ಚಿಕ್ಕಬಳ್ಳಾಪುರ ಸಮರ
ಚಿಕ್ಕಬಳ್ಳಾಪುರ ಜಿಲ್ಲೆಯ 5 ಕ್ಷೇತ್ರಗಳಲ್ಲಿ 4ರಲ್ಲಿ ಕಾಂಗ್ರೆಸ್, 1ರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಈ ಬಾರಿಯ ಕದನ ಕುತೂಹಲ ತಾರಕಕ್ಕೇರಿದ್ದು ಅದರ ವಿಸ್ತೃತ ಮಾಹಿತಿ ಇಲ್ಲಿದೆ...
ಶಿಡ್ಲಘಟ್ಟ: ಯಾರಿಗೆ ಪಟ್ಟ?
ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಾಗಿರುವ ಶಿಡ್ಲಘಟ್ಟ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ವಿ. ಮುನಿಯಪ್ಪ. ಕಾಂಗ್ರೆಸ್‌ನಿಂದ ಈ ಬಾರಿಯೂ ಅವರೇ ಹುರಿಯಾಳು. ಜೆಡಿಎಸ್‌ನಿಂದ ಜಿಲ್ಲಾಧ್ಯಕ್ಷ ಎಂ.ರಾಜಣ್ಣ, ಕೆಜೆಪಿಯಿಂದ ಶಿವಕುಮಾರಗೌಡ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಆಡಳಿತಾರೂಢ ಬಿಜೆಪಿಗೆ ಈ ಕ್ಷೇತ್ರದಲ್ಲಿ ಅಭ್ಯರ್ಥಿಯೇ ಇಲ್ಲ. ಹೀಗಾಗಿ ಇತರೆ ಪಕ್ಷದಲ್ಲಿನ ಅತೃಪ್ತರ ಹುಡುಕಾಟದಲ್ಲಿದೆ. ಬಿಎಸ್‌ಆರ್ ಕಾಂಗ್ರೆಸ್ ಸದ್ಯಕ್ಕೆ ಈ ಕ್ಷೇತ್ರದಲ್ಲೂ ಲೆಕ್ಕಕ್ಕಿಲ್ಲ. ಇಲ್ಲಿ ಕಾಂಗ್ರೆಸ್ ಬಲಿಷ್ಠವಾಗಿರುವುದರಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ಒಂದು ವೇಳೆ ಬಿಜೆಪಿ ಕೂಡ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ಚಿಂತಾಮಣಿಯಲ್ಲಿ ಗೆಲವಿನ ಚಿಂತೆ
ಚಿಂತಾಮಣಿ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂಬ ವಾತಾವರಣ ಇದೆ. ಹಾಲಿ ಶಾಸಕ ಕಾಂಗ್ರೆಸ್‌ನ ಡಾ.ಎಂ.ಸಿ. ಸುಧಾಕರ್. ಹಿಂದಿನಿಂದಲೂ ಈ ಕ್ಷೇತ್ರದಲ್ಲಿ ಜೆಡಿಎಸ್‌ನ ಗಂಗಿರೆಡ್ಡಿ (ಕೆ.ಎಂ. ಕೃಷ್ಣಾರೆಡ್ಡಿ ಅವರ ಮಾವ) ಮತ್ತು ಕಾಂಗ್ರೆಸ್‌ನ ಚೌಡರೆಡ್ಡಿ (ಶಾಸಕರ ತಂದೆ) ಪ್ರಭಾವಿ ಕುಟುಂಬದವರ ನಡುವೆಯೇ ತೀವ್ರ ಸ್ಪರ್ಧೆ ನಡೆದುಕೊಂಡು ಬರುತ್ತಿದೆ. ಕಳೆದ ಚುನಾವಣೆಯಲ್ಲಿ ಸುಧಾಕರ್‌ಗೆ ಮಾಜಿ ಗೃಹ ಸಚಿವ ಕೆ.ಎಂ. ಕೃಷ್ಣಾರೆಡ್ಡಿ ಪ್ರತಿಸ್ಪರ್ಧಿಯಾಗಿದ್ದು ಇದೀಗ ದಿವಂಗತರಾಗಿದ್ದಾರೆ. ಈ ಬಾರಿ ಅವರ ಪುತ್ರಿ ವಾಣಿ ಕೃಷ್ಣಾರೆಡ್ಡಿ ಅಥವಾ ಸಮಾಜ ಸೇವಕ ಕೃಷ್ಣಾರೆಡ್ಡಿ ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದಾರೆ. ಬಿಜೆಪಿ, ಕೆಜೆಪಿ ಈ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಹಣಾಹಣಿ
ಬಾಗೇಪಲ್ಲಿ ಸ್ಟಾರ್ ವಾರ್!
ಆಂಧ್ರದ ಗಡಿಯಂಚಿನಲ್ಲಿರುವ ಬಾಗೇಪಲ್ಲಿ ಕ್ಷೇತ್ರ ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲೂಕುಗಳನ್ನೊಳಗೊಂಡಿದೆ. ಹಾಲಿ ಶಾಸಕ ಕಾಂಗ್ರೆಸ್‌ನ ಎನ್. ಸಂಪಂಗಿ. ರಾಜ್ಯದಲ್ಲೇ ಸಿಪಿಐಎಂ ಬಲಿಷ್ಠವಾಗಿದ್ದು ಈ ಕ್ಷೇತ್ರದಲ್ಲಿ ಮಾತ್ರ. ಹೀಗಾಗಿ ಸಿಪಿಎಂನಿಂದ ಜಿ.ವಿ.ಶ್ರೀರಾಮರೆಡ್ಡಿ ಹಾಗೂ ಸಮಾಜ ಸೇವಕ ಎಸ್.ಎನ್. ಸುಬ್ಬಾರೆಡ್ಡಿ ಪ್ರಬಲ ಸ್ಪರ್ಧಿಗಳು. ಜತೆಗೆ ಇನ್ನೂ ನಾಲ್ಕಾರು ಹೆಸರು ಕೇಳಿ ಬರುತ್ತಿದ್ದು ಟಿಕೆಟ್ ಪಕ್ಕಾ ಆಗಿಲ್ಲ. ಬಿಎಸ್‌ವೈ ನೇತೃತ್ವದ ಕೆಜೆಪಿಯಿಂದ ಚಿತ್ರ ನಿರ್ಮಾಪಕ ಮನೋಹರ್ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಬಿಜೆಪಿಯಿಂದ ಚಿತ್ರನಟ ಸಾಯಿಕುಮಾರ್ ಹೆಸರು ಕೇಳಿ ಬರುತ್ತಿದೆ. ಆದರೆ, ಇತರೆ ಪಕ್ಷಗಳ ತಂತ್ರಗಾರಿಕೆ ನೋಡಿಕೊಂಡು ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ. ಬಿಎಸ್‌ಆರ್ ಕಾಂಗ್ರೆಸ್ ಸದ್ಯಕ್ಕೆ ಇಲ್ಲೂ ಲೆಕ್ಕಕ್ಕಿಲ್ಲ.
'ಗೌರಿ'ಬಿದನೂರಿನಲ್ಲಿ ಗಣೇಶ ಯಾರು 'ಶಿವ'?
ಗೌರಿಬಿದನೂರಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದರೂ ಕಾಂಗ್ರೆಸ್‌ಗೆ ಕಾಂಗ್ರೆಸ್ಸೇ ಶತ್ರು! ಹಾಲಿ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ವಿರುದ್ಧ ಜಿಲ್ಲಾಧ್ಯಕ್ಷ ವೇಣುಗೋಪಾಲರೆಡ್ಡಿ ಹಲ್ಲು ಮಸಿಯುತ್ತಿದ್ದಾರೆ. ಇಬ್ಬರೂ ಟಿಕೆಟ್ ಆಕಾಂಕ್ಷಿಗಳು. ಪರಸ್ಪರರು ವಿರೋಧಿಗಳೊಂದಿಗೆ ಕೂಡಿಯಾದರೂ ತಮ್ಮ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸುವ ಹುನ್ನಾರದಲ್ಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ, ಜೆಡಿಎಸ್‌ನಿಂದ ಮಾಜಿ ಶಾಸಕ ಎಸ್.ವಿ.ಅಶ್ವತ್ಥನಾರಾಯಣರೆಡ್ಡಿ ಅಥವಾ ಜ್ಯೋತಿರೆಡ್ಡಿ ಸ್ಪರ್ಧಿಸಲಿದ್ದಾರೆ. ಇನ್ನು ಸಮಾಜ ಸೇವಕರು ಕೆಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ: ದೊಡ್ಡ ಗೆಲವಿಗೆ ಕಾದಾಟ?
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್‌ನ ಕೆ.ಪಿ. ಬಚ್ಚೇಗೌಡ. 2008ಕ್ಕಿಂತಲೂ ಮುಂಚೆ ಇದು ಕಾಂಗ್ರೆಸ್‌ನ ಭದ್ರಕೋಟೆ. ಆದರೆ, ಆಂತರಿಕ ಕಚ್ಚಾಟದಿಂದ ಈಗ ಆ ಖದರ್ ಇಲ್ಲ. ಈ ಬಾರಿ ಕಾಂಗ್ರೆಸ್‌ನಿಂದ ಜಿಲ್ಲಾಧ್ಯಕ್ಷ ಎಂ. ಆಂಜಿನಪ್ಪ, ಶ್ರೀಲಂಕಾ ವಾಣಿಜ್ಯ ಪ್ರತಿನಿಧಿ, ಕೆಪಿಸಿಸಿ ಸದಸ್ಯರೂ ಆಗಿರುವ ಡಾ. ಕೆ.ಸುಧಾಕರ್ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್‌ನಿಂದ ಕೆ.ಪಿ.ಬಚ್ಚೇಗೌಡ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಬಿಜೆಪಿಯಿಂದ ಮಾಜಿ ಸಂಸದ ಆರ್.ಎಲ್. ಜಾಲಪ್ಪ ಅವರ ಅಳಿಯ ಜಿ.ಎಚ್. ನಾಗರಾಜ್ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಸದ್ಯಕ್ಕೆ ಲೆಕ್ಕಕ್ಕಿಲ್ಲ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.