವಿವಾಹವು ಮಾನ್ಯವೆಂದು ಪರಿಗಣಿಸಲ್ಪಟ್ಟರೂ, ಅದು ಪೋಕ್ಸೊ (POCSO) ಕಾಯಿದೆ ಅಥವಾ ಭಾರತೀಯ ನ್ಯಾಯ ಸಂಹಿತೆ (BNS) ಯಲ್ಲಿ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಅದು ಅಭಿಪ್ರಾಯಪಟ್ಟಿತು. ಇದಕ್ಕೆ ವಿರುದ್ಧವಾದ ಯಾವುದೇ ಅಭಿಪ್ರಾಯವು, ಸಂಸತ್ತು ಸ್ಪಷ್ಟವಾಗಿ ಹೊರಗಿಟ್ಟಿರುವಂತಹ ವಿನಾಯಿತಿಯೊಂದನ್ನು ನ್ಯಾಯಾಲಯದ ತೀರ್ಪಿನ ಮೂಲಕ ಸೃಷ್ಟಿಸಿದಂತಾಗುತ್ತದೆ' ಎಂದು ನ್ಯಾಯಮೂರ್ತಿ ನರುಲಾ ಹೇಳಿದರು.
ಆ ಯುವತಿಯ ಪರಿಸ್ಥಿತಿಯ ಬಗ್ಗೆ ತನಗೆ ಅರಿವಿದೆ ಎಂದು ಹೇಳಿದ ನ್ಯಾಯಾಲಯ, ಆಕೆ ಸ್ವಯಂಪ್ರೇರಣೆಯಿಂದಲೇ ಈ ವಿವಾಹ ಮಾಡಿಕೊಂಡಿರುವುದಾಗಿ, ತನ್ನ ಪತಿಯ ಪರವಾಗಿ ದೃಢವಾಗಿ ನಿಂತಿರುವುದಾಗಿ ಹಾಗೂ ಆತನಿಂದ ತನಗೆ ಯಾವುದೇ ಅನ್ಯಾಯವಾಗಿದೆ ಎಂದು ಭಾವಿಸುವುದಿಲ್ಲವೆಂದು ತಿಳಿಸಿರುವುದನ್ನು ಗಮನಿಸಿತು.
'ಅವರ ಹೇಳಿಕೆಯನ್ನು ಗಂಭೀರತೆ ಮತ್ತು ಘನತೆಯಿಂದ ಪರಿಗಣಿಸಬೇಕಾದ ಅಗತ್ಯವಿದೆ. ಆದರೆ, ಆ ಸಂಬಂಧವು ಸ್ವಯಂಪ್ರೇರಿತವಾಗಿತ್ತು ಎಂದು ಅವರು ಹೇಳಿದಾಗ ನ್ಯಾಯಾಲಯವು ಅದನ್ನು ನಂಬುತ್ತದೆಯೇ ಎಂಬುದು ಇಲ್ಲಿನ ಪ್ರಶ್ನೆಯಲ್ಲ; ಅದು ಸ್ವಯಂಪ್ರೇರಿತವಾಗಿತ್ತು ಎಂದೇ ನಾವು ಭಾವಿಸಿ ಮುಂದುವರಿಯಬಹುದು. ಪ್ರಮುಖ ಪ್ರಶ್ನೆಯೆಂದರೆ, ಅವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾಗ ನೀಡಿದ ಸಮ್ಮತಿ ಮತ್ತು ಲೈಂಗಿಕ ಸಂಬಂಧಕ್ಕೂ ಮುನ್ನ ನಡೆದಿದೆ ಎನ್ನಲಾದ 'ನಿಕಾಹ್' (ವಿವಾಹ), ಈ ಪ್ರಕರಣವನ್ನು POCSO ಮತ್ತು BNS ಕಾಯಿದೆಗಳ ವ್ಯಾಪ್ತಿಯಿಂದ ಹೊರಗಿಡುತ್ತವೆಯೇ ಎಂಬುದು. ವಾಸ್ತವದಲ್ಲಿ ಅವು ಹಾಗೆ ಮಾಡುವುದಿಲ್ಲ' ಎಂದು ಅದು ಹೇಳಿದೆ.