ಇನ್ನು ಉಡುಪಿ ಕೃಷ್ಣನೆಡೆಗೆ ಕಾಂಗ್ರೆಸ್ ಪಾದಯಾತ್ರೆ
ಬೆಂಗಳೂರು: ಕೃಷ್ಣೆಯೆಡೆಗಿನ ಪಾದಯಾತ್ರೆಯನ್ನು ಪೂರ್ಣಗೊಳಿಸಿರುವ ಕಾಂಗ್ರೆಸ್ ಇದೀಗ ಎರಡನೇ ಸುತ್ತಿನಲ್ಲಿ ಉಡುಪಿ ಕೃಷ್ಣನ ಕಡೆಗೆ ಮುಖಮಾಡಿದೆ.
ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ ಎಂಬ ಹೆಸರಿನಲ್ಲಿ ಮಂಗಳವಾರ (ಜ.29) ಮಂಗಳೂರಿನ ಉಳ್ಳಾಲದಿಂದ ಪಾದಯಾತ್ರೆ ಆರಂಭವಾಗಲಿದ್ದು, ಒಟ್ಟು 79.4 ಕಿ.ಮೀ. ದೂರದ ಪಾದಯಾತ್ರೆ ಫೆ.1ರಂದು ಉಡುಪಿಯ ಶ್ರೀಕೃಷ್ಣನ ಕ್ಷೇತ್ರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಕೆಪಿಸಿಸಿ ಮಾಧ್ಯಮ ಕೇಂದ್ರದ ಮುಖ್ಯಸ್ಥ ದಿನೇಶ್ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ 9 ಗಂಟೆಗೆ ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಾದಯಾತ್ರೆಗೆ ಚಾಲನೆ ನೀಡುವರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕೇಂದ್ರ ಸಚಿವರು, ಎಐಸಿಸಿ ಮತ್ತು ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಪಾಲ್ಗೊಳ್ಳುವರು.
ಬೆಳಗ್ಗೆ 9 ಗಂಟೆಗೆ ಆರಂಭವಾಗುವ ಮೊದಲ ದಿನದ ಪಾದಯಾತ್ರೆ ಪಣಂಬೂರಿನಲ್ಲಿ ಅಂತ್ಯಗೊಳ್ಳಲಿದೆ. ಮಾರನೇ ದಿನ ಅಂದರೆ, ಜ.30ರಂದು ಪಣಂಬೂರಿನಿಂದ ಹೊರಟು ರಾತ್ರಿ ಮೂಲ್ಕಿಯಲ್ಲಿ ಅಂತ್ಯಗೊಳ್ಳಲಿದೆ. ಜ.31ರಂದು ಮೂಲ್ಕಿಯಿಂದ ಹೊರಟು ಕಾಪು ಬಳಿಯ ಪಾಂಗಾಳದಲ್ಲಿ ತಂಗಲಿದ್ದು, ಫೆ.1ರಂದು ಸಂಜೆ ನಾಲ್ಕು ಗಂಟೆಗೆ ಮಲ್ಪೆಯಲ್ಲಿ ಅಂತ್ಯಗೊಳ್ಳಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.