ದಾವಣಗೆರೆ/ಚಿಕ್ಕಮಗಳೂರು/ಭರಮಸಾಗರ: ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್, ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್. ಸುರೇಶ್ ಹಾಗೂ ಹೊಳಲ್ಕೆರೆ ಕ್ಷೇತ್ರದ ಎಂ. ಚಂದ್ರಪ್ಪ ಬುಧವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಹರಿಹರದಲ್ಲಿ ಮಾತನಾಡಿರುವ ಶಾಸಕ ಬಿ.ಪಿ. ಹರೀಶ್, 'ನಾಲ್ಕು ಮುಕ್ಕಾಲು ವರ್ಷದಿಂದ ಕ್ಷೇತ್ರದ ಜನತೆ, ಅಧಿಕಾರಿಗಳು ಪ್ರೀತಿ, ವಿಶ್ವಾಸದಿಂದ ನನ್ನನ್ನು ಕಂಡಿದ್ದೀರಿ. ಅದಕ್ಕೆ ನಾನು ಕೃತಜ್ಞ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಹಿನ್ನೆಲೆಯಲ್ಲಿ ನಿಮ್ಮೆಲ್ಲರಲ್ಲೂ ಕ್ಷಮೆ ಕೋರುತ್ತಿದ್ದೇನೆ. ಬುಧವಾರ ಶಾಸಕ ಸ್ಥಾನಕ್ಕೆ ನಾನು ರಾಜಿನಾಮೆ ಸಲ್ಲಿಸಲಿದ್ದು, ನಂತರ ನಾನೊಬ್ಬ ಮಾಜಿ ಶಾಸಕನಾಗಿರುತ್ತೇನೆ. ಮುಂದೆ ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷದ ಬಲವರ್ಧನೆಗೆ ಶ್ರಮಿಸಲಿದ್ದೇನೆ. ಜನತೆ ಆಶೀರ್ವಾದ ನಮ್ಮೆಲ್ಲರ ಮೇಲೂ ಇರಲಿ' ಎಂದಿದ್ದಾರೆ.
ಯಡಿಯೂರಪ್ಪ ಅವರಿಗೆ ಅನ್ಯಾಯವಾಗಿದೆ. ಅವರಿಗೆ ಬೆಂಬಲ ನೀಡುವುದು ನನ್ನ ಕರ್ತವ್ಯ. ಸರ್ಕಾರ ಬೀಳಿಸುವುದು ಅಥವಾ ಉಳಿಸಿಕೊಳ್ಳುವುದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಬಿಟ್ಟ ವಿಚಾರ ಎಂದು ಶಾಸಕ ಎಂ. ಚಂದ್ರಪ್ಪ ಭರಮಸಾಗರದಲ್ಲಿ ಹೇಳಿದ್ದಾರೆ.