ಬಿಜೆಪಿ-ಜೆಡಿಎಸ್ ಮೈತ್ರಿಗೆ ಹಿಂಬಾಗಿಲ ಸಂಧಾನ?
ಕಾಲ ಸರಿದಂತೆ ರಾಜಕೀಯವೂ ಬದಲಾಗುತ್ತಿದೆ. ಶತ್ರುವಾಗಿದ್ದ ಬಿಜೆಪಿ-ಜೆಡಿಎಸ್ ಮತ್ತೆ ಸಖ್ಯಕ್ಕೆ ವೇದಿಕೆಯೊಂದು ಸಿದ್ಧವಾಗುತ್ತಿದೆ...
ಕ.ಪ್ರ.ವಾರ್ತೆ ಮಂಗಳೂರು ಮಾ.21
ಕಾಲ ಸರಿದಂತೆ ರಾಜಕೀಯವೂ ಬದಲಾಗುತ್ತಿದೆ. ಶತ್ರುವಾಗಿದ್ದ ಬಿಜೆಪಿ-ಜೆಡಿಎಸ್ ಮತ್ತೆ ಸಖ್ಯಕ್ಕೆ ವೇದಿಕೆಯೊಂದು ಸಿದ್ಧವಾಗುತ್ತಿದೆ. ಎಲ್ಲವೂ ಸರಿಯಾದರೆ ಇದೇ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಜತೆಯಾಗಿ ಹೋರಾಡಲಿವೆ!
ಬಹಿರಂಗವಾಗಿ ಬಿಜೆಪಿ-ಜೆಡಿಎಸ್ ಮುಖಂಡರು ಏನು ಬೇಕಾದರೂ ಹೇಳಲಿ, ಜೆಡಿಎಸ್-ಬಿಜೆಪಿ ಮೈತ್ರಿಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಇದರ ನೇತೃತ್ವ ವಹಿಸಿರುವುದು ಸಂಘಪರಿವಾರ. ಮಾಜಿ ಮುಖ್ಯಮಂತ್ರಿಯೊಬ್ಬರು ಸಂಧಾನಕಾರ. ಸಂಘಪರಿವಾರ ಸಂಘಟನೆಯೊಂದಕ್ಕೆ ಈ ಕುರಿತು ಉನ್ನತ ಮಟ್ಟದಿಂದ ಸೂಚನೆ ಬಂದಿದ್ದು, ಯಾವಾಗ ಬೇಕಾದರೂ ಮೈತ್ರಿ ಅಂತಿಮಗೊಳ್ಳಬಹುದು ಎಂಬ ಸಂದೇಶ ರವಾನೆಯಾಗಿದೆ. ಇದನ್ನು ಸಂಘ ಪರಿವಾರ ಬಹಿರಂಗವಾಗಿ ಹೇಳುತ್ತಿಲ್ಲವಾದರೂ ತೆರೆಮರೆಯಲ್ಲಿ ಇಲ್ಲದ ಕಸರತ್ತು ನಡೆಯುತ್ತಿದೆ.
ಅಭಿವೃದ್ಧಿ ಮಂತ್ರ ಪಠಿಸುತ್ತಿದ್ದ ಬಿಜೆಪಿಗೆ ಸ್ಥಳೀಯ ಚುನಾವಣೆಯಲ್ಲಿ ಮತದಾರ ಒಲವು ತೋರಿಸಿಲ್ಲ. ಸ್ಥಳೀಯಾಡಳಿತ ಚುನಾವಣೆ ಮುಕ್ತಾಯ ಬೆನ್ನಿಗೇ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಹಾಗಾಗಿ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ವಿಧಾನಸಭಾ ಚುನಾವಣೆಗೆ ಮೆಟ್ಟಿಲು ಅಲ್ಲ ಎಂದು ಬಿಜೆಪಿ ನಾಯಕರು ಎಷ್ಟು ಹೇಳಿದರೂ ಅವರಲ್ಲಿ ಒಳಗೊಳಗೇ ಸೋಲಿನ ಭಯ ಆವರಿಸಿದೆ. ಇದೇ ಹಿನ್ನೆಲೆಯಲ್ಲಿ ಬಿಜೆಪಿಯ ಮಾನ ಉಳಿಸಲು ಸಂಘಪರಿವಾರ ಜೆಡಿಎಸ್ ಮಂತ್ರ ಪಠಿಸಲು ಮುಂದಾಗಿದೆ.
ಸಂಧಾನಕ್ಕೆ ಮಾಜಿ ಸಿಎಂ: ಕಳೆದ ನಾಲ್ಕು ದಿನಗಳ ಹಿಂದೆ ಸಂಘಪರಿವಾರದ ಪ್ರಮುಖರು ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಇದರ ಸಂಧಾನಕ್ಕೆ ಅಟ್ಟಿದ್ದಾರೆ. ಜೆಡಿಎಸ್ ವರಿಷ್ಠರ ಜತೆ ಮಾತುಕತೆ ನಡೆಸಿ, ಟಿಕೆಟ್ ಹಂಚಿಕೆಗೂ ಮುನ್ನವೇ ಮೈತ್ರಿ ಏರ್ಪಡಿಸಬೇಕು. ಜೆಡಿಎಸ್ ಹೇಗೂ ತನ್ನ ಎದುರಾಳಿ ಕಾಂಗ್ರೆಸ್ ಎನ್ನುತ್ತಿದೆ. ಬಿಜೆಪಿಗೂ ಎದುರಾಳಿ ಕಾಂಗ್ರೆಸ್ ವಿನಾ ಜೆಡಿಎಸ್ ಅಲ್ಲ. ಹಿಂದೆ ಆಗಿದ್ದೆಲ್ಲವನ್ನು ಮರೆತು ಮತ್ತೆ ಒಂದಾಗಿ ಕಾಂಗ್ರೆಸ್ ಅನ್ನು ಬಗ್ಗುಬಡಿಯಲು ರಣತಂತ್ರ ರೂಪಿಸಬೇಕು ಎಂಬ ಸಂದೇಶವನ್ನು ಜೆಡಿಎಸ್‌ಗೆ ತುರುಕುವುದು ಸಂಘಪರಿವಾರದ ಯೋಚನೆ.
ಬದಲಾದ ಪರಿಸ್ಥಿತಿಯಲ್ಲಿ ಈ ಸೂತ್ರವನ್ನು ಜೆಡಿಎಸ್ ತಳ್ಳಿ ಹಾಕದು ಎಂಬ ವಿಶ್ವಾಸ ಸಂಘಪರಿವಾರದ ನಾಯಕರಲ್ಲಿದೆ. ಇದು ಯಶಸ್ವಿಯಾದರೆ ಜೆಡಿಎಸ್-ಬಿಜೆಪಿ ಪರಸ್ಪರ ಹೊಂದಾಣಿಕೆಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಒಂದು ವೇಳೆ ಇದಕ್ಕೂ ಜೆಡಿಎಸ್ ವರಿಷ್ಠರು ಒಪ್ಪದಿದ್ದರೆ ಚುನಾವಣೋತ್ತರ ಮೈತ್ರಿ ಬಗ್ಗೆಯೂ ಪ್ರಸ್ತಾಪಿಸುವಂತೆ ಸಂಘಪರಿವಾರ ಉಪದೇಶಿಸಿದೆ ಎನ್ನಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.