ತಡೀರಿ.. ಇದು ಹಾವೇರಿ
ಹಾವೇರಿ ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ, ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಈ ಬಾರಿ ಕೆಜೆಪಿ ರಂಗ ಪ್ರವೇಶದಿಂದ ಎಲ್ಲವೂ ಬುಡಮೇಲಾಗುವ ಸಾಧ್ಯತೆ. ಅದ್ಹೇಗೆ ಸಾಧ್ಯ ಎಂದು ಅರಿಯಬೇಕಾ?ಇದನ್ನು ಓದಿ..
'ಬ್ಯಾಡಗಿ' ಮೆಣಸಿನಕಾಯಿ ಯಾರ ಬುಡಕ್ಕೆ?
ಬ್ಯಾಡಗಿ ಮೆಣಸಿನಕಾಯಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೇಮಸ್. ಹಾಲಿ ಶಾಸಕ ಬಿಜೆಪಿಯ ಸುರೇಶಗೌಡ ಪಾಟೀಲ್. ಕ್ಷೇತ್ರ ಮರು ವಿಂಗಡಣೆ ಬಳಿಕ ಸಾಮಾನ್ಯ ಕ್ಷೇತ್ರವಾಗಿದೆ. ಕಾಂಗ್ರೆಸ್‌ನಲ್ಲಿದ್ದ ಸುರೇಶಗೌಡ ಕಳೆದ ಬಾರಿ ಬಿಜೆಪಿಯಿಂದ ಗೆದ್ದಿದ್ದರು. ಈಗ ಕೆಜೆಪಿಯತ್ತ ತಿರುಗಿದ್ದಾರೆ. ಈ ಬಾರಿ ಕೆಜೆಪಿ ಟಿಕೆಟ್‌ಗೆ ಸುರೇಶಗೌಡ, ಎಂಎಲ್‌ಸಿ ಶಿವರಾಜ ಸಜ್ಜನರ ನಡುವೆ ಪೈಪೋಟಿ ಇದೆ. ಬಿಜೆಪಿಯಿಂದ ಶಂಕ್ರಗೌಡ ಪಾಟೀಲ, ಬಸವರಾಜ ಅರಬಗೊಂಡ, ಚಂದ್ರಣ್ಣ ಮುಚ್ಚಟ್ಟಿ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಸವರಾಜ ಶಿವಣ್ಣನವರ, ಎಸ್.ಆರ್. ಪಾಟೀಲ, ಎಸ್.ಸಿ. ಶಿಡೇನೂರ, ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ದಾನಪ್ಪ ಮತ್ತು ಬಿಎಸ್‌ಆರ್ ಕಾಂಗ್ರೆಸ್‌ನಿಂದ ದಾದಾಪೀರ ಬೂಸಿ, ಅಂಬಲಿ ಹಾಗೂ ಜೆಡಿಎಸ್‌ನಿಂದ ಮಲ್ಲಿಕಾರ್ಜುನ ಬೇವಿನಮರದ, ವನಿತಾ ಗುತ್ತಲ ಮೋಹನ ಬಿನ್ನಾಳ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ರಾಣೆಬೆನ್ನೂರಿಗೆ ರಾಜನಾರು 'ಶಿವ'?
ರಾಣೆಬೆನ್ನೂರು ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಶಿವಣ್ಣ ತಿಳವಳ್ಳಿ. ಸಚಿವ ಉದಾಸಿ ಸಂಬಂಧಿ. ಈ ಬಾರಿ ಕೆಜೆಪಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. ರಾಜ್ಯದ ಅಧಿಕೃತ ಕೆಜೆಪಿ ಕಚೇರಿ ಉದ್ಘಾಟನೆಗೊಂಡದ್ದು ಇದೇ ಕ್ಷೇತ್ರದಲ್ಲಿ. ಅಲ್ಲದೇ ಕೆಜೆಪಿ ಸದಸ್ಯತ್ವ ನೋಂದಣಿ ಆರಂಭವಾದದ್ದೂ ಇದೇ ಕ್ಷೇತ್ರದಿಂದಲೇ. ಕೆಜೆಪಿ ಮೊದಲ ಸದಸ್ಯ ಹಾವೇರಿ ಜಿಲ್ಲಾಧ್ಯಕ್ಷ ಮೈಲಪ್ಪ ಗುಡಗೂರ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಕೆ.ಬಿ. ಕೊಳಿವಾಡ, ಕೆಪಿಸಿಸಿ ಸದಸ್ಯೆ ರುಕ್ಮಿಣಿ ಸಾವಕಾರ ಟಿಕೆಟ್‌ಗಾಗಿ ಸೆಣಸಾಟ ನಡೆಸಿದ್ದಾರೆ. ಬಿಜೆಪಿಯಿಂದ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾರತಿ ಜಂಬಗಿ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಎಸ್.ಎಚ್. ರಾಮಲಿಂಗಣ್ಣ ಆಕಾಂಕ್ಷಿಗಳಾಗಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದೆ.
ಹಾವೇರಿಯಲ್ಲಿ ಯಾರ್ರೀ..!
ಕೆಜೆಪಿಗೆ ಜನ್ಮ ನೀಡಿದ, ಉತ್ತರ ಕರ್ನಾಟಕದ ಹೆಬ್ಬಾಗಿಲೆಂದು ಕರೆಯಲ್ಪಡುವ ಹಾವೇರಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಹಾಲಿ ಶಾಸಕ ಬಿಜೆಪಿಯ ನೆಹರು ಓಲೇಕಾರ. ಅವರು ಕೆಜೆಪಿ ಸೇರಿ ಸ್ಪರ್ಧೆಗೆ ಅಣಿಯಾಗಿದ್ದಾರೆ. ಬಿಜೆಪಿಯಿಂದ ಡಾ. ಮಲ್ಲೇಶಪ್ಪ ಹರಿಜನ, ಬಸವರಾಜ ಪೇಲನವರ ಹೆಸರು ಕೇಳಿ ಬರುತ್ತಿವೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ರುದ್ರಪ್ಪ ಲಮಾಣಿ, ಜಿಪಂ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಜಗದೀಶ ಬೆಟಗೇರಿ, ಈರಪ್ಪ ಲಮಾಣಿ, ನಿವೃತ್ತ ಎಸ್ಪಿ ಶಿವಕುಮಾರ ತಾವರಗಿ ಟಿಕೆಟ್‌ಗಾಗಿ ಸ್ಪರ್ಧೆ ನಡೆಸಿದ್ದಾರೆ. ಜೆಡಿಎಸ್‌ನಿಂದ ದಲಿತ ಮುಖಂಡ ಡಿ.ಎಸ್.ಮಾಳಗಿ, ಕಮಲಾ ನಾಯಕ, ಶ್ರೀಪಾದ ಬೆಟಗೇರಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಡಾ.ಸಂಜಯ ಡಾಂಗೆ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ಹಾನಗಲ್ಲ 'ಉದಾಸಿ'ನ ಮಾಡುವಂತಿಲ್ಲ!
ಬಿಎಸ್‌ವೈ ಬೆಂಬಲಿಗರಲ್ಲಿ ಎದ್ದು ಕಾಣುವ ಮೊದಲ ಹೆಸರೇ ಹಾನಗಲ್ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಸಿ.ಎಂ. ಉದಾಸಿ. ಕೆಜೆಪಿ ಉದಯಕ್ಕೆ ನಾಂದಿ ಹಾಡಿದ ಜಿಲ್ಲಾ ರಾಜಕಾರಣದ ಕೀಲಿ ಕೈ ಇರುವುದು ಇವರ ಕೈಯಲ್ಲೇ. ಕೆಜೆಪಿಯಿಂದ ಉದಾಸಿ ಇಲ್ಲವೇ ಅವರ ಪುತ್ರ ಶಿವಕುಮಾರ್ ಉದಾಸಿ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಜೆಪಿಯಿಂದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ ಅಥವಾ ಜಿಪಂ ಸದಸ್ಯ ಬಸವರಾಜ ಹಾದಿಮನಿ ಕಣಕ್ಕಿಳಿಯಬಹುದು. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಮನೋಹರ ತಹಸೀಲ್ದಾರ್, ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಜಿ.ಎಸ್. ಗಂಟೇರ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.
ಹಿರೇಕೆರೂರಿನಲ್ಲಿ 'ಕೌರವ' ಅತಂತ್ರ!
ಹಿರೇಕೆರೂರು ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ಬಿ.ಸಿ. ಪಾಟೀಲ್. ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ ಹಿರೇಕೆರೂರಿನಲ್ಲಿ ಮಾತ್ರ ಕಾಂಗ್ರೆಸ್ ಗೆಲವಿನ ನಗೆ ಬೀರಿತ್ತು. ಈ ಬಾರಿಯೂ ಗೆಲವು ಸಾಧಿಸಿ ಹ್ಯಾಟ್ರಿಕ್ ಸಾಧನೆಗೆ ಪಾಟೀಲ್ ಸಜ್ಜಾಗಿದ್ದಾರೆ. ಆದರೆ, ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಸೇರುವ ವದಂತಿ ಇದೆ. ಒಂದು ವೇಳೆ ಅವರು ಕಾಂಗ್ರೆಸ್‌ಗೆ ಬಂದರೆ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಆದರೆ ಇನ್ನೂ ಸ್ಪಷ್ಟವಾಗಿಲ್ಲ. ಬಿಜೆಪಿಯಲ್ಲಿ ಗುರುತಿಸಿಕೊಂಡು ಈಗ ಕೆಜೆಪಿಗೆ ಸೇರಿರುವ ಮಾಜಿ ಶಾಸಕ ಯು.ಬಿ. ಬಣಕಾರ ಕೆಜೆಪಿಯ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಬಿಜೆಪಿಯಿಂದ ಪಾಲಾಕ್ಷಗೌಡ ಪಾಟೀಲ ಸ್ಪರ್ಧಿಸುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ಬಿ.ಎಚ್.ಬನ್ನಿಕೋಡ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ಬೊಮ್ಮಾಯಿ ನಡೆ ಬಲ್ಲವರಾರು?
ಶಿಗ್ಗಾಂವಿ- ಸವಣೂರು ಪ್ರತ್ಯೇಕ ತಾಲೂಕುಗಳಾದರೂ ಒಂದೇ ಕ್ಷೇತ್ರ. ಹಾಲಿ ಶಾಸಕ ಬಿಜೆಪಿಯ ಬಸವರಾಜ ಬೊಮ್ಮಾಯಿ. ಈ ಬಾರಿ ಬೊಮ್ಮಾಯಿ ಬಿಜೆಪಿಯಿಂದ ಸ್ಪರ್ಧಿಸುವುದು ಗ್ಯಾರಂಟಿ ಇಲ್ಲ. ಕೆಜೆಪಿ ಅಥವಾ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಇದೆ. ಕೆಜೆಪಿ ಸೇರಿದರೆ ಅವರೇ ಅಭ್ಯರ್ಥಿ. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಅಥವಾ ಮಾಜಿ ಶಾಸಕ ರಾಜಶೇಖರ ಸಿಂಧೂರ ಹೆಸರು ಕೇಳಿ ಬರುತ್ತಿವೆ. ಕಾಂಗ್ರೆಸ್‌ನಿಂದ ಮಾಜಿ ಸಂಸದ ಮಂಜುನಾಥ ಕುನ್ನೂರ ಅವರ ಮಗ ರಾಜು ಕುನ್ನೂರ, ಅಜ್ಜಂಪೀರ ಖಾದ್ರಿ ನಡುವೆ ಟಿಕೆಟ್‌ಗಾಗಿ ತಿಕ್ಕಾಟ ನಡೆದಿದೆ. ಜೆಡಿಎಸ್‌ನಿಂದ ಎಂ.ಎಚ್.ಬೆಂಡಿಗೇರಿ, ಪ್ರೇಮಾ ಪಾಟೀಲ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಬಿಎಸ್‌ಆರ್ ಕಾದಾಟಕ್ಕೆ ಸಿದ್ಧವಾಗಿಲ್ಲ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.