ಸರ್ಕಾರಿ ಶಿಕ್ಷಕ ವಿಜಯ್ ಕುಮಾರ್ ಶರ್ಮಾ Online Desk
ದೇಶ

ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್

ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ 59 ವರ್ಷದ ವಿಜಯ್ ಕುಮಾರ್ ಶರ್ಮಾ ಅವರು ಬರೋಬ್ಬರಿ 27 ವರ್ಷಗಳ ಸತತ ಹೋರಾಟದ ನಂತರ ಕೊನೆಗೂ ಸರ್ಕಾರಿ ಸಂಸ್ಕೃತ ಶಿಕ್ಷಕ ಹುದ್ದೆಯನ್ನು ಪಡೆಯುವ ಮೂಲಕ ಅನೇಕರಿಗೆ ಪ್ರೇರಣೆಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬಾಗ್‌ಪತ್ (ಉತ್ತರ ಪ್ರದೇಶ): ಮನಸ್ಸಿದ್ದರೆ ಮಾರ್ಗ ಎಂಬುದನ್ನು ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ವಿಜಯ್ ಕುಮಾರ್ ಶರ್ಮಾ ಎಂಬುವವರು ನಿಜ ಮಾಡಿ ತೋರಿಸಿದ್ದಾರೆ. ಕಳೆದ 27 ವರ್ಷಗಳ ಸತತ ಹೋರಾಟ ಮತ್ತು 26 ಬಾರಿ ಸೋಲುಗಳನ್ನು ಎದುರಿಸಿದ ನಂತರ, ಕೊನೆಗೂ ತಮ್ಮ 59ನೇ ವಯಸ್ಸಿನಲ್ಲಿ ಸರ್ಕಾರಿ ಸಂಸ್ಕೃತ ಶಿಕ್ಷಕರಾಗಿ ನೇಮಕಗೊಳ್ಳುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಅದರಂತೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ ಲಕ್ನೋದಲ್ಲಿ ನಡೆದ ಅಧಿಕೃತ ಕಾರ್ಯಕ್ರಮವೊಂದರಲ್ಲಿ ವಿಜಯ್ ಕುಮಾರ್ ಶರ್ಮಾಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

1999 ರಿಂದ ಆರಂಭವಾದ ನಿರಂತರ ಹೋರಾಟ

ವಿಜಯ್ ಕುಮಾರ್ ಅವರು 1999 ರಿಂದ ನಿರಂತರವಾಗಿ ಶಿಕ್ಷಕರ ನೇಮಕಾತಿ ಪರೀಕ್ಷೆಗಳನ್ನು ಬರೆಯುತ್ತಿದ್ದರು. ಇವರು ಆರು ಬಾರಿ ಟಿಜಿಟಿ (TGT) ಲಿಖಿತ ಪರೀಕ್ಷೆ ಮತ್ತು ನಾಲ್ಕು ಬಾರಿ ಪಿಜಿಟಿ (PGT) ಪರೀಕ್ಷೆಗಳನ್ನು ಪಾಸ್ ಮಾಡಿದ್ದರು. ಜೊತೆಗೆ, ಸುಮಾರು ಎಂಟು ಬಾರಿ ನೇಮಕಾತಿಯ ಅಂತಿಮ ಹಂತದ ಸಂದರ್ಶನಗಳಿಗೆ ಹಾಜರಾಗಿದ್ದರೂ, ಒಂದಲ್ಲಾ ಒಂದು ಕಾರಣದಿಂದ ಅಂತಿಮ ಮೆರಿಟ್ ಪಟ್ಟಿಯಲ್ಲಿ ಇವರ ಹೆಸರು ಕೈತಪ್ಪಿ ಹೋಗುತ್ತಿತ್ತು.

ಹಾಗಾದ್ರೆ, ಈ ಬಾರಿ ಯಶಸ್ಸು ಸಿಕ್ಕಿದ್ದು ಹೇಗೆ?

ಈ ಬಾರಿಯ ಸರ್ಕಾರಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಕೆಲವು ಪ್ರಮುಖ ಮಾರ್ಪಾಡುಗಳನ್ನು ಮಾಡಿತ್ತು. ಈ ಬಾರಿ ನೇಮಕಾತಿಯಿಂದ ಸಂದರ್ಶನದ ಹಂತವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿತ್ತು. ಅದರಂತೆ, ಲಿಖಿತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದ ವಿಜಯ್ ಕುಮಾರ್ ಅವರು ಯಾವುದೇ ಸಂದರ್ಶನದ ಅಡೆತಡೆಯಿಲ್ಲದೆ ನೇರವಾಗಿ ಶಾಮ್ಲಿ ಜಿಲ್ಲೆಯ ಸರ್ಕಾರಿ ಅನುದಾನಿತ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕರಾಗಿ ಆಯ್ಕೆಯಾದರು. ಈ ಬಗ್ಗೆ ಮಾತನಾಡಿದ ವಿಜಯ್ ಕುಮಾರ್ "ನಾವು ಮಾಡಿದ ತಪ್ಪುಗಳಿಂದ ಕಲಿಯುತ್ತಾ ಸಾಗಬೇಕು. ಸೋಲುಗಳು ನಮ್ಮ ಪ್ರಯತ್ನವನ್ನು ನಿಲ್ಲಿಸಲು ಕಾರಣವಾಗಬಾರದು, ಬದಲಿಗೆ ನಮ್ಮ ಸಿದ್ಧತೆಯನ್ನು ಮತ್ತಷ್ಟು ಉತ್ತಮಗೊಳಿಸುವ ಅವಕಾಶಗಳಾಗಬೇಕು. ಗುರಿ ಸಾಧಿಸಲು ವಯಸ್ಸು ಎಂದಿಗೂ ತಡೆಯಾಗುವುದಿಲ್ಲ" ಎಂದು ಖುಷಿ ಹಂಚಿಕೊಂಡರು.

ಮುಂದುವರೆದು, ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿದ್ದ ಈ 27 ವರ್ಷಗಳ ಅವಧಿಯಲ್ಲಿ ವಿಜಯ್ ಕುಮಾರ್ ಅವರು ಸುಮ್ಮನೆ ಕೂರಲಿಲ್ಲ. ಕುಟುಂಬದ ನಿರ್ವಹಣೆಗಾಗಿ ಕಳೆದ 26 ವರ್ಷಗಳಿಂದ ಸ್ಥಳೀಯ ಖಾಸಗಿ ಶಾಲೆಗಳಾದ ವಿವೇಕಾನಂದ ವಿದ್ಯಾಪೀಠ ಮತ್ತು ಡೂನ್ ಪಬ್ಲಿಕ್ ಶಾಲೆಯಲ್ಲಿ ಹಗಲಿಡೀ ಮಕ್ಕಳಿಗೆ ಹಿಂದಿ ಮತ್ತು ಸಂಸ್ಕೃತ ಪಾಠ ಮಾಡುತ್ತಿದ್ದರು. ಜೊತೆಗೆ ರಾತ್ರಿಯಿಡೀ ಕೂತು ಸರ್ಕಾರಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು.

ತಂದೆಯ ಹಾದಿಯಲ್ಲೇ ಮಗಳು!

ಹೆಮ್ಮೆಯ ವಿಷಯವೆಂದರೆ, ವಿಜಯ್ ಕುಮಾರ್ ಶರ್ಮಾ ಅವರ 28 ವರ್ಷದ ಮಗಳು ಮಮತಾ ಕೂಡ ಇದೇ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಪಾಸ್ ಮಾಡಿದ್ದು, ಪ್ರಸ್ತುತ ಆಕೆಯ ಹೆಸರು ವೇಟಿಂಗ್ ಲಿಸ್ಟ್‌ನಲ್ಲಿದೆ. ತಂದೆಯ ನಿರಂತರ ಪರಿಶ್ರಮವೇ ತನಗೆ ದೊಡ್ಡ ಪ್ರೇರಣೆ ಎಂದು ಮಗಳು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅದರಲ್ಲೂ, ಇವರ ತಂದೆ ಲಕ್ಷ್ಮಣ್ ಸಿಂಗ್ ಕೂಡ ಶಿಕ್ಷಕರಾಗಿದ್ದರು ಎಂಬದು ಗಮನರ್ಹ.

ಏತನ್ಮಧ್ಯೆ, ಶಿಕ್ಷಕರ ನಿವೃತ್ತಿ ವಯಸ್ಸು 62 ವರ್ಷ ಆಗಿರುವುದರಿಂದ, ವಿಜಯ್ ಕುಮಾರ್ ಅವರಿಗೆ ಇನ್ನು ಕೇವಲ 2 ವರ್ಷ 5 ತಿಂಗಳ ಕಾಲ ಸರ್ಕಾರಿ ಸೇವೆಯಲ್ಲಿರಲು ಅವಕಾಶ ಸಿಗಲಿದೆ. ಆದರೆ, ಅವಧಿಗಿಂತಲೂ ತಮ್ಮ ಇಡೀ ಜೀವನದ ಕನಸು ನನಸಾಗಿರುವುದೇ ಅವರಿಗೆ ಪರಮ ತೃಪ್ತಿ ತಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚಲಿಸುವ ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ನಿರ್ಭಯಾ ಪ್ರಕರಣ ಕಣ್ಣಮುಂದೆ ಬರುತ್ತಿದೆ: ಸ್ವಯಂಪ್ರೇರಿತವಾಗಿ ಕೇಸ್ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್..!

ರೂ. 2,000ಕ್ಕಿಂತ ಹೆಚ್ಚಿನ UPI ವಹಿವಾಟಿಗೆ ಶುಲ್ಕ: ತಡೆ ನೀಡಲು ಸುಪ್ರೀಂಕೋರ್ಟ್ ನಕಾರ, ಕೇಂದ್ರ ಸರ್ಕಾರಕ್ಕೆ ನೋಟಿಸ್..!

ಲಾಭದಲ್ಲಿ 11 ಹಾಲು ಒಕ್ಕೂಟಗಳು, ನಷ್ಟದಲ್ಲಿ ಚಿಕ್ಕಬಳ್ಳಾಪುರ ದಾಖಲೆ: ಸಚಿವ ಸಂಪುಟದಲ್ಲಿ ತೀರ್ಮಾನಿಸಿದ ನಂತರ ದರ ಏರಿಕೆ ನಿರ್ಧಾರ; ಸಿಎಂ

ಬರ ನೆರವು: ಸರ್ವಪಕ್ಷ ನಿಯೋಗದ ಜತೆ ದೆಹಲಿಗೆ ಬರದಿದ್ದರೆ BJP ಕಪಟ ನಾಟಕ ಸಾಬೀತು; ಸಿಎಂ ಡಿ ಕೆ ಶಿವಕುಮಾರ್

ಮಹಿಷಾ ದಸರಾ ಆಚರಣೆಗೆ ಸಂವಿಧಾನದಲ್ಲಿ ಅವಕಾಶವಿದೆ- ಸಂಸದ ಯದುವೀರ್ ಒಡೆಯರ್!