ಶಾಸಕರ ರಾಜಿನಾಮೆ ಎಂದು?
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗ ಶಾಸಕರ ರಾಜಿನಾಮೆ ಸೋಮವಾರವೋ ಅಥವಾ ಮಂಗಳವಾರವೋ?
ಸೋಮವಾರ ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಗೆ ಖುದ್ದಾಗಿ ತಮ್ಮ ರಾಜಿನಾಮೆ ಪತ್ರ ಸಲ್ಲಿಸುವುದಾಗಿ ಈ ಶಾಸಕರು ಹೇಳಿದ್ದಾರಾದರೂ ಅಂದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.
ಏಕೆಂದರೆ, ಸೋಮವಾರ ಮಧ್ಯಾಹ್ನದ ನಂತರವೇ ಸ್ಪೀಕರ್ ಅವರು ಗೋಣಿಕೊಪ್ಪಲಿನಿಂದ ಹೊರಟು ಬೆಂಗಳೂರಿಗೆ ಬರಲಿದ್ದಾರೆ. ಅವರು ಬೆಂಗಳೂರು ಸೇರುವುದು ತಡವಾದರೆ ಶಾಸಕರು ಮಂಗಳವಾರವೇ ತಮ್ಮ ರಾಜಿನಾಮೆಯನ್ನು ಸ್ಪೀಕರ್‌ಗೆ ಸಲ್ಲಿಸಬೇಕಾಗುತ್ತದೆ. ಕಳೆದ 23ರಂದು 13 ಶಾಸಕರು ರಾಜಿನಾಮೆ ನೀಡಲು ಬಂದಿದ್ದರೂ ಅಂದು ಸ್ಪೀಕರ್ ಇಲ್ಲದ ಕಾರಣ ತಮ್ಮ ರಾಜಿನಾಮೆಯನ್ನು ವಿಧಾನಸಭೆ ಸಚಿವಾಲಯದ ಜಂಟಿ ಕಾರ್ಯದರ್ಶಿಗಳ ಕಚೇರಿಯಲ್ಲಿ ನೀಡಿ ವಾಪಸಾಗಿದ್ದರು. ಆದರೆ, ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂಬ ಕಾರಣದಿಂದಾಗಿ ಈ ಎಲ್ಲಾ ಶಾಸಕರೂ ಸ್ಪೀಕರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ರಾಜಿನಾಮೆ ಸಲ್ಲಿಸಲಿದ್ದಾರೆ.
ಸೋಮವಾರ ಸಂಜೆ ಬೆಂಗಳೂರಿಗೆ: ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು, ವಿರಾಜಪೇಟೆ ಕ್ಷೇತ್ರದ ಶಾಸಕನಾಗಿ ಕ್ಷೇತ್ರದ ಜನತೆಯ ನೆರವಿಗೆ ಮುಂದಾಗಲು ಆದ್ಯತೆ ನೀಡುತ್ತೇನೆ. ಕ್ಷೇತ್ರದ ಜನರೇ ನನ್ನ ಮೊದಲ ಆಯ್ಕೆ. ಹೀಗಾಗಿ ಸೋಮವಾರ ನಡೆಯಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 113 ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ. ಬಳಿಕ ಗೋಣಿಕೊಪ್ಪಲಿನಿಂದ ಬೆಂಗಳೂರಿಗೆ ಹೊರಡುತ್ತಿದ್ದು, ಸಂಜೆಗಷ್ಟೇ ಅಲ್ಲಿ ತಲುಪಲಿದ್ದೇನೆ ಎಂದರು. ಶಾಸಕರ ರಾಜಿನಾಮೆ, ಈ ಕುರಿತು ಉದ್ಭವವಾದ ಗೊಂದಲ ಕುರಿತು ಪ್ರತಿಕ್ರಿಯಿಸಿ, ರಾಜಿನಾಮೆ ನೀಡುವುದು ಕೆಲವರಿಗೆ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಗಿದೆ. ಕಳೆದ 6 ತಿಂಗಳಿನಿಂದ ರಾಜಿನಾಮೆಗಳ ಬಗ್ಗೆ ಹೇಳುತ್ತಲೇ ಬಂದಿದ್ದಾರೆ. ಇದೆಲ್ಲಾ ಪ್ರಚಾರದ ಗಿಮಿಕ್. ರಾಜಿನಾಮೆ ನೀಡಲು ಶಾಸಕರಿಗೆ ನಿಯಮಗಳಿದೆ. ಆ ರೀತಿ ನಿಯಮ ಪಾಲಿಸಿ ರಾಜಿನಾಮೆ ಸಲ್ಲಿಸಬೇಕೇ ವಿನಹ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಲು ರಾಜಿನಾಮೆಯನ್ನು ಪ್ರಹಸನವಾಗಿಸಬಾರದು ಎಂದು ಹೇಳಿದರು.
ರಾಜಿನಾಮೆ ನೀಡುವವರೆಷ್ಟು ಮಂದಿ?: ಕಳೆದ 23ರಂದು 13 ಮಂದಿ ರಾಜಿನಾಮೆಗೆ ಮುಂದಾಗಿದ್ದು, ಮಾರನೇ ದಿನ ಸುನೀಲ್ ವಲ್ಯಾಪುರೆ ಕೂಡ ಇವರೊಂದಿಗೆ ಸೇರಿಕೊಂಡಿದ್ದಾರೆ. ಇದರಿಂದ ಸಂಖ್ಯೆ 14ಕ್ಕೆ ತಲುಪಿದೆ. ಇನ್ನೂ ಒಂದಿಬ್ಬರು ಶಾಸಕರು ಇವರೊಂದಿಗೆ ಸೇರಿಕೊಳ್ಳಲಿದ್ದಾರೆ. ಆದರೆ, ಇಂತಿಷ್ಟೇ ಸಂಖ್ಯೆಯ ಶಾಸಕರು ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೆಜೆಪಿ ಮೂಲಗಳು ಹೇಳಿವೆ. ಈ ಮಧ್ಯೆ ತಾವು ಸಚಿವ ಸ್ಥಾನಕ್ಕಾಗಲೀ, ಶಾಸಕ ಸ್ಥಾನಕ್ಕಾಗಲೀ ರಾಜಿನಾಮೆ ನೀಡುವುದಿಲ್ಲ ಎಂದು ಸಚಿವ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ರಾಜಿನಾಮೆ ನೀಡುವಂತೆ ಯಡಿಯೂರಪ್ಪ ಅವರಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.