ಯವ್ವೀ.. ಯವ್ವೀ.. ನೋಡ್ರಿ ಬೆಳಗಾವಿ
ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 11ರಲ್ಲಿ ಬಿಜೆಪಿ, 7ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಬಾರಿ ಕೆಜೆಪಿ ರಂಗಪ್ರವೇಶದಿಂದ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆ ಇದೆ. ಅದೆಲ್ಲದರ ಒಳನೋಟ ನಿಮಗಾಗಿ..
ಗೋಕಾಕ ಕರದಂಟಿಗೆ ಸೋದರರ ಕಾದಾಟ
ಗೋಕಾಕ ಕ್ಷೇತ್ರ ಕಾಂಗ್ರೆಸ್ನ ರಮೇಶ ಜಾರಕಿಹೊಳಿ, ಬಿಜೆಪಿಯ ಡಾ. ಭೀಮಶಿ ಜಾರಕಿಹೊಳಿ ಕಾದಾಟದ ಕಣ. ಹಾಲಿ ಶಾಸಕ ರಮೇಶ ಜಾರಕಿಹೊಳಿ. ಈ ಬಾರಿಯೂ ಕಾಂಗ್ರೆಸ್ನಿಂದ ಅವರೇ ಹುರಿಯಾಳು. ಕಳೆದ ಬಾರಿ ಬಿಜೆಪಿಯಿಂದ ಡಾ. ಭೀಮಶಿ ಜಾರಕಿಹೊಳಿ ಈ ಬಾರಿ ಸ್ಪರ್ಧಿಸುವುದು ಖಚಿತ. ಆದರೆ, ಕೆಜೆಪಿನಾ, ಬಿಜೆಪಿನಾ ಎಂಬುದು ಪಕ್ಕಾ ಆಗಿಲ್ಲ. ಒಂದು ವೇಳೆ ಕೆಜೆಪಿ ಸೇರಿದರೆ ಬಿಜೆಪಿಯಿಂದ ಆನಂದ ಗೋಟಡಕೆ ಅಥವಾ ಮಹಾಂತೇಶ ತಾಂವಶಿ ಸ್ಪರ್ಧಿಸುವ ಸಾಧ್ಯತೆ ಇದೆ. ಜೆಡಿಎಸ್ನಿಂದ ಅಶೋಕ ಪೂಜಾರಿ ಸ್ಪರ್ಧೆ ಖಚಿತ. ಮಾಜಿ ಶಾಸಕ ಚಂದ್ರಶೇಖರ ನಾಯಕ ಕೂಡ ಕಣಕ್ಕಿಳಿಯಲು ಸಜ್ಜಾಗಿದ್ದು ಯಾವ ಪಕ್ಷದಿಂದ ಎಂಬುದು ನಿರ್ಧಾರವಾಗಿಲ್ಲ. ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದೆ.
ರಾಯಬಾಗ: ಯಾರಿಗೆ ಗೆಲವಿನ ಯೋಗ?
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ರಾಯಬಾಗ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಧುರ್ಯೋದನ ಐಹೊಳೆ. ಈ ಬಾರಿಯೂ ಅವರೇ ಬಿಜೆಪಿಯ ಹುರಿಯಾಳು. ಕಾಂಗ್ರೆಸ್ನಿಂದ ಕಳೆದ ಬಾರಿ 15000 ಮತಗಳ ಅಂತರದಿಂದ ಸೋತಿದ್ದ ಓಂಪ್ರಕಾಶ ಕಣಗಲಿ, ಮಹಾವೀರ ಮೊಹಿತೆ, ಸುಕುಮಾರ ಪಿರಂಗೆ, ಬಿ.ಐ. ಬಾಗೇವಾಡಿ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್ನಿಂದ ಬಾಳಾಸಾಹೇಬ ವಡ್ಡರ ಸ್ಪರ್ಧಿಸುವ ಸಾಧ್ಯತೆ ಇದೆ. ಕೆಜೆಪಿ ಹಾಗೂ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿವೆ. ರಾಯಬಾಗ ಹುಲಿ ಎಂದೇ ಪ್ರಖ್ಯಾತವಾಗಿದ್ದ ಮಾಜಿ ಸಚಿವ ವಸಂತರಾವ್ ಪಾಟೀಲ್ ನಿಧನದ ನಂತರ ನಡೆಯುತ್ತಿರುವ ಮೊದಲ ಚುನಾವಣೆ.
ದಕ್ಷಿಣ: ಜಯದ 'ಅಭಯ' ಯಾರಿಗಣ್ಣ?
ಕ್ಷೇತ್ರ ಮರು ವಿಂಗಡನೆ ಬಳಿಕ ಹುಟ್ಟಿಕೊಂಡ ಬೆಳಗಾವಿ ದಕ್ಷಿಣ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಅಭಯ್ ಪಾಟೀಲ್. ಈ ಬಾರಿಯೂ ಅವರೇ ಬಿಜೆಪಿ ಅಭ್ಯರ್ಥಿ. ಜೆಡಿಎಸ್ನಿಂದ ಬೆಳಗಾವಿ ವಾಣಿಜ್ಯೋದ್ಯಮಿಗಳ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಜವಳಿ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಕಳೆದ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಮೇಯರ್ ಸಂಭಾಜಿ ಪಾಟೀಲ ಈ ಬಾರಿ ಎಂಇಎಸ್ ಸೇರಿದ್ದು ಆ ಪಕ್ಷದಿಂದ ಅವರೇ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಕಾಂಗ್ರೆಸ್ನಿಂದ ಬಸವರಾಜ ಶೇಗಾವಿ, ದೀಪಕ ಪಾಟೀಲ ಹೆಸರು ಕೇಳಿ ಬರುತ್ತಿವೆ. ಕೆಜೆಪಿ ಟಿಕೆಟ್ಗಾಗಿ ಮಾಜಿ ನಗರ ಸೇವಕ ಗುಂಡು ಮಾಸ್ತಮರಡಿ ಹವಣಿಸುತ್ತಿದ್ದಾರೆ.
'ಖಾನಾ'ಪುರ, ಪೀನಾ ಸೇರ್ತಾ ಇಲ್ಲಾ ನಮ್ದುಕೆ!
ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಪ್ರಹ್ಲಾದ ರೇಮಾನಿ. ಕೆಜೆಪಿ ಸೇರ್ಪಡೆ ವದಂತಿ ಇತ್ತು. ಕೊನೆ ಕ್ಷಣದಲ್ಲಿ ನಿಷ್ಠೆ ಪ್ರದರ್ಶಿಸಿದ್ದರಿಂದ ಅವರಿಗೇ ಈ ಬಾರಿ ಟಿಕೆಟ್ ಸಾಧ್ಯತೆ ಇದೆ. ಜತೆಗೆ ಪ್ರಮೋದ ಕೋಚೇರಿ, ಬಾಬುರಾವ್ ದೇಸಾಯಿ, ಸಂಜಯ ಕುಬುಲ ಹೆಸರು ಕೇಳಿ ಬರುತ್ತಿವೆ. ಕಾಂಗ್ರೆಸ್ನ ಅನಿಲ್ ಲಾಡ್ ಈ ಬಾರಿ ಖಾನಾಪುರದಿಂದ ಸ್ಪರ್ಧಿಸಲು ಉತ್ಸುಕರಿದ್ದಾರೆ. ಅಲ್ಲದೇ ಕೆಪಿಸಿಸಿ ಸದಸ್ಯ ರಫೀಕ್ ಖಾನಾಪುರಿ, ಎಂ. ನಾಗರಾಜು, ಡಾ. ಅಂಜಲಿ ನಿಂಬಾಳಕರ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್ನಿಂದ ನಾಸೀರ್ ಬಾಗವಾನ್, ಎಂಇಎಸ್ನಿಂದ ಪುಂಡಲೀಕ ಕಾರತರ, ಅರವಿಂದ ಪಾಟೀಲ್, ಬಾಬು ಪಾಟೀಲ್, ಕೆಜೆಪಿಯಿಂದ ಇರ್ಫಾನ್ ತಾಳಿಕೋಟಿ, ಸಿದ್ದಪ್ಪ ಪಾಟೀಲ್, ಬಿಎಸ್ಆರ್ ಕಾಂಗ್ರೆಸ್ನಿಂದ ನಾಗರಾಜ ಶೀಲವಂತ ಆಕಾಂಕ್ಷಿಗಳು.
ಚಿಕ್ಕೋಡಿ ಹರಿದೀತೆ ಜಯದ ಕೋಡಿ?
ಚಿಕ್ಕೋಡಿ- ಸದಲಗಾ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್ನ ಪ್ರಕಾಶ ಹುಕ್ಕೇರಿ. ಐದನೇ ಬಾರಿ ಗೆಲವಿನ ನಗೆ ಬೀರಲು ಈ ಬಾರಿಯೂ ಅವರೇ ಹುರಿಯಾಳು. ಅಲ್ಲದೇ ತುಕಾರಾಮ್ ಕಿವಡ, ಅಬ್ದುಲ್ ಲತೀಪ್ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ. ಬಿಜೆಪಿಯಿಂದ ಹಾಲಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಅವರ ಸೋದರ ಜಗದೀಶ ಕವಟಗಿಮಠ, ರವಿ ಹಂಪಣ್ಣವರ, ಸುಭಾಷ ಪಾಟೀಲ್ ಟಿಕೆಟ್ಗಾಗಿ ಲಾಭಿ ನಡೆಸಿದ್ದಾರೆ. ಕೆಜೆಪಿಯಿಂದ ಶಶಿಕಲಾ ಜೊಲ್ಲೆ ಆಕಾಂಕ್ಷಿ. ಜಗದೀಶ ಕವಟಗಿಮಠ ಕೆಜೆಪಿ ಸೇರಿದರೂ ಆಶ್ಚರ್ಯವಿಲ್ಲ. ಜೆಡಿಎಸ್ನಿಂದ ಕಲ್ಲಪ್ಪ ಮಗೆನ್ನವರ, ರಾವಸಾಬ ಗುಣಕೆ, ಮಹಾದೇವ ಪಾಟೀಲ್, ಕಿರಣ ಕೋರೆ ಹೆಸರು ಕೇಳಿ ಬರುತ್ತಿವೆ. ಬಿಎಸ್ಪಿಯಿಂದ ವೀರಸಿಂಗ್ ದೇಸಾಯಿ ಘೋರ್ಪಡೆ, ಡಾ. ರಾಜೀವ್ ಕಾಂಬ್ಳೆ, ಸುಧೀರ ಮಾಳಿ, ವಸಂತ ದತ್ತು ಮಾಳಗೆ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ನಿಂದ ಸಿದ್ದಪ್ಪ ಇಟ್ನಾಳೆ ಆಕಾಂಕ್ಷಿ.
ಅರ'ಬಾವಿ' ಜಯದ ನೀರು ಕುಡಿವರ್ಯಾರು?
ಅರಭಾವಿ ಕ್ಷೇತ್ರದ ಒಂದೇ ಅವಧಿಯಲ್ಲಿ ಎರಡು ಚುನಾವಣೆ ಎದುರಿಸಿದೆ. ಜೆಡಿಎಸ್ನಿಂದ ಗೆದ್ದಿದ್ದ ಬಾಲಚಂದ್ರ ಜಾರಕಿಹೊಳಿ 'ಆಪರೇಷನ್ ಕಮಲ'ಕ್ಕೆ ಬಲಿಯಾಗಿ ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲವು ಸಾಧಿಸಿದ್ದರು. ಈ ಬಾರಿಯೂ ಬಿಜೆಪಿಯಿಂದ ಅವರೇ ಅಭ್ಯರ್ಥಿ. ಕಾಂಗ್ರೆಸ್ನಿಂದ ಮಾಜಿ ಸಚಿವ ವಿ.ಎಸ್. ಕೌಜಲಗಿ, ವಿವೇಕರಾವ್ ಪಾಟೀಲ, ರಮೇಶ ಗೋರಲ್ ಹೆಸರು ಕೇಳಿ ಬರುತ್ತಿವೆ. ಕೆಜೆಪಿಯಿಂದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ, ಮಹೇಶ ಅಂಗಡಿ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್ನಿಂದ ಅರವಿಂದ ದಳವಾಯಿ ಆಕಾಂಕ್ಷಿ. ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟ ಮುಂದುವರಿಸಿದೆ.
ಕಿತ್ತೂರಿಗೆ ರಾಯಣ್ಣ ಯಾರು?
ಕೆನರಾ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಕಿತ್ತೂರು ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಸುರೇಶ್ ಮಾರಿಹಾಳ. ಹ್ಯಾಟ್ರಿಕ್ ಗೆಲವಿಗಾಗಿ ಈ ಬಾರಿಯೂ ಅವರೇ ಬಿಜೆಪಿಯ ಹುರಿಯಾಳು. ಕಾಂಗ್ರೆಸ್ನಿಂದ ಮಾಜಿ ಸಚಿವ ಡಿ.ಬಿ. ಇನಾಮದಾರ, ಸಹಕಾರಿ ಧುರೀಣ ಆನಂದ ಅಪ್ಪುಗೋಳ, ಜಿಪಂ ಮಾಜಿ ಸದಸ್ಯ ಶಂಕರ ಹೊಳೆ ಹೆಸರು ಕೇಳಿ ಬರುತ್ತಿವೆ. ಕೆಜೆಪಿಯಿಂದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಹಾಂತೇಶ ದೊಡ್ಡಗೌಡ್ರ ಸ್ಪರ್ಧೆ ಬಹುತೇಕ ಖಚಿತ. ಜೆಡಿಎಸ್ನಿಂದ ನಿಂಗಪ್ಪ ಹಂಜಿ ಆಕಾಂಕ್ಷಿ. ಬಿಎಸ್ಆರ್ ಕಾಂಗ್ರೆಸ್ ಇಲ್ಲೂ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಎರಡು ಬಾರಿ ಬಿಜೆಪಿ ಗೆಲವು ಸಾಧಿಸಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಬೇರು ಗಟ್ಟಿಯಾಗಿದೆ. ಕೊನೆ ಕ್ಷಣದಲ್ಲಿ ಬದಲಾದರೂ ಆಶ್ಚರ್ಯವಿಲ್ಲ.
ಹುಕ್ಕೇರಿ: 'ಕತ್ತಿ'ಗೆ ಗುರಾಣಿ ಹಿಡೀರಿ
ಹುಕ್ಕೇರಿ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಉಮೇಶ ಕತ್ತಿ. ಜನತಾ ಪರಿವಾರದಿಂದ 5 ಬಾರಿ, ಬಿಜೆಪಿಯಿಂದ ಒಂದು ಬಾರಿ ಸೇರಿ ಒಟ್ಟು 6 ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದು ಈ ಬಾರಿ ಸ್ಪರ್ಧಿಸಿ 7ನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ತವಕದಲ್ಲಿದ್ದಾರೆ. ಆದರೆ, ಯಾವ ಪಕ್ಷದಿಂದ ಎಂಬುದು ನಿಗೂಢ. ಕೆಜೆಪಿ ಸೇರಿದರೆ ಬಿಜೆಪಿಯಿಂದ ಮಾಜಿ ಸಚಿವ ಶಶಿಕಾಂತ ನಾಯಿಕ ಸ್ಪರ್ಧೆ ಖಚಿತ. ಇದರೊಂದಿಗೆ ರಾಜೇಂದ್ರ ಪಾಟೀಲ ಹೆಸರು ಚಾಲ್ತಿಯಲ್ಲಿದೆ. ಕಾಂಗ್ರೆಸ್ನಿಂದ ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ, ಜಯಪ್ರಕಾಶ ನಲವಡೆ, ಪ್ರಕಾಶ ದೇಶಪಾಂಡೆ ಹೆಸರು ಕೇಳಿಬರುತ್ತಿವೆ. ಜೆಡಿಎಸ್ನಿಂದ ಬಸವರಾಜ ಮಟಗಾರ, ಮಾಜಿ ಸಚಿವ ಎ.ಬಿ. ಪಾಟೀಲ, ಗಂಗಾಧರಸ್ವಾಮಿ ತವಗಮಠ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೆದಿದೆ.
ಸವದತ್ತಿಯಲ್ಲಿ ಯಾರಿಗೆ ಉಧೋ.. ಉಧೋ..?
ಪರಸಗಡ ಕ್ಷೇತ್ರದ ಹೆಸರು ಬದಲಾದ ಬಳಿಕ ರೂಪುಗೊಂಡ ಸವದತ್ತಿ-ಯಲ್ಲಮ್ಮ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಆನಂದ ಮಾಮನಿ. ಈ ಬಾರಿಯೂ ಅವರೇ ಹುರಿಯಾಳು. ಬಿಎಸ್ವೈ ನೇತೃತ್ವದ ಕೆಜೆಪಿ ಸೇರಿರುವ ಮಾಜಿ ಶಾಸಕ ರಾಜಣ್ಣ ಮಾಮನಿ ಈ ಬಾರಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ನಿಂದ ಮಾಜಿ ಶಾಸಕ ಸುಭಾಷ ಕೌಜಲಗಿ, ಪಂಚನಗೌಡ ದ್ಯಾಮನಗೌಡರ, ರವೀಂದ್ರ ಎಲಿಗಾರ, ಆನಂದ ಚೋಪ್ರಾ ಹಾಗೂ ಮಾಜಿ ಶಾಸಕ ಆರ್.ವಿ. ಪಾಟೀಲ್ ಹೆಸರು ಕೇಳಿಬರುತ್ತಿವೆ. ಜೆಡಿಎಸ್ನಿಂದ ನಿವೃತ್ತ ಜಿಲ್ಲಾಧಿಕಾರಿ ಡಿ.ಬಿ. ನಾಯಕ್ ಸ್ಪರ್ಧೆ ಖಚಿತವಾಗಿದೆ. ಬಿಎಸ್ಆರ್ ಕಾಂಗ್ರೆಸ್ ಇಲ್ಲೂ ಅಭ್ಯರ್ಥಿ ಹುಡುಕಾಟದಲ್ಲಿದೆ.
ಅಥಣಿ: 'ಲಕ್ಷ್ಮಣ' ರೇಖೆ ದಾಟಿದರೆ ಧಣಿ?
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಅಥಣಿ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಲಕ್ಷ್ಮಣ ಸವದಿ. ಈ ಬಾರಿ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ನಿಗೂಢ. ಒಂದು ವೇಳೆ ಸವದಿ ಕೆಜೆಪಿಗೆ ಸೇರಿದರೆ ಅವರೇ ಅಭ್ಯರ್ಥಿಯಾಗುವುದು ಖಚಿತ. ಬಿಜೆಪಿಯಿಂದ ಉಮೇಶ ಬುಂಡೋಡಕರ ಆಕಾಂಕ್ಷಿ. ಕಾಂಗ್ರೆಸ್ನಿಂದ ಮಾಜಿ ಶಾಸಕ ಶಹಜಹಾನ ಡೊಂಗರವಾಂವ, ಮಹೇಶ ಕುಮಟೊಳ್ಳಿ, ರಮೇಶಗೌಡ ಪಾಟೀಲ, ಆರ್.ಬಿ. ಗಂಗಪ್ಪನವರ, ಗಜಾನನ ಮಂಗಸಳಿ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್ನಿಂದ ಸದಾಶಿವ ಕೇದಾರಿ ಬುಟಾಳೆ, ಸಂಗನಗೌಡ ಪಾಟೀಲ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದೆ.
ನಿಪ್ಪಾಣಿ: ಕಾಕಾ 'ಸಾಹೇಬ್'!
ದಶಕಗಳ ಹಿಂದೆ ಎಂಇಎಸ್ ಪ್ರಭಾವ ಹೊಂದಿದ್ದ ನಿಪ್ಪಾಣಿ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್ನ ಭದ್ರಕೋಟೆ. ಹಾಲಿ ಶಾಸಕ ಕಾಂಗ್ರೆಸ್ನ ಕಾಕಾಸಾಹೇಬ್ ಪಾಟೀಲ್. ನಾಲ್ಕನೇ ಬಾರಿ ಗೆಲವಿಗೆ ಈ ಬಾರಿಯೂ ಅವರೇ ಹುರಿಯಾಳು. ಬಿಜೆಪಿಯಿಂದ ಕಳೆದ ಬಾರಿ ಸೋತಿದ್ದ ಶಶಿಕಲಾ ಜೊಲ್ಲೆ ಈ ಬಾರಿ ಕೆಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಹೀಗಾಗಿ ಬಿಜೆಪಿಯಿಂದ ಶುಭಾಂಗಿ ಜೋಶಿ, ಮಾಜಿ ಶಾಸಕ ಸುಭಾಷ ಜೋಶಿ ಹೆಸರುಗಳು ಕೇಳಿ ಬರುತ್ತಿವೆ. ಜೆಡಿಎಸ್ನಿಂದ ಸವಿತಾ ಹೊನಕಾಂಬಳೆ, ಕುಮಾರ ಪಾಟೀಲ್ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೆದಿದೆ. ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದೆ.
'ರಾಮ'ದುರ್ಗ ನವಮಿ ಯಾರಿಗೆ?
ರಾಮದುರ್ಗ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್ನ ಅಶೋಕ ಪಟ್ಟಣ. ಈ ಬಾರಿಯೂ ಅವರೇ ಕಾಂಗ್ರೆಸ್ ಅಭ್ಯರ್ಥಿ. ಕಳೆದ ಬಾರಿ ಬಿಜೆಪಿಯಿಂದ ಸೋತಿದ್ದ ಮಹದೇವಪ್ಪ ಯಾದವಾಡ ಈ ಬಾರಿ ಕೆಜೆಪಿ, ಬಿಜೆಪಿ ಎನ್ನುತ್ತಿದ್ದಾರೆ. ಹೀಗಾಗಿ ಬಿಜೆಪಿಯಿಂದ ರಾಜು ಬೀಳಗಿ, ರವೀಂದ್ರ ಹಿಪ್ಪರಗಿ, ಪಾಂಡುರಂಗ ಪಾಟೀಲ ಹೆಸರು ಕೇಳಿಬರುತ್ತಿವೆ. ಒಂದು ವೇಳೆ ಯಾದವಾಡಗೆಬಿಜೆಪಿ ಟಿಕೆಟ್ ದೊರೆತರೆ, ಬಹುತೇಕ ಬಿಜೆಪಿ ಮುಖಂಡರು, ಅಸಮಾಧಾನಿಗಳು ಕೆಜೆಪಿಗೆ ತೆರಳುವ ಸಾಧ್ಯತೆಗಳಿವೆ. ಜೆಡಿಎಸ್ನಿಂದ ಬಸವರಾಜ ಹಿರೇರೆಡ್ಡಿ, ಪಿ.ಎಫ್. ಪಾಟೀಲ, ಎನ್.ವಿ. ಪಾಟೀಲ ಹೆಸರುಗಳು ಕೇಳಿಬರುತ್ತಿವೆ. ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದೆ.
ಕುಡಚಿಯಲ್ಲಿ ಭಾರಿ 'ಘಾಟು'ಗೆ
ಕ್ಷೇತ್ರ ಮರು ವಿಂಗಡನೆ ಬಳಿಕ ಅಸ್ತಿತ್ವಕ್ಕೆ ಬಂದ ಕುಡಚಿ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್ನ ಶ್ಯಾಮ ಘಾಟಗೆ. ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರು, ಐದನೇ ಬಾರಿಯೂ ತಾವೇ ಶಾಸಕರಾಗಬೇಕೆಂಬ ತವಕದಲ್ಲಿದ್ದಾರೆ. ಹೀಗಾಗಿ ಈ ಬಾರಿಯೂ ಅವರೇ ಅಭ್ಯರ್ಥಿ. ಬಿಜೆಪಿಯಿಂದ ಮಹೇಶ ತಮ್ಮಣ್ಣವರ ಆಕಾಂಕ್ಷಿಯಾಗಿದ್ದಾರೆ. ಆದರೆ, ಬಿಜೆಪಿಯಿಂದ ಟಿಸಿಲೊಡೆದ ಕೆಜೆಪಿಯಿಂದಾಗಿ ಕಾಂಗ್ರೆಸ್ ಲಾಭವಾಗುವ ಸಾಧ್ಯತೆ ಇದೆ. ಜೆಡಿಎಸ್ನಿಂದ ಮಾಜಿ ಶಾಸಕ ಭೀಮಪ್ಪ ಸರಿಕರ, ಶಾಂತಾರಾಮ ಸಣ್ಣಕ್ಕೆ ಹೆಸರು ಕೇಳಿ ಬರುತ್ತಿದ್ದು, ಟಿಕೆಟ್ಗಾಗಿಯೇ ಸ್ಪಲ್ಪ ಪೈಪೋಟಿ ಇದೆ. ಬಿಎಸ್ಆರ್ ಕಾಂಗ್ರೆಸ್ನಿಂದ ನಿವೃತ್ತ ಪಿಎಸ್ಐ ಪಿ. ರಾಜು ಸ್ಪರ್ಧಿಸುವ ಸಾಧ್ಯತೆ ಇದೆ. ಕೆಜೆಪಿ ಅಭ್ಯರ್ಥಿ ಹುಡುಕಾಟದಲ್ಲಿದೆ.
ಕಾಗವಾಡದಲ್ಲಿ 'ಕಾಗೆ' ಹಾರಿಸ್ತಾರಾ?
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾಗವಾಡ ಕ್ಷೇತ್ರದ ಹಾಲಿ ಶಾಸಕ ಬಿಜೆ ಪಿಯ ಭರಮಗೌಡ ಅಲಗೌಡ ಕಾಗೆ. ಒಂದು ಬಾರಿ ಜೆಡಿಎಸ್, ಎರಡು ಬಾರಿ ಬಿಜೆಪಿಯಿಂದ ಗೆದ್ದಿರುವ ಕಾಗೆ 4ನೇ ಬಾರಿ ಗೆಲವಿನ ನಗೆ ಬೀರಲು ಬಿಜೆಪಿಯಿಂದಲೇ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತ. ಕಾಂಗ್ರೆಸ್ನಿಂದ ಕಿರಣಕುಮಾರ್ ಪಾಟೀಲ್, ದಿಗ್ವಿಜಯಸಿಂಗ್ ಪವಾರ್, ಮಾಜಿ ಸಂಸದ ಅಮರಸಿಂಹ ಪಾಟೀಲ್ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್ನಿಂದ ಕೆಂಪವಾಡ ಶುಗರ್ಸ್ ಕಾರ್ಖಾನೆ ಅಧ್ಯಕ್ಷ ಶ್ರೀಮಂತ ಪಾಟೀಲ್ ಸ್ಪರ್ಧಿಸುವುದು ಖಚಿತವಾಗಿದೆ. ಕೆಜೆಪಿಯಿಂದ ಶೀತಲ ಪಾಟೀಲ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಈ ಕ್ಷೇತ್ರದಲ್ಲೂ ಅಭ್ಯರ್ಥಿ ಹುಡುಕಾಟದಲ್ಲಿದೆ.
ಗೆಲವಿನ 'ಉತ್ತರ'ಕ್ಕೆ ನಡೆದಿದೆ ತಡಕಾಟ
ಕ್ಷೇತ್ರ ಮರು ವಿಂಗಡಣೆ ನಂತರ ಹುಟ್ಟಿಕೊಂಡ ಬೆಳಗಾವಿ ಉತ್ತರ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್ನ ಫಿರೋಜ್ ಸೇಠ್. ಈ ಬಾರಿಯೂ ಅವರೇ ಅಭ್ಯರ್ಥಿಯಾಗಲು ಹವಣಿಸುತ್ತಿದ್ದಾರೆ. ಆದರೆ, ಮಾಜಿ ಸಚಿವ ಎ.ಬಿ. ಪಾಟೀಲ, ಉದ್ಯಮಿ ಅನಿಲ ಪೋತದಾರ, ಮಾಜಿ ನಗರ ಸೇವಕ ಲತೀಫಖಾನ್ ಪಠಾಣ ಕೂಡ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಶಂಕರಗೌಡ ಪಾಟೀಲ ಈ ಬಾರಿ ಕೆಜೆಪಿ ಅಭ್ಯರ್ಥಿ. ಹೀಗಾಗಿ ಬಿಜೆಪಿಯಿಂದ ಅನಿಲ ಬೆನಕೆ, ಎಂ.ಬಿ. ಜಿರಲಿ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್ನಿಂದ ಫೈಜುಲ್ಲಾ ಮಾಡಿವಾಲೆ, ಎಂಇಎಸ್ನಿಂದ ದೀಪಕ ದಳವಿ, ಬಿಎಸ್ಆರ್ ಕಾಂಗ್ರೆಸ್ನಿಂದ ಮಾಜಿ ಶಾಸಕ ರಮೇಶ ಕುಡಚಿ ಸ್ಪರ್ಧಿಸುವುದು ಬಹುತೇಕ ಖಚಿತ.
'ಬೈಲ'ಹೊಂಗಲ ಕಡೆ ಯಾರು?
ಬೈಲಹೊಂಗಲ ಕ್ಷೇತ್ರದ ಹಾಲಿ ಶಾಸಕ ಯಡಿಯೂರಪ್ಪ ಸಂಬಂಧಿಯೂ ಆಗಿರುವ ಜಗದೀಶ್ ಮೆಟಗುಡ್. ಈ ಬಾರಿಯ ಸ್ಪರ್ಧೆ ಇನ್ನೂ ನಿಗೂಢವಾಗಿದೆ. ಒಂದು ವೇಳೆ ಕೆಜೆಪಿಯಿಂದ ಕಣಕ್ಕಿಳಿಸಿದರೆ ಬಿಜೆಪಿಯಿಂದ ಕೆಎಲ್ಇ ನಿರ್ದೇಶಕ ವಿಶ್ವನಾಥ್ ಪಾಟೀಲ್ ಸ್ಪರ್ಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್ನಿಂದ ಮಹಾಂತೇಶ ಕೌಜಲಗಿ ಸಹೋದರ ಬಸವರಾಜ್ ಕೌಜಲಗಿ, ಡಾ.ವಿ.ಡಿ. ಸಾಧುನವರ, ಪಿ.ಬಿ. ಮಲ್ಲೂರ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್ನಿಂದ ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ವಿಶ್ವನಾಥ ಪಾಟೀಲ, ಬಿಎಸ್ಆರ್ನಿಂದ ಅರವಿಂದ ಕಾಲಕುಂದ್ರಿಕರ್ ಸ್ಪರ್ಧಿಸಲು ಹವಣಿಸುತ್ತಿದ್ದಾರೆ. ಮೆಟಗುಡ್ ನಡೆಯ ಮೇಲೆ ಉಳಿದ ಪಕ್ಷಗಳ ಹುರಿಯಾಳು ನಿರ್ಧಾರವಾಗುವ ಸಾಧ್ಯತೆ ಇದೆ.
ಯಮಕನ'ಮರ'ಡಿಯಲ್ಲಿ ಹತ್ತುವರಾರು?
ಕ್ಷೇತ್ರ ಮರು ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಯಮಕನಮರಡಿ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲು. ಹಾಲಿ ಶಾಸಕ ಕಾಂಗ್ರೆಸ್ನ ಶಾಸಕ ಸತೀಶ ಜಾರಕಿಹೊಳಿ. ಈ ಬಾರಿಯೂ ಅವರೇ ಕಾಂಗ್ರೆಸ್ ಅಭ್ಯರ್ಥಿ. ಅಲ್ಲದೇ ಸತೀಶ ಜಾರಕಿಹೊಳಿ ವಿರುದ್ಧ ಅವರ ಕಿರಿಯ ಸಹೋದರ, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಲಖನ್ ಜಾರಕಿಹೊಳಿ ಸ್ಪರ್ಧಿಸಲು ತಯಾರಿ ನಡೆಸಿದ್ದು ಯಾವ ಪಕ್ಷದಿಂದ ಎಂಬುದು ನಿಕ್ಕಿಯಾಗಿಲ್ಲ. ಸಹೋದರರ ಸವಾಲ್ ನಡೆಯುವುದು ಮಾತ್ರ ಗ್ಯಾರಂಟಿ. ಬಿಜೆಪಿಯಿಂದ ಲಖನ್ ಜಾರಕಿಹೊಳಿ, ಎಂಎಲ್. ಮುತ್ತಣ್ಣವರ, ಜೆಡಿಎಸ್ನಿಂದ ಬಾಳಾಗೌಡ ಪಾಟೀಲ್ ಹೆಸರು ಕೇಳಿ ಬರುತ್ತಿವೆ. ಬಿಎಸ್ಆರ್ ಕಾಂಗ್ರೆಸ್, ಕೆಜೆಪಿ ಅಭ್ಯರ್ಥಿ ಹುಡುಕಾಟ ನಡೆಸಿವೆ.
ಗ್ರಾಮೀಣ: ಸಂ'ಜಯ' ಸಾಧಿಸುವರೆ?
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಸಂಜಯ ಪಾಟೀಲ. ಈ ಬಾರಿಯೂ ಅವರೇ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ನಿಂದ ಲಕ್ಷ್ಮಿ ಹೆಬ್ಬಾಳಕರ, ಮಾಜಿ ಶಾಸಕ ಎಸ್.ಸಿ. ಮಾಳಗಿ, ಶಿವನಗೌಡ ಪಾಟೀಲ ಹೆಸರು ಕೇಳಿ ಬರುತ್ತಿವೆ. ಜತೆಗೆ ಶಿರಹಟ್ಟಿಯ ಆನಂದ ಗಡ್ಡದೇವರಮಠ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಹವಣಿಸುತ್ತಿದ್ದಾರೆ ಎಂಬ ಮಾತಿದೆ. ಅದಿನ್ನು ಪಕ್ಕಾ ಆಗಿಲ್ಲ. ಎಂಇಎಸ್ನಿಂದ ಮಾಜಿ ಶಾಸಕ ಮನೋಹರ ಕಿಣೇಕರ, ಮಾಜಿ ಮೇಯರ್ ಶಿವಾಜಿ ಸುಂಠಕರ ಪ್ರಮುಖ ಆಕಾಂಕ್ಷಿಗಳು. ಕೆಜೆಪಿಯಿಂದ ಗುತ್ತಿಗೆದಾರ ಗೂಳಪ್ಪ ಹೊಸಮನಿ, ಜೆಡಿಎಸ್ನಿಂದ ರುಕ್ಮೀಣಿ ಗಂಗಣಗೌಡ ಹೆಸರು ಕೇಳಿಬರುತ್ತಿದೆ. ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿಯುವ ಸಾಧ್ಯತೆಗಳು ಇವೆ. ವ್ಯಕ್ತಿ, ಪಕ್ಷಕ್ಕಿಂತ ಇಲ್ಲಿ ಭಾಷಾ ವಿಚಾರವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿರುವುದು ವಿಶೇಷ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.