'ಕೈ' ಕೃಪಾಪೋಷಿತ ಸರ್ಕಾರಕ್ಕೆ ಬೆಂಬಲವಿಲ್ಲ
ರಾಜಕೀಯ ದುಸ್ಥಿತಿಗೆ ಬಿಜೆಪಿಯಷ್ಟೇ ಕಾಂಗ್ರೆಸ್ ಪಕ್ಷವೂ ಕಾರಣ, ಸಿಎಂ ಶೆಟ್ಟರ್ ಯಾರಿಗಾಗಿ ಬಜೆಟ್ ಮಂಡಿಸುತ್ತಾರೋ ತಿಳಿಯದು
ಬೆಂಗಳೂರು: ರಾಜ್ಯದಲ್ಲಿ ಆಡ ಳಿತ ನಡೆಸುತ್ತಿರುವ ಕಾಂಗ್ರೆಸ್ ಕೃಪಾಪೋಷಿತ ಬಿಜೆಪಿ ಸರ್ಕಾರಕ್ಕೆ ಯಾವುದೇ ಕಾರಣಕ್ಕೂಜೆಡಿಎಸ್ ಬೆಂಬಲ ನೀಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ರಾಯಚೂರಿನ ಉದ್ಯಮಿ ಕುಂಟ್ನಾಳ್ ವೆಂಕಟೇಶ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು.
ರಾಜ್ಯದ ರಾಜಕೀಯ ದುಸ್ಥಿತಿಗೆ ಬಿಜೆಪಿಯಷ್ಟೇ ಕಾಂಗ್ರೆಸ್ ಕೂಡ ಕಾರಣ. ಬಿಜೆಪಿ ಕೆಟ್ಟ ಸರ್ಕಾರ ಮುಂದುವರಿಯಲೂ ಕಾಂಗ್ರೆಸ್ ಕಾರಣವಾಗಿದೆ. ಸರ್ಕಾರ ಉರುಳುವ ಹಂತದಲ್ಲಿದ್ದರೂ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲು ಪರೋಕ್ಷವಾಗಿ ನೆರವು ನೀಡಿದೆ. ಈ ಸರ್ಕಾರ ಹೋಗುವುದು ಕಾಂಗ್ರೆಸ್ನವರಿಗೆ ಬೇಕಿಲ್ಲ ಎಂದು ಕಿಡಿ ಕಾರಿದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಯಾರಿಗಾಗಿ ಬಜೆಟ್ ಮಂಡಿಸಲು ಹೊರಟಿದ್ದಾರೋ ತಿಳಿಯದು. ಬಜೆಟ್ ಜಾರಿಗೆ ಬರುವಷ್ಟರಲ್ಲಿ ಚುನಾವಣೆ ಬಂದಿರುತ್ತದೆ. ಮತ್ತೆ ಬರುವ ಸರ್ಕಾರ ಈ ಬಜೆಟ್ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಬಜೆಟ್ ಕೇವಲ ಚುನಾವಣಾ ರಾಜಕೀಯವಷ್ಟೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ರಾಜ್ಯದ ಗೌರವ ಹಾಳು ಮಾಡಿದ್ದಾರೆ. ಜನತೆ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳದೆ ಸರ್ಕಾರ ಉಳಿಸುವ- ಉರುಳಿಸುವ ಆಟವಾಡುತ್ತಿದ್ದಾರೆ. ಈ ಹಂತದಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೂಡ ಜವಾಬ್ದಾರಿ ನಿರ್ವಹಣೆಯಲ್ಲಿ ಸೋತಿದೆ ಎಂದು ಆರೋಪಿಸಿದರು.
ಬಿಜೆಪಿಯ ಈ ದೊಂಬರಾಟದಿಂದ ಜನತೆ ರೋಸಿಹೋಗಿದ್ದಾರೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಿಂದ ರಾಜ್ಯ ತತ್ತರಿಸಿದೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಮಸ್ಯೆಗೆ ಸ್ಪಂದಿಸುವ ಬದಲು ಸರ್ಕಾರದ ಸಚಿವರು ಜಾಹಿರಾತುಗಳನ್ನು ನೀಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.