ಬೆಂಗಳೂರು: ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ಕೇವಲ ದೆಹಲಿಗೆ ಮಾತ್ರ ಸಮೀತವಲ್ಲ. ಅದು ರಾಜ್ಯದಲ್ಲೂ ರಾರಾಜಿಸಲಿದೆ.
ಪಕ್ಷದ ಯುವರಾಜ ರಾಹುಲ್ ಗಾಂಧಿ ಎಐಸಿಸಿ ಉಪಾಧ್ಯಕ್ಷರಾಗಿ ನೇಮಕಗೊಂಡ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ತಮ್ಮ ಕರುಳಕುಡಿಗಳು ಹಾಗೂ ಕುಟುಂಬ ಸದಸ್ಯರನ್ನು ರಾಜಕೀಯದ ರಂಗ ಪ್ರವೇಶಕ್ಕೆ ಅಣಿಗೊಳಿಸುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಎದುರಾಗುವ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆಗೆ ಈ ನಾಯಕರು ಮಕ್ಕಳು, ಸಂಬಂಧಿಕರು ಆಖಾಡ ಪ್ರವೇಶಿಸುವುದು ಖಚಿತ. ಅಲ್ಲಿಗೆ ಕಾಂಗ್ರೆಸ್ ಸಹ ಅಪ್ಪ-ಮಕ್ಕಳ ಪಕ್ಷವಾಗಿ ಹೊರ ಹೊಮ್ಮಲಿದೆ.
ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಉತ್ತರಾಖಂಡ್ ರಾಜ್ಯಪಾಲೆ ಮಾರ್ಗರೇಟ್ ಆಳ್ವ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ 25ಕ್ಕೂ ಹೆಚ್ಚು ಮುಖಂಡರು ತಮ್ಮ ಕರುಳಬಳ್ಳಿಗಳಿಗಾಗಿ ಕ್ಷೇತ್ರ ಹುಡುಕುವ ಪ್ರಯತ್ನ ಆರಂಭಿಸಿದ್ದಾರೆ.
ಕುತೂಹಲಕಾರಿ ಸಂಗತಿ ಎಂದರೆ ಈ ಕುಟುಂಬ ರಾಜಕಾರಣಕ್ಕೆ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಸಮಿತಿ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಪಕ್ಷಕ್ಕೆ ಆದ ಹೀನಾಯ ಸೋಲಿನ ಬಗ್ಗೆ ಅಧ್ಯಯನ ನಡೆಸಿದ ಈ ಸಮಿತಿ 'ನಾಯಕರು ತಮ್ಮ ಮಕ್ಕಳು ಹಾಗೂ ಸಂಬಂಧಿಗಳನ್ನು ರಾಜಕೀಯಕ್ಕೆ ಕರೆ ತಂದು ಚುನಾವಣೆಯಲ್ಲಿ ಟಿಕೆಟ್ ಕೊಡಿಸಿದ್ದೇ ಚುನಾವಣಾ ಸೋಲಿನ ಕಾರಣಗಳಲ್ಲಿ ಒಂದು' ಎಂದು ವರದಿ ನೀಡಿದೆ.
ಇದರ ಮಧ್ಯೆಯೇ ರಾಹುಲ್ ಗಾಂಧಿ ಉಪಾಧ್ಯಕ್ಷ ಹುದ್ದೆ ಅಲಂಕರಿಸಿದ್ದಾರೆ. ಇದು ರಾಜ್ಯದ ಮುಖಂಡರಿಗೆ 'ಜೇನುತುಪ್ಪ' ಸವಿದಷ್ಟು ಖುಷಿ ನೀಡಿದ್ದು, ಮಕ್ಕಳಿಗಾಗಿ ಭಾರಿ ಲಾಬಿ ನಡೆಸಲು ಸಿದ್ಧರಾಗಿದ್ದಾರೆ. 'ಕನ್ನಡಪ್ರಭ'ಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ತಮ್ಮ ಕುಟುಂಬಕ್ಕಾಗಿ ಲಾಬಿ ಮಾಡುತ್ತಿರುವ ನಾಯಕರ ವಿವರ ಹೀಗಿದೆ....
ಮಲ್ಲಿಕಾರ್ಜುನ ಖರ್ಗೆ
ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಪುತ್ರ ಪ್ರಿಯಾಂಕ್ ಖರ್ಗೆ ಹಾಗೂ ಅಳಿಯ ರಾಧಾ ಕೃಷ್ಣ ಅವರಿಗಾಗಿ ಲಾಬಿ. ಪುತ್ರ ಚಿತ್ತಾಪುರ, ಅಳಿಯ ಸಿ.ವಿ.ರಾಮನ್ ನಗರದಿಂದ ಸ್ಪರ್ಧಾಕಾಂಕ್ಷಿಗಳು.
ಸಿದ್ದರಾಮಯ್ಯ
ಪುತ್ರ ರಾಕೇಶ್ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಸಾಧ್ಯತೆ.
ಮಾರ್ಗರೇಟ್ ಆಳ್ಳ
ಪುತ್ರ ನಿವೇದಿತ್ ಆಳ್ವ. ಸದ್ಯಕ್ಕೆ ಕಾಂಗ್ರೆಸ್ ಕಾರ್ಯದರ್ಶಿ. ಖಾನಾಪುರ ಅಥವಾ ಬೆಂಗಳೂರಿನ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಸಲು ತಯಾರಿ.
ಕೆ.ರೆಹಮಾನ್‌ಖಾನ್
ಪ್ರಸ್ತುತ ಶಿಕ್ಷಣ ಸಂಸ್ಥೆಗಳ ವ್ಯವಹಾರ ನೋಡಿಕೊಳ್ಳುತ್ತಿರುವ ತಮ್ಮ ಎರಡನೇ ಪುತ್ರ ಮನ್ಸೂರ್ ಅಲಿಖಾನ್ ಅವರನ್ನು ಜಯನಗರ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಯತ್ನ.
ಕೆ.ಎಚ್.ಮುನಿಯಪ್ಪ
ಪುತ್ರಿ ರೂಪಾ ಶಶಿಧರ್ ಅವರನ್ನು ಕೆಜಿಎಫ್‌ನಿಂದ ಕಣಕ್ಕಿಳಿಸುವ ಮಹಾತ್ವಾಕಾಂಕ್ಷೆ.
ಜಾಫರ್ ಷರೀಫ್
ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿರುವ ಮೊಮ್ಮಗ ರೆಹಮಾನ್ ಅವರನ್ನು ರಾಜಕಾರಣಕ್ಕೆ ಕರೆ ತರುವ ಪ್ರಯತ್ನ.
ಎಸ್.ಎಂ. ಕೃಷ್ಣ
ಸೋದರನ ಪುತ್ರ ಗುರುಚರಣ್ ಮದ್ದೂರು ಕ್ಷೇತ್ರದ ಆಕಾಂಕ್ಷಿ.
ಬಿ.ಕೆ. ಹರಿಪ್ರಸಾದ್
ಸೋದರ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅವರಿಗೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿಸುವ ಪ್ರಯತ್ನ.
ಅದೇ ರೀತಿ ಸಂಸದ ಎಚ್. ವಿಶ್ವನಾಥ್, ಮಂಜುನಾಥ್ ಕುನ್ನೂರ್, ಎನ್. ಧರ್ಮಸಿಂಗ್, ಮಾಜಿ ಸಂಸದ ಐ.ಜಿ. ಸನ್ನದಿ, ವಿ.ಎಸ್. ಕೌಜಲಗಿ, ಶ್ಯಾಮನೂರು ಶಿವಶಂಕರಪ್ಪ, ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಮಾಜಿ ಸಂಸದ ಜಿ. ಮಾದೇಗೌಡ, ಮಾಜಿ ಸಚಿವ ಎ. ಕೃಷ್ಣಪ್ಪ, ಎಂ. ಕೃಷ್ಣಪ್ಪ ಅವರುಗಳ ಪುತ್ರರು ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ಪ್ರಯತ್ನ ಆರಂಭಿಸಿದ್ದಾರೆ. ಅದರೆ, ಕೆಲ ಮುಖಂಡರು ಕುಟುಂಬ ರಾಜಕಾರಣದ ವಿರೋಧಿ ನಿಲುವು ತಳೆದಿರುವುದರಿಂದ ಅವರ ಪುತ್ರರಿಗೆ ಸಂಕಷ್ಟ ತಂದೊಡ್ಡಿದೆ.
ಅದರ ಜತೆಗೆ ಮಾಜಿ ಮುಖ್ಯಮಂತ್ರಿಗಳ ಮಕ್ಕಳಾದ ಮಹಿಮಾ ಪಟೇಲ್, ದಿನೇಶ್ ಗುಂಡೂರಾವ್, ಮಮತಾ ನಿಚಾನಿ, ಕೈಲಾಶ್‌ನಾಥ್ ಪಾಟೀಲ್, ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಪುತ್ರ ಎಂ.ಪಿ. ರವೀಂದ್ರ, ಮಾಜಿ ಸಚಿವ ಕೆ.ಎಚ್. ರಂಗನಾಥ್ ಅವರ ಪುತ್ರ ಭಾಸ್ಕರ್ ಅವರೂ ಚುನಾವಣೆ ಮೂಲಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಉಮೇದಿನಲ್ಲಿದ್ದಾರೆ.
-ರಾಘವೇಂದ್ರ ಭಟ್